Advertisement
ಅದೇ ನಂಬರ್ ನಿಂದ ಹತ್ತು ನಿಮಿಷದ ನಂತರ ಇನ್ನೊಂದು ಕರೆ ಬರುತ್ತದೆ. ನಿಮ್ಮ ಫೋನ್ ನಂಬರ್ ಅವರಿಗೆ ಹೇಗೆ ದೊರಕಿತು ಎನ್ನುವುದು ಚಿದಂಬರ ರಹಸ್ಯ. ದಶಕಗಳ ಹಿಂದೆ ಬ್ಯಾಂಕುಗಳಲ್ಲಿ ಠೇವಣಿ ಸಂಗ್ರಹಿಸಲು ಈ ರೀತಿ ಮಾರ್ಕೆಟಿಂಗ್ ಮಾಡುವುದು ತೀರಾ ಸಾಮಾನ್ಯವಾಗಿತ್ತು. ಠೇವಣಿಗಾಗಿ ಗ್ರಾಹಕರನ್ನು ಭೇಟಿಮಾಡುವುದು, ಅವರಿಗೆ ಕೆಲವು ಪ್ರಭಾವಿಗಳಿಂದ ಹೇಳಿಸುವುದು, ಅವರಿಗೆ ಫೋನಾಯಿಸುವುದು, ಅವರೊಡನೆ ಸತತ ಸಂಪರ್ಕದಲ್ಲಿ ಇರುವುದು ಮಾಮೂಲಾಗಿತ್ತು.
Related Articles
Advertisement
ಬ್ಯಾಂಕ್ ಸಾಲದ ವಿಚಾರದಲ್ಲಿ, ಎಂಟ್ರಿ ಇದೆ: ಆದರೆ, exit ಇಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಒಮ್ಮೆ ಸಾಲವನ್ನು ಪಡೆದರೆ, ಸಾಲದ ಜರ್ನಿ ಕೊನೆಗೊಳ್ಳುವುದಿಲ್ಲ. ಅದು ಸಾಲ ಮಾಡಿ ಸಾಲ ತೀರಿಸುವ ಮಟ್ಟಕ್ಕೆ ಇಳಿಯುತ್ತದೆ. ಅನಿವಾರ್ಯವಾದರೆ ಮಾತ್ರ ಸಾಲಕ್ಕೆ ಮೊರೆ ಹೋಗಬೇಕು. ಅದು ಕೊನೆಯ ಅಸ್ತ್ರವಾಗಬೇಕು ಎನ್ನುವುದು ಬ್ಯಾಂಕರ್‌ಗಳಿಗೆ ಸಾಲದ ಪೋರ್ಟ್ ಫೋಲಿಯೋ ಹಿಗ್ಗಿದಷ್ಟು ಒಳ್ಳೆಯದು. ಅದರೆ, ಎನ್ನ ಸಾಲಗಾರನ ಮಾಡಬೇಡಿರಯ್ನಾ ಎಂದು ಗ್ರಾಹಕರು ವ್ಯಾಕುಲಗೊಳ್ಳುವಷ್ಟು ಮಿತಿ ಮೀರಬಾರದು.
ಆಕಳಕರು ಆಕಳನ್ನು ಹುಡುಕಿಕೊಂಡು ಬರುವಂತೆ, ಸಾಲದ ಅವಶ್ಯಕತೆ ಇದ್ದವರು ಬ್ಯಾಂಕುಗಳನ್ನು, ಹಣಕಾಸು ಸಂಸ್ಥೆಗಳನ್ನು ಹುಡುಕಿಕೊಂಡು ಬರುತ್ತಾರೆ. ವಿಧಿಸುವ ಪ್ರತಿಯೊಂದು ಶರತ್ತುಗಳನ್ನೂ ಪಾಲಿಸುತ್ತಾರೆ. ಕೇಳಿದ ಪ್ರತಿಯೊಂದು ಕಾಗದಪತ್ರಗಳನ್ನು ಮತ್ತು ದಾಖಲೆಗಳನ್ನು ನೀಡುತ್ತಾರೆ. ಸಾಲವನ್ನು ಮರುಪಾವತಿ ಮಾಡುವುದರಲ್ಲಿಯೂ ಮುಂದೆ ಇರುತ್ತಾರೆ. ಸಾಮಾನ್ಯವಾಗಿ ಸಾಲ ವಸೂಲಾತಿ ಅಷ್ಟು ಕಷ್ಟಕರವಾಗುವುದಿಲ್ಲ. ನೈತಿಕತೆಯ ಕಟ್ಟುಪಾಟು ಅವನನ್ನು ಬಂಧಿಸುತ್ತದೆ.
