Advertisement

ರಾಜಕಾರಣಿಗಳಿಗೊಂದು ನಿಯಮ, ನೌಕರರಿಗೊಂದು ನಿಯಮ!

12:30 AM Feb 08, 2019 | |

ರಾಜಕಾರಣಿಗಳು ಪ್ರತೀ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದೆ. ಪ್ರತೀ ವರ್ಷ ಅರ್ಧದಷ್ಟು ಶಾಸಕರು, ಸಚಿವರು ವಿವರ ಸಲ್ಲಿಸುವುದಿಲ್ಲ. ಅವರ ಹೆಸರುಗಳೇನೋ ಪ್ರಕಟವಾಗುತ್ತವೆ. ಆದರೆ ಸಲ್ಲಿಸದವರಿಗೆ ಏನು ಶಿಕ್ಷೆ ನೀಡಲಾಗಿದೆ ಎಂದು ಯಾವತ್ತಾದರೂ ಯಾರಿಗಾದರೂ ತಿಳಿದಿದೆಯೇ? 

Advertisement

ಅದೆಷ್ಟು ಸತ್ಯವೋ ಗೊತ್ತಿಲ್ಲ, ಹಂಸಪಕ್ಷಿಯು ತಾನು ಕುಡಿಯುವ ಹಾಲಿನಲ್ಲಿ ಇರುವ ಹಾಲಿನ ಅಂಶವನ್ನು ಹೀರಿಕೊಂಡು ನೀರಿನ ಅಂಶವನ್ನು ಪಾತ್ರೆಯಲ್ಲಿ ಉಳಿಸುತ್ತದಂತೆ. ಹೀಗೆಯೇ ಆಡಳಿತದ ಪ್ರಮುಖ ಅಂಗಗಳಾದ ಶಾಸಕಾಂಗ ಮತ್ತು ಕಾರ್ಯಾಂಗಗಳ ಸದಸ್ಯರಾದ ರಾಜಕಾರಣಿಗಳು ಮತ್ತು ಸರಕಾರಿ ನೌಕರರಲ್ಲಿ ಸೌಲಭ್ಯಗಳ ಪ್ರಶ್ನೆ ಬಂದಾಗ ರಾಜಕಾರಣಿಗಳಿಗೆ ಹಾಲಿನ ಅಂಶ, ಕರ್ತವ್ಯಗಳ ವಿಷಯದಲ್ಲಿ ನೀರು; ಅಧಿಕಾರಿ ವರ್ಗಕ್ಕೆ ತದ್ವಿರುದ್ಧ!

