ಬೆಂಗಳೂರು: ಲೋಕಸಭಾ ಚುನಾವಣೆ ಸಂಬಂಧ ರಾಜ್ಯ ನಾಯಕರು ಮೇ ಮೊದಲ ವಾರದಲ್ಲಿ ಜಿಲ್ಲಾ ಸಮಿತಿಗಳು, ಚುನಾವಣಾ ನಿರ್ವಹಣಾ ಸಮಿತಿಗಳೊಂದಿಗೆ ಪರಾಮರ್ಶೆ ಸಭೆಗಳನ್ನು ನಡೆಸಲಿದ್ದಾರೆ. ಪರಾಮರ್ಶೆ ಸಭೆಯಲ್ಲೇ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವವರ ವಿವರವನ್ನು ಸಂಗ್ರಹಿಸಲಿದ್ದಾರೆ. ಬೆಂಗಳೂರು ಸೇರಿ ಮಹಾನಗರ ಪಾಲಿಕೆಗಳಿರುವ ಕಡೆ ಸಾಕಷ್ಟು ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೂ ದೂರು ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸರಾಸರಿ ಶೇ.68.62ರಷ್ಟು ಮತದಾನವಾಗಿದ್ದು, ಕಳೆದ ಲೋಕಸಭಾ ಚುಣಾವಣೆಗೆ ಹೋಲಿಸಿದರೆ ಶೇ.1ಕ್ಕಿಂತ ಹೆಚ್ಚು ಮತದಾನವಾಗಿದೆ. ಇದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಲಾಗುವುದು. ಲೋಕಸಭೆ ಚುನಾವಣೆ ಮತದಾನದ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದ್ದು, 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ವಿವರಿಸಿದರು.
ದೇಶದ ಇತರೆಡೆ ಚುನಾವಣೆ ನಡೆದಿರುವ ಕಡೆ ರಾಜ್ಯ ನಾಯಕರು ಪ್ರಚಾರ ನಡೆಸಲಿದ್ದಾರೆ. ದೆಹಲಿಯಲ್ಲಿ ನಾನು ಹಾಗೂ ಆರ್.ಅಶೋಕ್ ನೇತೃತ್ವದ ತಂಡಗಳು ಪ್ರಚಾರ ನಡೆಸಲಿವೆ. ಹಾಗೆಯೇ ಸಿ.ಟಿ.ರವಿ ನೇತೃತ್ವದ ತಂಡ ವಾರಣಾಸಿಯಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದೆ. ಮನವಿ, ಆಹ್ವಾನದ ಮೇರೆಗೆ ಇತರೆ ನಾಯಕರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ, ಮೈತ್ರಿ ಸರ್ಕಾರ ಪತನ ಸಂಭವ ಇತರೆ ಯಾವ ವಿಚಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಮೇ 23ರಂದು ಫಲಿತಾಂಶ ಪ್ರಕಟವಾದ ಬಳಿಕ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬುದಷ್ಟೇ ಪಕ್ಷದ ಆಶಯವಾಗಿದ್ದು, ಅದಕ್ಕೆ ಪೂರಕವಾದ ಕಾರ್ಯಗಳಿಗೆ ಆದ್ಯತೆ ನೀಡಲಾಗಿದೆ. ಸದ್ಯ ಎರಡು ವಿಧಾನಸಭೆ ಉಪಚುನಾವಣೆ ಎದುರಾಗಿದ್ದು, ಕೆಲ ನಾಯಕರು ಅದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾವ ಕಾಂಗ್ರೆಸ್ ಶಾಸಕರನ್ನೂ ಹಿಂದೆ ಸಂಪರ್ಕಿಸಿಲ್ಲ. ಈಗಲೂ ಸಂಪರ್ಕಿಸುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.