ಅವರಲ್ಲಿ ಬ್ಯಾಂಕಿನವರ ಹಣಕಾಸು ಸಹಾಯ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸುತ್ತದೆ. ಬ್ಯಾಂಕುಗಳೇ ಕೇಳಿ, ಒತ್ತಾಯ ಮಾಡಿ ಸಾಲ ನೀಡ ಹೋದರೆ, documentation,compilation of terms and conditions ಕಷ್ಟವಾಗುತ್ತದೆ ಎಂದು ಬ್ಯಾಂಕರುಗಳು ಹೇಳುತ್ತಾರೆ. ಆದರೆ, ಇದಕ್ಕೆ ಬದಲಾಗಿ ಬ್ಯಾಂಕಿನ ವೈಯಕ್ತಿಕ ಹಿತಾಸಕ್ತಿಗಾಗಿ , ಗ್ರಾಹಕ ಹೆಚ್ಚು ಕೇಳದೇ, ಬ್ಯಾಂಕಿನವರೇ ಮುಗಿಬಿದ್ದು, ಸಾಲ ನೀಡಿದರೆ, ಗ್ರಾಹಕನಿಗೆ ಅದು ಅರ್ಥವಾಗುವುದಿಲ್ಲ. ಅದರ ಹಿಂದಿನ ಗಂಭೀರತೆ ತಿಳಿಯುವುದಿಲ್ಲ.
ಸಾಲದ ಅವಶ್ಯಕತೆ ಇದ್ದವನು ತಾನಾಗಿಯೇ ಬ್ಯಾಂಕುಗಳನ್ನು ಹುಡುಕಿಕೊಂಡು ಹೋಗುತ್ತಾನೆ . ಇಂಗ್ಲೆಂಡ್‌ನಲ್ಲಿ ಬ್ಯಾಂಕ್‌ಗಳ ಎದುರು ಒಂದೇ ಒಂದು ನಾಮಫಲಕ ಇರುತ್ತದೆ. ತಾನು ನೀಡುವ ಸೇವೆ, ನೀಡುವ ಉತ್ಪನ್ನಗಳ ಬಗೆಗೆ ಪೋಸ್ಟರ್‌ಗಳನ್ನು ಅಂಟಿಸುವುದಿಲ್ಲ. ಕೇಳದೇ ಸಾಲ ನೀಡುವುದು ಕೊಳ್ಳುಬಾಕ ವ್ಯವಹಾರಕ್ಕೆ ಉಪಯೋಗವಾಗುತ್ತದೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಈ ಪ್ರವೃತ್ತಿ ಬ್ಯಾಂಕುಗಳಲ್ಲಿ ಅನುತ್ಪಾದಕ ಅಸ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತಿರುವುದು ಸುಳ್ಳಲ್ಲ.
ಸಾಲವನ್ನು ಬ್ಯಾಂಕಿನವರೇ ಕೇಳಿ ನೀಡಿದರೆ, ಷರತ್ತುಗಳು ಕಡಿಮೆ ಇರಬಹುದು, ಮರುಪಾವತಿ ಸುಲಭ ಇರಬಹುದು ಮತ್ತು ಬಡ್ಡಿದರ ಕಡಿಮೆ ಇರಬಹುದು ಎನ್ನುವ ಕೆಲವು ಕಲ್ಪನೆಗಳು ಗ್ರಾಹಕರಲ್ಲಿ ಇರುತ್ತದೆ. ಇದು ಒಂದು ರೀತಿಯಲ್ಲಿ ಅರ್ಥ ಶಾಸ್ತ್ರದ ಬೇಡಿಕೆ-ಪೂರೈಕೆ ತತ್ವದಡಿಯಲ್ಲಿ ಇದ್ದು, ಗ್ರಾಹಕರಿಗೆ ಅನುಕೂಲವಾಗಬಹುದು ಎನ್ನುವ ತಪ್ಪು ಕಲ್ಪನೆ ಕೂಡ ಇದೆ. ಅದರೆ, ಸಾಲ ..ಸಾಲವೇ…. ಯಾವುದೇ ವಿನಾಯಿತಿ ಇರುವುದಿಲ್ಲ. ಇದು ಸಾಲವನ್ನು push ಮಾಡುವ ಒಂದು ತಂತ್ರವಷ್ಟೆ.
* ರಮಾನಂದ ಶರ್ಮಾ