ಸರಕಾರಿ ನೌಕರರಿಗೆ, ಅಧಿಕಾರಿಗಳಿಗೆ ಉದ್ಯೋಗಕ್ಕೆ ಸೇರಬೇಕಾದರೆ ಬೌದ್ಧಿಕ, ಲಿಖೀತ, ದೈಹಿಕ ಪರೀಕ್ಷೆಗಳಿರುತ್ತವೆ. ಪದೋನ್ನತಿಗೆ ನಿರ್ದಿಷ್ಟ ಅವಧಿ, ಪರೀಕ್ಷೆ, ಅರ್ಹತೆ ಇತ್ಯಾದಿ ಮಾನದಂಡಗಳಿವೆ. ನಿವೃತ್ತಿಗೆ ನಿಗದಿತ ವಯೋಮಿತಿ, ನಿವೃತ್ತಿ ವೇತನ ಸಿಗಬೇಕಾದರೆ ಕನಿಷ್ಟ ಸೇವಾವಧಿ ಇತ್ಯಾದಿ ನೂರೆಂಟು ಷರತ್ತುಗಳು. ಆದರೆ ರಾಜಕಾರಣಿಗಳಿಗೆ? ಮಧ್ಯಪ್ರದೇಶದ ಓರ್ವ ಮಂತ್ರಿ ಮಹೋದಯ ಹೆಬ್ಬೆಟ್ಟಂತೆ. ಲಾಲೂ ಪ್ರಸಾದ್‌ ಪುತ್ರ ಮಾತ್ರವಲ್ಲ ಕರ್ನಾಟಕದ ಈಗಿನ ಸಂಪುಟದ ಕೆಲವು ಸಚಿವರು ಹೈಸ್ಕೂಲ್‌ ಮೆಟ್ಟಿಲು ಹತ್ತಿಲ್ಲ. ಇವರೆಲ್ಲ ಸಂಪುಟ ದರ್ಜೆ ಸಚಿವರು! ಆದರೆ ಇವರ ಅಧೀನದಲ್ಲಿ ಇರುವ ಅಧಿಕಾರಿಗಳಿಗೆ ಅವರವರ ಹುದ್ದೆಗೆ ನಿರ್ದಿಷ್ಟ ವಿದ್ಯಾರ್ಹತೆ ನಿಗದಿಯಾಗಿರುತ್ತದೆ. ಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ, ಪರೀಕ್ಷೆ ಇತ್ಯಾದಿ ಹತ್ತು ಹಲವು ಹಂತಗಳನ್ನು ದಾಟಿ ಬರಬೇಕು. ಮುಖ್ಯವಾಗಿ ಐ.ಎ.ಎಸ್‌. ಅಧಿಕಾರಿಗಳು ಬಹಳಷ್ಟು ಕಠಿಣ ಪರೀಕ್ಷೆಗಳನ್ನು ಎದುರಿಸಿ ಆ ಹುದ್ದೆಗೆ ಆಯ್ಕೆಯಾಗುತ್ತಾರೆ. ಆದರೆ ಅವರ ಮೇಲೆ ನೀತಿ ನಿರ್ಧಾರ ಕೈಗೊಳ್ಳುವವರು ಯಾವುದೇ ಅರ್ಹತೆ, ಪರೀಕ್ಷೆ ಇಲ್ಲದೆ ನೇರವಾಗಿ ಸಚಿವರಾಗುವವರು. ಇವರಿಗೆ ಇರಬೇಕಾದ ಅರ್ಹತೆ ಎರಡೇ, ಒಂದು ಜಾತಿ, ಎರಡು ಹಣ. (ಇವರು ಜನರ ಪ್ರತಿನಿಧಿಗಳಾದರೂ ಹಿಂಬಾಗಿಲಿನಿಂದ ಆಯ್ಕೆ ಆಗುವ ಸೌಲಭ್ಯ ಕೂಡಾ ಇದೆ) ಕೆನಡಾದಲ್ಲಿ ಸಂಸತ್ತಿಗೆ ಆಯ್ಕೆಯಾಗಲು ಕನಿಷ್ಟ ವಿದ್ಯಾರ್ಹತೆ ಇರುವುದು ಮಾತ್ರವಲ್ಲ, ಪ್ರತಿಯೊಂದು ಖಾತೆಗೆ ಆಯಾ ವಿಷಯದಲ್ಲಿ ಪರಿಣತರನ್ನು ಸಚಿವರನ್ನಾಗಿ ನೇಮಿಸಲಾಗುತ್ತದೆ. ಉದಾ: ಆರೋಗ್ಯ ಸಚಿವರಾಗಿ ವೈದ್ಯರು, ಕ್ರೀಡಾಪಟು ಕ್ರೀಡಾ ಸಚಿವರು, ಆರ್ಥಿಕ ತಜ್ಞರು ಅರ್ಥ ಸಚಿವರು, ಕಾನೂನು ಪದವೀಧರ ಕಾನೂನು ಸಚಿವ, ನಿವೃತ್ತ ಸೇನಾಧಿಕಾರಿ ರಕ್ಷಣಾ ಸಚಿವ ಇತ್ಯಾದಿ. ಈ ನಿಟ್ಟಿನಲ್ಲಿ ಭಾರತದ ಕ್ರೀಡಾ ಸಚಿವರಾಗಿ ಓರ್ವ ಒಲಿಂಪಿಕ್‌ ಪದಕ ವಿಜೇತರನ್ನು ನೇಮಿಸಿರುವುದು ಉತ್ತಮ ಬೆಳವಣಿಗೆ.

