ಆಲಂಕಾರು: ರಸ್ತೆ ಸುರಕ್ಷತಾ ಕಾನೂನು ಪಾಲಕರಿಗೆ ವಿದ್ಯಾರ್ಥಿಗಳಿಂದ ಅಭಿನಂದನೆಯ ಜತೆಗೆ ಹೂಗುತ್ಛ, ಪಾಲಿಸದವರಿಗೆ ಕಾನೂನು ಪಾಠ – ಇಂತಹ ಸನ್ನಿವೇಶ ಕಂಡುಬಂದದ್ದು ಕಡಬ ತಾಲೂಕಿನ ಏಣಿತ್ತಡ್ಕ-ಗೋಳಿತ್ತಡಿ ಜಿಲ್ಲಾ ಪಂಚಾಯತ್ ರಸ್ತೆಯ ಸಬಳೂರು ಎಂಬಲ್ಲಿ.
ಸದಾ ಓದು ಪಾಠ ಆಟದಲ್ಲಿ ತಲ್ಲಿನರಾ ಗುತ್ತಿದ್ದ ಕಡಬ ತಾಲೂಕು ಕೊçಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ರಸ್ತೆಗಿಳಿದು ವಾಹನ ಸವಾರರಿಗೆ ವಿಶಿಷ್ಟ ರೀತಿಯಲ್ಲಿ ಸುರಕ್ಷತಾ ನೀತಿ ಪಾಠ ಬೋಧಿಸಿ ಸಾಮಾಜಿಕ ಕಳಕಳಿ ಮೆರೆದರು.
ಶಾಲಾ ವಿಜ್ಞಾನ ಸಂಘ ಆಯೋಜಿಸಿದ್ದ ರಸ್ತೆ ಸುರಕ್ಷಾ ಅಭಿಯಾನದಲ್ಲಿ ಹಮ್ಮಿಕೊಳ್ಳ ಲಾದ ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷೆ, ಪ್ರೌಢಶಾಲಾ ಸಹಶಿಕ್ಷಕಿ ಮಮತಾ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ವಾರಿಜಾ, ಶಿಕ್ಷಕಿ ಯಶೋದಾ, ಶಿಕ್ಷಕ ಶೇಖರ, ಗೌರವ ಶಿಕ್ಷಕಿಯರಾದ ರಮ್ಯಾ, ವಾರಿಜಾ ಏಣಿತ್ತಡ್ಕ ಸಹಕರಿಸಿದರು.
ಶಾಲಾ ಮಗ್ಗುಲಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಬೆಳಗ್ಗೆ 8.45ಕ್ಕೆ ಆರಂಭಗೊಂಡು 9.30ರ ವರೆಗೆ ಕಾರ್ಯಾಚರಿಸಿದ ವಿಜ್ಞಾನ ಸಂಘದ ವಿದ್ಯಾರ್ಥಿಗಳ ತಂಡ, ಎಲ್ಲ ವಾಹನ ಸವಾರರನ್ನು ತಡೆದು ಕಾನೂನು ಪಾಲನೆಯ ಬಗ್ಗೆ ಅರಿವು ಮೂಡಿಸಿದರು. ರಸ್ತೆ ಸುರಕ್ಷತೆಯ ಬಗ್ಗೆ ಧನಾತ್ಮಕ ಮತ್ತು ಋಣತ್ಮಾಕ ಅಂಶಗಳನ್ನು ಸಾರುವ ಬರವಣಿಗೆ ಫಲಕಗಳನ್ನು ಕೈಯಲ್ಲಿ ಹಿಡಿದು ವಾಹನ ಸವಾರರಿಗೆ ನೀತಿ ಪಾಠ ಬೋಧಿಸಿದರು.
