ಕೊಪ್ಪಳ: ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಲಾಗಿದೆ ಎಂಬ ಮಾಹಿತಿ ತಿಳಿದ ತಕ್ಷಣ ಜಿಲ್ಲೆಯ ಜನತೆ ರಸ್ತೆಗಿಳಿಯುತ್ತಿದ್ದಾರೆ. ಗುರುವಾರ ಮೊದಲಿನಂತೆ ವಾಹನಗಳ ಓಡಾಟವೂ ಕಂಡುಬಂತು. ಇನ್ನೂ ಕೆಲವು ಬಟ್ಟೆ ಅಂಗಡಿ ತೆರೆದುಕೊಂಡಿದ್ದನ್ನು ಗಮನಿಸಿದ ಪೊಲೀಸರು ಅವುಗಳನ್ನು ಬಂದ್ ಮಾಡಿಸಿ, ಜನತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದರು.
ಲಾಕ್‌ಡೌನ್ ಸಡಿಲಿಕೆಯಾಗಿದೆ ಎಂದಾಕ್ಷಣ ಜನರಲ್ಲಿ ಸ್ವಲ್ಪ ಖುಷಿ ಕಂಡು ಬಂದಿತು. ಬೆಳಂ ಬೆಳಗ್ಗೆ ಬೈಕ್‌ಗಳ ಸಂಚಾರ ನಗರದ ತುಂಬೆಲ್ಲ ಕಂಡುಬಂತು. ಪೊಲೀಸರು ಎದುರೆ ಇದ್ದರು ಪ್ರಯಾಣಿಕರು ಯಾವುದಕ್ಕೂ ಭಯಪಡದೇ ರಸ್ತೆಯಲ್ಲಿ ನಿರ್ಭೀತಿಯಿಂದ ಸಂಚರಿಸಿದರು.
ಲಾಕ್‌ಡೌನ್ ಸಡಿಲಿಕೆಯಲ್ಲಿ ಕೆಲವೊಂದಕ್ಕೆ ಮಾತ್ರ ಸರ್ಕಾರ ವಿನಾಯಿತಿ ನೀಡಿದೆಯಾದರೂ ಕೆಲವು ಬಟ್ಟೆ ಅಂಗಡಿಗಳನ್ನು ತೆರೆಯಲಾಗಿತ್ತು. ಇಲ್ಲಿ ಜನರ ಗುಂಪು ನೋಡಿದ ತುಂಗಾ ಮಹಿಳಾ ಪೊಲೀಸ್ ಪಡೆಯು ತಕ್ಷಣ ಅಂತಹ ಅಂಗಡಿಗಳನ್ನು ಬಂದ್ ಮಾಡಿಸಿದ್ದಲ್ಲದೇ, ಮಾಲೀಕರನ್ನು ಠಾಣೆಗೆ ಕರೆದೊಯ್ದರು. ಪ್ರತಿದಿನ ಪೊಲೀಸರು ವಾಹನ ಸವಾರರಿಗೆ ಕಟ್ಟೆಚ್ಚರ ನೀಡುತ್ತಿದ್ದರು. ಆದರೆ ವಿನಾಯಿತಿ ಬಳಿಕ ಪೊಲೀಸರು ಸಂಚಾರಕ್ಕೆ ಸಮ್ಮತಿ ಸೂಚಿಸಿದವರಂತೆ ಸುಮ್ಮನಿದ್ದರು.
ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದ ಕೆಲವೊಂದು ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಿದೆ. ಹಾಗೆಂದ ಮಾತ್ರಕ್ಕೆ ಜನತೆ ಏಕಾಏಕಿ ರಸ್ತೆಗಿಳಿಯುವಂತಿಲ್ಲ. ಅಗತ್ಯ ಸೇವೆ ಪಡೆಯಲು ಮಾತ್ರ ರಸ್ತೆಗಿಳಿಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಕಾರ್ಯ ಪೂರೈಸಿಕೊಳ್ಳಬೇಕು. ಎಂದಿನಂತೆ ತರಕಾರಿ ಮನೆ ಮನೆಗೆ ಪೂರೈಕೆಯಾಗಲಿದೆ. ಕೃಷಿ, ಆಸ್ಪತ್ರೆ, ಕೆಲವೊಂದು ಕಾಮಗಾರಿ ಆರಂಭಕ್ಕೆ ಸಮ್ಮಿತಿಯಿದೆ.
– ಸುನೀಲ್ ಕುಮಾರ, ಕೊಪ್ಪಳ ಜಿಲ್ಲಾಧಿಕಾರಿ
-ದತ್ತು ಕಮ್ಮಾರ