ಇದಿಷ್ಟು ವಿದ್ಯಾರ್ಹತೆ ಕುರಿತಾದರೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನಕ್ಕೆ ಬದ್ಧವಾಗಿ ಯಾವುದೇ ಪಕ್ಷಪಾತ ಇಲ್ಲದೆ ಕಾರ್ಯನಿರ್ವಹಿಸುವ ಶಪಥ ಮಾತ್ರ. ಬೇರೇನೂ ಇಲ್ಲ, ಆದರೆ ಸಂವಿಧಾನದ ಬಗ್ಗೆ ಮಾಹಿತಿ ಇವರಲ್ಲಿ ಎಷ್ಟು ಜನರಿಗೆ ಮತ್ತು ಎಷ್ಟರ ಮಟ್ಟಿಗೆ ಇದೆ? ಆದರೆ ಸರಕಾರಿ ಸೇವೆಗೆ ಸೇರುವವರಿಗೆ ಸಂವಿಧಾನವೂ ಸೇರಿದಂತೆ ವಿವಿಧ ರೀತಿಯ ಪರೀಕ್ಷೆಗಳನ್ನು ದಾಟಿ ಬರುವುದು ಕಡ್ಡಾಯ.

ಕರ್ನಾಟಕ ನಾಗರಿಕ (ನಡತೆ) ನಿಯಮಗಳು,1966ರ ನಿಯಮ 28ರಂತೆ ಸರಕಾರಿ ಸೇವೆಗೆ ಸೇರುವ ಪ್ರತಿಯೊಬ್ಬ ಅಧಿಕಾರಿ, ನೌಕರರು ಸೇವೆಗೆ ಸೇರುವಾಗ ಸಲ್ಲಿಸಬೇಕಾದ ಘೋಷಣೆಗಳಲ್ಲಿ ನಾನು ವಿವಾಹವಾಗಿಲ್ಲ/ಒಬ್ಬಳಿಗಿಂತ ಹೆಚ್ಚು ಜೀವಂತ ಮಡದಿಯನ್ನು ಹೊಂದಿಲ್ಲ/ಈಗಾಗಲೇ ಮದುವೆಯಾದವರನ್ನು ಮದುವೆಯಾಗಿಲ್ಲ ಇತ್ಯಾದಿ ಸೇರಿದೆ. ಅದೇ ರಾಜಕಾರಣಿಗಳಿಗೆ? 

Advertisement

ಸರಕಾರಿ ಸೇವೆಗೆ ಸೇರಿದ ಕ್ಷಣದಿಂದ ಪ್ರತಿಯೊಬ್ಬ ಸರಕಾರಿ ಅಧಿಕಾರಿ/ನೌಕರರಿಗೆ ವರ್ತನೆ, ಅವರಿಗೆ ಸಿಗುವ ಸೌಲಭ್ಯಗಳು ನಾಗರಿಕ ಸೇವಾ ನಿಯಮಾವಳಿಗಳು ಮತ್ತು ಸೇವಾ ನಿಯಂತ್ರಣ, ಕಡ್ಡಾಯ ಪರೀಕ್ಷೆ, ಶಿಸ್ತುಕ್ರಮ-ಹೀಗೆ ಪ್ರತಿಯೊಂದು ವಿಷಯಕ್ಕೂ ಬೇರೆ ಬೇರೆ ನಿಯಮಾವಳಿಗಳನ್ನು ನಿಗದಿ ಪಡಿಸಲಾಗಿದೆ. ಅಧಿಕಾರಿಗಳ ನೌಕರರ ದೈನಂದಿನ ಚಟುವಟಿಕೆಗಳು ಈ ಎÇÉಾ ನಿಯಮಗಳಡಿ ನಿಯಂತ್ರಿಸಲ್ಪಡುತ್ತವೆ ಹಾಗೂ ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಕೂಡಾ ಈ ನಿಯಮಗಳಡಿ ಕ್ರಮ ಕೈಗೊಳ್ಳಲಾಗುತ್ತದೆ. ಅದೇ ರಾಜಕೀಯ ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಅಂದರೆ ವೇತನ, ಪ್ರಯಾಣ ಭತ್ಯೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳನ್ನು ನೀಡುವುದಕ್ಕೆ ಮಾತ್ರ ಈ ನಿಯಮಗಳನ್ನು ಬಳಸಲಾಗುತ್ತದೆ. ಉಳಿದ ಯಾವುದೇ ನಿಯಂತ್ರಣ ನಿಯಮಾವಳಿಗಳು ಅನ್ವಯಿಸುವುದಿಲ್ಲ. ಹಂಸಕ್ಷೀರ ನ್ಯಾಯ ಎಂದರೆ ಇದೇನಾ?

