Advertisement

ಭತ್ತ ಕೃಷಿಯಲ್ಲಿ ಭರವಸೆ ಮೂಡಿಸಿದ ಗ್ರಾಮೀಣ ರೈತ

10:11 AM Jan 07, 2020 | mahesh |

ಹೆಸರು: ರಾಘವೇಂದ್ರ ದೇವಾಡಿಗ
ಏನೇನು ಕೃಷಿ: ಭತ್ತ,ಅಡಿಕೆ, ತೆಂಗು
ಎಷ್ಟು ವರ್ಷ ಕೃಷಿ: 18
ಪ್ರದೇಶ : 3.5 ಎಕರೆ
ಸಂಪರ್ಕ: 9900768679

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸಿದ್ದಾಪುರ: ಕಠಿನ ಪರಿಶ್ರಮದಿಂದ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತೋರಿಸಿದ ಹೆಗ್ಗಳಿಕೆ ಕುಂದಾಪುರ ತಾಲೂಕು ಹಾಲಾಡಿಯ ಕೃಷಿಕ ರಾಘವೇಂದ್ರ ದೇವಾಡಿಗ (39) ಅವರದ್ದಾಗಿದೆ. ರಾಘವೇಂದ್ರ ದೇವಾಡಿಗ ಅವರು ತಮ್ಮ 3.5 ಎಕರೆ ಭೂಮಿಯಲ್ಲಿ ಭತ್ತದ ಕೃಷಿಯಲ್ಲಿ ಆವಿಷ್ಕಾರ ಮಾಡುವ ಮೂಲಕ ಹಡಿಲು ಭೂಮಿಗೆ ಜೀವ ಕಳೆ ತುಂಬಿದರು. ಮೂಲತಃ ಕೃಷಿ ಮನೆತನದಿಂದ ಬೆಳೆದು ಬಂದ ಅವರು 18 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಭತ್ತ ಬೆಳೆಯೊಂದಿಗೆ ಅಡಿಕೆ, ತೆಂಗು ಬೆಳೆಯುತ್ತಿದ್ದಾರೆ. ಭತ್ತದ ತಳಿಗಳಲ್ಲಿ ಎಂ.ಒ.13 (ಪವಿತ್ರ) ಹೊಸ ತಳಿಯನ್ನು ಆವಿಷ್ಕಾರ ಮಾಡುವ ಮೂಲಕ ಸಾಧಕ ಕೃಷಿಕರಾಗಿದ್ದಾರೆ. ಭತ್ತದ ಬೇಸಾಯದಲ್ಲಿ ಕ್ರಾಂತಿಕಾರಕವಾಗಿ ಮೂಡಿಬಂದ ಎಂ.ಒ.4 ತಳಿಗೆ ಪರ್ಯಾಯವಾದ ತಳಿಯೊಂದರ ಶೋಧನೆಯಲ್ಲಿದ್ದ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಘವೇಂದ್ರ ದೇವಾಡಿಗ ಅವರು ಎಂ.ಒ.13 ಹೊಸ ತಳಿಯನ್ನು ಆವಿಷ್ಕರಿಸಿ, ಭರವಸೆ ಮೂಡಿಸಿದ್ದಾರೆ. ಹಾಲಾಡಿಯಲ್ಲಿ ಪ್ರಯೋಗಕ್ಕೆ ಅಳವಡಿಸಲಾದ ಈ ತಳಿ ಎಂ.ಒ.4ಗೆ ಪರ್ಯಾಯ ತಳಿ ಎನ್ನುವುದು ಕೂಡ ಸಾಬೀತಾಗಿದೆ.

ಪುಷ್ಟಿದಾಯಕ ಭತ್ತ
ರಾಘವೇಂದ್ರ ದೇವಾಡಿಗ ಅವರು ಪ್ರಥಮವಾಗಿ ಹಾಲಾಡಿ ಭಾಗದಲ್ಲಿ ಈ ತಳಿಯನ್ನು ನಾಟಿ ಮಾಡಿ, ಬೀಜೋತ್ಪಾದನೆಯ ಮೂಲಕ ಈ ಭಾಗಕ್ಕೆ ಮುಂಗಾರು- ಹಿಂಗಾರು ಎರಡು ಋತುವಿಗೂ ಒಗ್ಗಿಕೊಳ್ಳುತ್ತದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಬಾರಿ ಮುಂಗಾರು ಹಂಗಾಮಿನಂತೆ ಸುಗ್ಗಿ ಬೆಳೆಯಲ್ಲೂ ಕೂಡ ಉತ್ತಮ ಫಸಲು ನೀಡಿರುವ ಎಂ.ಒ.4 ತಳಿ ಯಂತೆ ಕಾಣುವ ಈ ತಳಿಯಲ್ಲಿ ಜೊಳ್ಳು ಕಡಿಮೆ. ಈ ಭತ್ತ ಪುಷ್ಟಿದಾಯಕ. ಯಂತ್ರ ನಾಟಿ ಹಾಗೂ ಸಾಲು ನಾಟಿ ಯಲ್ಲೂ ಉತ್ತಮ ಇಳುವರಿ ನೀಡುವ ಈ ತಳಿ ಶ್ರೀ ಪದ್ಧತಿ ಗೂ ಸೂಕ್ತ ಎನ್ನಲಾಗಿದೆ. ವಿವಿಧ ನಾಟಿ ಯಂತ್ರೋಪಕರಣಗಳು ಇವರಲ್ಲಿವೆ.