ಹೆಲ್ಮೆಟ್ ಧರಿಸದ ಬೈಕ್ ಸವಾರರು, ಸೀಟ್ ಬೆಲ್ಟ್ ಧರಿಸದ ಕಾರು ಚಾಲಕರು, ಸಮವಸ್ತ್ರ ಧರಿಸದ ರಿಕ್ಷಾ, ಪಿಕಪ್, ಜೀಪು ಚಾಲಕರಿಗೆ ಕಾನೂನು ಪಾಲನೆ ಮಾಡದ ಸವಾರರ ವಾಹನಕ್ಕೆ ಸುತ್ತುವರಿದು ಕಾನೂನು ಬಗ್ಗೆ ತಿಳಿಹೇಳಿ ಜಾಗೃತಿ ಮೂಡಿದರು. ವಿದ್ಯಾರ್ಥಿಗಳ ಕಾರ್ಯಚರಣೆಯ ಸಂದರ್ಭ ಕೆಲವು ವಾಹನ ಸವಾರರು ಇರಿಸುಮುರುಸು ಅನುಭವಿಸಿದರು.
ಸುರಕ್ಷತೆ ಬಗ್ಗೆ ತಿಳಿವಳಿಕೆ
ರಸ್ತೆ ಸುರಕ್ಷತಾ ಬಗ್ಗೆ ಮಾಹಿತಿಯಿದ್ದರೂ ನಿಯಮಗಳನ್ನು ಪಾಲಿಸುವರ ಸಂಖ್ಯೆ ಕಡಿಮೆ. ಪೊಲೀಸರ ದಂಡ ತಪ್ಪಿಸಲು ಕಾನೂನು ಪಾಲನೆ ಮಾಡುವುದಲ್ಲ. ಅಪಘಾತ ಸಂದರ್ಭ ಜೀವಕ್ಕೆ ಅಪಾಯ ತಪ್ಪಿಸಲುವೆಂಬ ಅರಿವು ಸವಾರರಲ್ಲಿರ ಬೇಕು. ಈ ಕಾರ್ಯಕ್ರಮದಲ್ಲಿ ಸವಾರರಿಗೆ ರಸ್ತೆ ಸುರಕ್ಷತೆಯ ಬಗ್ಗೆ ತಿಳಿ ಹೇಳಲಾಯಿತು. ವಿದ್ಯಾರ್ಥಿಗಳ ಕಾರ್ಯವನ್ನು ಸವಾರರು ಮೆಚ್ಚಿಕೊಂಡು ಶ್ಲಾ ಸಿದ್ದಾರೆ ಎಂದು ಪ್ರೌಢಶಾಲಾ ಸಹಶಿಕ್ಷಕಿ, ವಿಜ್ಞಾನ ಸಂಘದ ಮಾರ್ಗದರ್ಶಿ ಮಮತಾ ವಿವರಿಸಿದರು.
ತಲೆಬಾಗಿದ ಸವಾರರು
ಮುಖ್ಯ ರಸ್ತೆ ಹೊರತುಪಡಿಸಿ ಇನ್ನುಳಿದ ರಸ್ತೆ ಸಂಚಾರದ ಸಂದರ್ಭ ಸಾರಿಗೆ ನಿಯಮಕ್ಕೆ ವಾಹನ ಸವಾರರು ಆದ್ಯತೆ ನೀಡುವುದು ಕಡಿಮೆ ಎನ್ನುವುದು ವಿದ್ಯಾರ್ಥಿಗಳ ಕಾರ್ಯಕ್ರಮ ಆಯೋಜನೆ ಸಂದರ್ಭ ಕಂಡುಬಂತು. ಕಾನೂನು ಪಾಲನೆ ಮಾಡದ ಸವಾರರು ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿಗೆ ತಲೆಬಾಗಿ ಸ್ಥಳದಲ್ಲೆ ಹೆಲ್ಮೆಟ್, ಸೀಟ್ ಬೆಲ್ಟ್, ಸಮವಸ್ತ್ರ ಧರಿಸಿಕೊಂಡು ಮುಂದುವರಿದರು.