ಇನ್ನು ಸರಕಾರಿ ನೌಕರರು/ಅಧಿಕಾರಿಗಳಿಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಕೆಯಾಗದ ಹೊರತು ಯಾವುದೇ ಶಿಸ್ತು ಕ್ರಮ ಕೈಗೊಳ್ಳಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲ, ಆದರೂ ಕೇವಲ ಬೇನಾಮಿ ದೂರಿನ ಆಧಾರದಲ್ಲಿ ವರ್ಗಾವಣೆ, ಅಮಾನತು, ಪದೋನ್ನತಿ ತಡೆ ಮುಂತಾದ ಕ್ರಮ ಕೈಗೊಂಡ ಪ್ರಕರಣಗಳು ಸಾಕಷ್ಟಿವೆ. ಮೇಲಾಗಿ ವರ್ಗಾವಣೆ, ಅಮಾನತು ಶಿಕ್ಷೆ ಅಲ್ಲ, ಪದೋನ್ನತಿ ಹಕ್ಕು ಅಲ್ಲ ಎಂಬ ಸಮಜಾಯಿಷಿ ಬೇರೆ. ಆದರೆ ಇವುಗಳಿಂದ ಆ ನೌಕರ/ಅಧಿಕಾರಿ ಅನುಭವಿಸುವ ಆರ್ಥಿಕ ಮತ್ತು ಮಾನಸಿಕ ಒತ್ತಡಕ್ಕೆ ಏನು ಪರಿಹಾರ? ಇನ್ನು ರಾಜಕಾರಣಿಗಳಿಗೆ ಎರಡು ವರ್ಷಗಳ ಶಿಕ್ಷೆಯಾದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಆರು ವರ್ಷಗಳ ನಿರ್ಬಂಧ. ಅವರ ವಿಚಾರಣೆ ಮುಗಿದು ಶಿಕ್ಷೆ ಪ್ರಕಟವಾಗಬೇಕಾದರೆ ದಶಕಗಳೇ ಬೇಕು. ಕೆಲವೊಮ್ಮೆ ಅವರು ಮೃತರಾದ ಮೇಲೆ ತೀರ್ಪು ಬಂದದ್ದೂ ಇದೆ. ಲಾಲೂ ಪ್ರಸಾದ್‌ ಮತ್ತು ಜಯಲಲಿತಾ ಪ್ರಕರಣಗಳು ಇದಕ್ಕೆ ಜ್ವಲಂತ ಉದಾಹರಣೆ. ಈ ಹಂತಕ್ಕೆ ಬರುವವರೆಗೆ ಅವರೆಲ್ಲರೂ ಅಬ್ಬರದ ಅಧಿಕಾರ ಅನುಭವಿಸುತ್ತಾರೆ. ಮಾತ್ರವಲ್ಲ,ಅವರಿಗೆ ಕಾರಾಗೃಹದಲ್ಲೂ ರಾಜಯೋಗದ ಸೌಲಭ್ಯಗಳನ್ನು ಒದಗಿಸುವಷ್ಟು ನಮ್ಮ ವ್ಯವಸ್ಥೆ ಹದಗೆಟ್ಟಿದೆ. ತಮಿಳುನಾಡಿನ ಶಶಿಕಲಾ ಇದಕ್ಕೆ ಉದಾಹರಣೆಯಾದರೆ, ಅವರಿಗೆ ನೀಡಲಾಗುತ್ತಿರುವ ಕಾನೂನು ಬಾಹಿರ ಸೌಲಭ್ಯಗಳ ಬಗ್ಗೆ ಧ್ವನಿ ಎತ್ತಿದ ಐ.ಪಿ.ಎಸ್‌. ಅಧಿಕಾರಿ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ. ಸಂವಿಧಾನದ ಪರಿಚ್ಛೇದ 14ರಲ್ಲಿ ಹೇಳಲಾದ ಸಮಾನತೆ ಇದೇನಾ?