ಉತ್ತಮ ಇಳುವರಿ
ರಾಘವೇಂದ್ರ ದೇವಾಡಿಗ ಭತ್ತದ ಕೃಷಿಯಲ್ಲಿ 18 ವರ್ಷ ಎಂ.ಒ.4 ತಳಿ ಬಳಕೆ ಮಾಡಿಕೊಂಡು ಬರುತ್ತಿದ್ದರು. ಆರು ವರ್ಷಗಳ ಹಿಂದೆ ಬೇಸಗೆ ಕಾಲದಲ್ಲಿ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದಿಂದ 200 ಗ್ರಾಂ. ಎಂ.ಒ.13 (ಪವಿತ್ರ) ತಳಿಯ ಭತ್ತದ ಬೀಜವನ್ನು ಪಡೆದು ಬಿತ್ತನೆ ಮಾಡಿದರು. ಮುಂಗಾರು ಕೃಷಿಯಲ್ಲಿ ಭತ್ತದ ಸಸಿ ಗಳನ್ನು ನಾಟಿ ಮಾಡಿದರು. 4 ತಿಂಗಳ ಅವಧಿಯಲ್ಲಿ 57 ಕೆ.ಜಿ. ಭತ್ತದ ಇಳುವರಿಯನ್ನು ಪಡೆದರು. ಹಿಂಗಾರು ಭತ್ತದ ಕೃಷಿಯಲ್ಲಿ 45 ಸೆಂಟ್ಸ್‌ ವಿಸ್ತೀರ್ಣದಲ್ಲಿ 15 ಕೆ.ಜಿ. ಎಂ.ಒ.13 ಪವಿತ್ರ ಭತ್ತದ ಬೀಜವನ್ನು ಬಿತ್ತನೆ ಮಾಡಿ, 15 ಕ್ವಿಂಟಾಲ್‌ ಭತ್ತದ ಇಳುವರಿ ಪಡೆದರು. ಈಗ ಅವರು ಕೃಷಿಕರಿಗೆ ಭತ್ತದ ಬೀಜವನ್ನು ಮಾರಾಟ ಮಾಡುತ್ತಿದ್ದಾರೆ.ರೈತರ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತಾರೆ.

Advertisement

ಪ್ರಶಸ್ತಿಗಳು
2017-18ನೇ ಸಾಲಿನಲ್ಲಿ ಆತ್ಮ ಯೋಜನೆಯಡಿ ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆಯಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಸಮ್ಮಾನಗಳು ನಡೆದಿವೆ. ಭತ್ತದ ಬೇಸಾಯದಲ್ಲಿ ಹಲವು ಪ್ರಯೋಗಗಳನ್ನು ಮಾಡುತ್ತ ಬಂದಿರುವ ರಾಘವೇಂದ್ರ ಅವರು ಕೃಷಿ ಆಸಕ್ತಿಯಿಂದ ಈ ಭಾಗದ ಭತ್ತ ಬೇಸಾಯಗಾರರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಅವರ ಪವಿತ್ರ ತಳಿಯ ಪ್ರಭಾವ ಹಲವಾರು ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭತ್ತ ಸಂಪೂರ್ಣ ನೆಲಕ್ಕ‌ಚ್ಚುವ ಸಾಧ್ಯತೆ
ಕೃಷಿ ಕ್ಷೇತ್ರದಲ್ಲಿ ರೈತರಿಗೆ ನಿರಾಸಕ್ತಿಗೆ ಮುಖ್ಯ ಕಾರಣ ಭತ್ತಕ್ಕೆ ಸೂಕ್ತ ಧಾರಣೆ ಇಲ್ಲದೆ ಇರುವುದು. ಮೊದಲೇ ಕೃಷಿಯಲ್ಲಿ ಕಾರ್ಮಿಕ ಕೊರತೆ, ಕಾಡು ಪ್ರಾಣಿಗಳ ಹಾವಳಿ, ಮಾಹಿತಿ ಕೊರತೆ, ನೀರಿನ ಅಭಾವದಿಂದಾಗಿ ಭತ್ತದ ಗದ್ದೆಗಳು ಹಡಿಲು ಬೀಳುತ್ತಿವೆ. ಭತ್ತಕ್ಕೆ ಸೂಕ್ತ ಬೆಲೆ ಇಲ್ಲದೆ ಹೋದಲ್ಲಿ ಇನ್ನೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಭತ್ತ ಸಂಪೂರ್ಣ ನೆಲಕ್ಕಚ್ಚುವ ಸಾಧ್ಯತೆ ಇದೆ. ಭತ್ತ ಕೃಷಿ ಹೆಚ್ಚಿಸುವ ದೃಷ್ಟಿಯಲ್ಲಿ ನಾನು ರೈತರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಯಂತ್ರ ನಾಟಿ ಮಾಡಿ ಕೊಡುವ ಮೂಲಕ ಫಸಲು ಬರುವ ತನಕ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ. ಸಮಸ್ಯೆ ಗಳು ಬಂದಾಗ ಅನೇಕ ಕಡೆಗಳಲ್ಲಿ ವಿಜ್ಞಾನಿಗಳನ್ನು ಕರೆದುಕೊಂಡು ಹೋಗಿ ಪರಿಶೀಲನೆ ಕೂಡ ನಡೆಸಿದ್ದೇನೆ.
– ರಾಘವೇಂದ್ರ ದೇವಾಡಿಗ, ಪ್ರಗತಿಪರ ಕೃಷಿಕ

ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next