ಕೆಂಗೇರಿ: ಸಾಮಾನ್ಯವಾಗಿ ಎಲ್ಲಾ ಹಿರಿಯರು ತಮ್ಮ ನಿವೃತ್ತಿಯ ನಂತರ ಮೊಮ್ಮಕ್ಕಳ ಜೊತೆ ಕಾಲ ಕಳೆದು ಪ್ರತಿ ತಿಂಗಳು ಬರುವ ನಿವೃತ್ತಿ ವೇತನ ಪಡೆದು ಸುಖಮಯ ಜೀವನ ನಡೆಸಲು ಬಯಸುತ್ತಾರೆ. ಇವರಿಗೆಲ್ಲಾ ಅಪವಾದ ಎಂಬಂತೆ ಯಶವಂತಪುರ ಕ್ಷೇತ್ರದ ಉಲ್ಲಾಳು ವಾರ್ಡ್‌ನ ವಿಶ್ವೇಶ್ವರಯ್ಯಬಡಾವಣೆಯ ನಿವಾಸಿ ಬಿ.ಎಸ್.ಮಂಜುನಾಥ್ ನಿವೃತ್ತಿ ಬಳಿಕ ಪರಿಸರ ಸೇವೆಗೆ ಮುಂದಾಗಿದ್ದಾರೆ.
ಶಿರಾ ತಾಲೂಕಿನ ಬಡಮಾರನಹಳ್ಳಿಯಲ್ಲಿ ಜನಿಸಿದ ಇವರು ಮೈಸೂರು ರಸ್ತೆಯ ಬಾಪೂಜಿನಗರದ ಸಿದ್ದಾರ್ಥ ಪ್ರೌಡಶಾಲೆಯಲ್ಲಿ ಕಾರ್ಯನಿರ್ವಹಿಸಿ 2019ರಲ್ಲಿ ನಿವೃತ್ತಿ ಹೊಂದಿ ಈಗ ಪರಿಸರ ರಕ್ಷಣೆ, ನೆರೆಹೊರೆ ಸ್ವಚ್ಛತೆ ಆದ್ಯತೆ ನೀಡಿದ್ದಾರೆ. ತಮ್ಮ ಬಡಾವಣೆಯ ಬಳಿ ಇರುವ ರಸ್ತೆಯ ಪಾದಚಾರಿ ಮಾರ್ಗ ಮೋರಿ ಹಾಗೂ ಬಡಾವಣೆಯ ಉದ್ಯಾವನದ ತಂತಿಬೇಲಿಯಲ್ಲಿ ಬೆಳೆದ ಗಿಡ-ಬಳ್ಳಿಗಳನ್ನು ತಾವೇ ಸ್ವತಃ ಸ್ವಚ್ಛಗೊಳಿಸುವ ಮೂಲಕ ಸುಂದರ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಈ ಕುರಿತು ಬಿ.ಎಸ್.ಮಂಜುನಾಥ್ ಮಾತನಾಡಿ, ನಿವೃತ್ತಿಯ ನಂತರ ಯಾವುದೇ ಕೆಲಸವಿಲ್ಲದೆ ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ, ಬೆಳಗಿನ ವಾಯುವಿಹಾರ ಮಾಡುತ್ತಿದ್ದ ಬಡಾವಣೆಯ ಆಲದ ಮರದ ಉದ್ಯಾನವನದಲ್ಲಿ ಮರದ ಎಲೆ, ಪ್ಲಾಸ್ಟಿಕ್ ಬಾಟಲ್, ಮರದ ಕೊಂಬೆ ಸೇರಿದಂತೆ ಸಾಕಷ್ಟು ಕಸ ತುಂಬಿ ಇಡೀ ಪರಿಸರ ಹಾಳಾಗಿತ್ತು ಇದನ್ನು ನೋಡಿದ ಮಾರನೆ ದಿನದಿಂದಲೇ ಪೊರಕೆ ಹಿಡಿದು ಉದ್ಯಾನ ಸ್ವಚ್ಛಗೊಳಿಸಿದೆ. ಕೆಲವರು ನನ್ನನ್ನು ನೋಡಿ ಗೇಲಿ ಮಾಡಿದರು.
ಆದರೂ, ದೃತಿಗೆಡದೆ ಪ್ರತಿನಿತ್ಯ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಮುಂದಾದೆ ಕ್ರಮೇಣ ಕೆಲವು ಸ್ನೇಹಿತರು ಸಹಕಾರ ನೀಡಿದರು. ಇಂದು ನಮ್ಮ ಟೀಂನಲ್ಲಿ ಸುಮಾರು 10 ರಿಂದ 15 ಜನ ಸ್ನೇಹಿತರಿದ್ದು, ನಮ್ಮ ಅಕ್ಕ-ಪಕ್ಕದ ಬಡಾವಣೆಯನ್ನು ಸುಂದರವಾಗಿ ಇಡಲು ಶ್ರಮಿಸುತ್ತಿದ್ದೇವೆ. ಬಡಾವಣೆಯ ವಿದ್ಯಾ ನಿಕೇತನ್ ಶಾಲೆಯ ಸುಮಾರು 1.5 ಕಿ.ಮೀ.ರಸ್ತೆಯ ಇಕ್ಕೆಲದಲ್ಲಿ ಕಸದ ರಾಶಿಯೇ ಇದ್ದು ಸ್ನೇಹಿತರ ಸಹಕಾರದಲ್ಲಿ ಅದನ್ನು ಸಹ ಸ್ವಚ್ಛಗೊಳಿಸಿ ಜಾಗೃತಿ ಫಲಕ ಆಳವಡಿಸಲಾಗಿದೆ ಎಂದು ತಿಳಿಸಿದರು.
ಸ್ನೇಹಿತರ ಸಹಕಾರ : ಮಂಜುನಾಥ್ ಅವರ ಪರಿಸರ ಕಾಳಜಿಯಿಂದ ಪ್ರೇರಿತನಾಗಿ ಅವರ ಜೊತೆ ಕೈ ಜೊಡಿಸುವ ಕೆಲಸವನ್ನು ಮಾಡುತ್ತಿದ್ದು. ನಮ್ಮ ಕೈಲಾದ ನೆರವು ನೀಡುತ್ತಿದ್ದೇವೆ. ಮೂರು ವರ್ಷದಲ್ಲಿ ಮಂಜುನಾಥ್ ಅವರು ಸುಮಾರು 20 ರಿಂದ 25 ಸಾವಿರ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿದ್ದಾರೆ. ಪಳನಿಸ್ವಾಮಿ ಎಂಬ ಕೂಲಿಕಾರ್ಮಿಕ 15 ರಿಂದ 20 ಸಾವಿರ ಹಣವನ್ನು ನೀಡಿದ್ದಾರೆ. ಇತರೆ ಸ್ನೇಹಿತರ ಸಹಕಾರದಲ್ಲಿ 1 ಲಕ್ಷದವರೆಗೆ ಖರ್ಚಾಗಿದ್ದು, ಪರಿಸರವನ್ನು ಉಳಿಸಿ-ಬೆಳೆಸುವ ಕಾರ್ಯಕ್ಕೆ ಮುಂದಾಗುತ್ತಿರುವ ಇವರಿಗೆ ಬಡಾವಣೆಯ ನಿವಾಸಿಗಳು “”ಪೂರಕೆ ಮಂಜುನಾಥ್” ಎಂಬ ಬಿರುದನ್ನು ನೀಡಿ ದ್ದಾರೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಗೌಡ ತಿಳಿಸಿದರು.
–ರವಿ ವಿ.ಆರ್.ಕೆಂಗೇರಿ