ಈ ರಂಗೋಲಿ ಕೆಳಗೆ ತೂರುವ ಬುದ್ಧಿವಂತಿಕೆ ನೋಡಿ ಕೆಲವು ಚಾಣಾಕ್ಷ ಅಧಿಕಾರಿ/ನೌಕರರು ಸೇವೆಯಲ್ಲಿ ಇರುವಾಗಲೇ ರಾಜಕಾರಣಿಗಳಾಗಿ ಪರಿವರ್ತನೆಗೊಳ್ಳುತ್ತಾರೆ. ಸೇವೆಯಲ್ಲಿ ಇರುವಾಗಲೇ ಸಾಕಷ್ಟು ರಾಜಕೀಯ ಮಾಡಿ ರಾಜಕಾರಣಿಗಳಿಗೆ ಆಪ್ತರಾಗುವುದು ಮಾತ್ರವಲ್ಲ ಚುನಾವಣೆ ಹತ್ತಿರ ಇರುವಾಗ ಸೇವಾ ನಿವೃತ್ತಿ ಪಡೆದು ಸಕ್ರಿಯ ರಾಜಕಾರಣಕ್ಕೆ ಧುಮುಕಿ, ಶಾಸಕರಾಗಿ, ಸಚಿವರಾದ ಉದಾಹರಣೆ ಬಹಳಷ್ಟಿದೆ. ಇಲ್ಲಿ ಪ್ರಶ್ನೆ ಅದಲ್ಲ, ಕರ್ನಾಟಕ ನಾಗರಿಕ ಸೇವಾ ನಿಯಮ 2014ರಲ್ಲಿ ನಿವೃತ್ತಿ ಹೊಂದುವ ಅಧಿಕಾರಿ ಅಥವಾ ನೌಕರರ ವಿರುದ್ಧ ಯಾವುದೇ ಶಿಸ್ತು ಕ್ರಮ ಬಾಕಿ ಇದ್ದರೆ ಅಂಥವರ ನಿವೃತ್ತಿ ವೇತನ ಸೌಲಭ್ಯಗಳನ್ನು ತಡೆ ಹಿಡಿಯಬೇಕೆಂದು ವಿಧಿಸಲಾಗಿದೆ. ಆದರೆ ಮೇಲೆ ಹೇಳಿದಂತೆ ಪರಿವರ್ತನೆ ಹೊಂದಿದ ಅಧಿಕಾರಿ-ರಾಜಕಾರಣಿಗಳ ವಿಷಯದಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಸಚಿವ ಸಂಪುಟದ ವಿಶೇಷ ನಿರ್ಣಯದ ಮೂಲಕ ನಿವೃತ್ತಿ ಹೊಂದಲು ಅನುಮತಿ ಸಿಗುತ್ತದೆ. ಆಯ್ಕೆ ಆದರಂತೂ ಮುಗಿದೇ ಹೋಯ್ತು. ಸೇವಾ ನಿಯಮಗಳಲ್ಲಿ ನಿವೃತ್ತಿ ಹೊಂದಿದ ನಂತರವೂ ನಾಲ್ಕು ವರ್ಷಗಳ ಕಾಲ ಶಿಸ್ತು ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ರಾಜಕಾರಣಿಯಾಗಿ ಪರಿವರ್ತನೆ ಹೊಂದಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಧೈರ್ಯ ಯಾರಿಗೆ ಬರುತ್ತದೆ? ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರ ಪ್ರಕರಣ ಇತ್ತೀಚಿನ ಉದಾಹರಣೆ.

ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಾಗ ತಮ್ಮ ಆಸ್ತಿ ವಿವರಗಳನ್ನು ಘೋಷಿಸಬೇಕು. ಆಯ್ಕೆಯಾದರೆ ಪ್ರತೀ ವರ್ಷ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಬೇಕೆಂಬ ನಿಯಮವಿದೆ. ಆದರೆ ಇದೆಲ್ಲಾ ಪುಸ್ತಕದ ಬದನೆಕಾಯಿಯಾಗಿ ಉಳಿದಿದೆ. ಏಕೆಂದರೆ ಪ್ರತೀ ವರ್ಷ ಅರ್ಧದಷ್ಟು ಶಾಸಕರು, ಸಚಿವರು ವಿವರ ಸಲ್ಲಿಸುವುದಿಲ್ಲ. ಅವರ ಹೆಸರುಗಳೇನೋ ಪ್ರಕಟವಾಗುತ್ತವೆ. ಆದರೆ ಹಾಗೆ ಸಲ್ಲಿಸದವರಿಗೆ ಏನು ಶಿಕ್ಷೆ ನೀಡಲಾಗಿದೆ ಎಂದು ಯಾವತ್ತಾದರೂ ಯಾರಿಗಾದರೂ ತಿಳಿದಿದೆಯೇ? ಅದಕ್ಕಿಂತಲೂ ಅವರು ಸಲ್ಲಿಸುವ ಆಸ್ತಿ ಯಾವ ಮೂಲದಿಂದ ಗಳಿಸಿದುದು ಎಂದು ತಿಳಿಸುವ ಬದ್ಧತೆ ಇಲ್ಲ. ಆದರೆ ಸರಕಾರಿ ಅಧಿಕಾರಿಗಳು/ನೌಕರರು ತಮ್ಮ ಸ್ವಂತದ ಮತ್ತು ಕುಟುಂಬ ಸದಸ್ಯರು ಹೊಂದಿರುವ ಆಸ್ತಿ ವಿವರ ಮಾತ್ರವಲ್ಲ, ಆಸ್ತಿ ಗಳಿಸಿದ ವಿಧಾನವನ್ನು ಕೂಡಾ ಘೋಷಿಸಬೇಕು. ಇದು ಕೂಡ ಹಂಸಕ್ಷೀರ ನ್ಯಾಯದ ಇನ್ನೊಂದು ಉದಾಹರಣೆ ಎಂದು ಪರಿಗಣಿಸಬಹುದಲ್ಲ?

ರಾಜಕೀಯ ವ್ಯಕ್ತಿಗಳು ಅಥವಾ ಅವರ ಮಕ್ಕಳು, ಬೆಂಬಲಿಗರು ಹಾಡುಹಗಲೇ ಅಪರಾಧ ಮಾಡಿದರೂ ವಿಚಾರಣೆಯ ನಾಟಕ, ಮಿಂಚಿನ ವೇಗದಲ್ಲಿ ವರದಿ/ತೀರ್ಪು, ಆರೋಪಿಗಳ ಬಿಡುಗಡೆ-ಪ್ರಾಮಾಣಿಕ ಐ.ಎ.ಎಸ್‌. ಅಧಿಕಾರಿ ಡಿ.ಕೆ.ರವಿ ಹತ್ಯೆಯಾದರೂ ಪೋಲಿಸ್‌ ಅಧಿಕಾರಿ ಎಂ.ಕೆ. ಗಣಪತಿಯವರು ಸ್ವತಃ ಮಾಧ್ಯಮದಲ್ಲಿ ನೇರಾನೇರ ಆಪಾದನೆ ಮಾಡಿ ಆತ್ಮಹತ್ಯೆ ಮಾಡಿಕೊಂಡರೂ ಅವರು ಬೆಟ್ಟು ಮಾಡಿ ತೋರಿಸಿದ ರಾಜಕಾರಣಿಗಳಿಗೆ ಮಿಂಚಿನ ವೇಗದಲ್ಲಿ ತನಿಖೆಯ ನಾಟಕ, ಕ್ಲೀನ್‌ ಚಿಟ್‌, ಮರುದಿನವೇ ಮಂತ್ರಿ ಪದವಿ. ಅದೇ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಕಪೋಲ ಕಲ್ಪಿತ ಆಪಾದನೆ ಮಾಡಿದರೂ ವರ್ಷಾನುಗಟ್ಟಲೆ ತನಿಖೆ. ಅಲ್ಲಿಯ ವರೆಗೆ ಪದೋನ್ನತಿ ಅಥವಾ ಇನ್ಯಾವುದೇ ಸೌಲಭ್ಯ ಸ್ಥಗಿತ. ಈ ನಡುವೆ ನಿವೃತ್ತಿ ಹೊಂದಿದರಂತೂ ಮುಗಿದೇ ಹೋಯ್ತು, ನಿವೃತ್ತಿ ಸೌಲಭ್ಯ ಪಡೆಯದೆ ಸ್ವರ್ಗ ಸೇರಿದರೂ ಆಶ್ಚರ್ಯವಿಲ್ಲ. ಹೇಗಿದೆ ಸಮಾನತೆ? 

ಮೋಹನದಾಸ ಕಿಣಿ 

Advertisement

Udayavani is now on Telegram. Click here to join our channel and stay updated with the latest news.

Next