ಯಾವುದೇ ಕಾಯಿಲೆಗೆ ಪರಿಣತ ವೈದ್ಯರ ಸೂಚನೆಯ ಅನ್ವಯ ಚಿಕಿತ್ಸೆ ಪಡೆಯಬೇಕು ಎನ್ನುವುದು ಸಾಮಾನ್ಯ ತಿಳಿವಳಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಟರ್‌ನೆಟ್‌ನಲ್ಲಿ, ಲಭ್ಯವಾಗುವ ಕಾಯಿಲೆಗಳು ಮತ್ತು ಅವುಗಳಿಗೆ ಸಾಮಾನ್ಯವಾಗಿ ಹೊಂದಾಣಿಕೆಯಾಗುವ ಔಷಧಗಳ ವಿವರಗಳನ್ನು ಅಪ್‌ಲೋಡ್ ಮಾಡಿರುತ್ತಾರೆ. ಅದರ ಅನ್ವಯ ಜನರು ಮೆಡಿಕಲ್ ಶಾಪ್‌ಗ್ಳಿಂದ ಔಷಧಗಳನ್ನು ಖರೀದಿಸಿ ಸೇವಿಸುವುದು ಸಾಮಾನ್ಯ ಸಮಸ್ಯೆ.
ಇದರ ಜತೆಗೆ ವೈದ್ಯರು ಕೂಡ ಆ್ಯಂಟಿ ಬಯಾಟಿಕ್‌ಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ನೀಡುತ್ತಾರೆ ಎಂಬ ಆರೋಪಗಳೂ ಆಗಾಗ ಕೇಳಿ ಬರುತ್ತಿವೆ. ಕೆಲವೊಂದು ಸಂದ ರ್ಭದಲ್ಲಿ ಆ ಔಷಧ ಬಳಕೆಯಿಂದ ಪ್ರತಿಕೂಲ ಪರಿಣಾಮ ಆದದ್ದು ಉಂಟು. ವಿಶ್ವ ಆರೋಗ್ಯ ಸಂಸ್ಥೆಯೇ ನೀಡಿದ ಮಾಹಿತಿಯ ಪ್ರಕಾರ 2019ರಲ್ಲಿ 12 ಲಕ್ಷ ಮಂದಿ ನಿಗದಿತ ಕಾಯಿಲೆಗೆ ಕಾರಣವಾಗಿರುವ ವೈರಸ್ ಅಥವಾ ಬ್ಯಾಕ್ಟೀರಿಯಾ ಆ ಔಷಧವನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡಿದ್ದರ ಪರಿಣಾಮವಾಗಿ ಅಸು ನೀಗಿದ್ದಾರೆ. ಇನ್ನು 49 ಲಕ್ಷ ಮಂದಿ ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಅಸುನೀಗಿದ್ದಾರೆ ಎಂದು ಇತ್ತೀಚೆಗೆ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಜಗತ್ತಿನ ಸದಸ್ಯ ರಾಷ್ಟ್ರಗಳು ತಮ್ಮ ವ್ಯಾಪ್ತಿಯಲ್ಲಿ ವೈದ್ಯರು ಮತ್ತು ಔಷಧ ಮಳಿಗೆಗಳಲ್ಲಿ ನಿಗದಿತ ಪ್ರಿಸ್ಕ್ರಿಪ್ಶನ್ ಇಲ್ಲದೆ ಆ್ಯಂಟಿ ಬಯಾಟಿಕ್‌ಗಳನ್ನು ನೀಡಲೇ ಬಾರದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿ ವಾಲಯ ವ್ಯಾಪ್ತಿಯಲ್ಲಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಹೊಸ ಸೂಚನೆ ನೀಡಿದೆ. ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳು, ವೈದ್ಯರ ಒಕ್ಕೂಟ, ಔಷಧ ಮಳಿಗೆಗಳ ಮಾಲಕರ ಒಕ್ಕೂಟ, ಔಷಧ ತಯಾರಕರಿಗೆ ಸೂಚನೆ ನೀಡಿ, ಅಗತ್ಯ ಇಲ್ಲದೆ ಆ್ಯಂಟಿ ಬಯಾಟಿಕ್ ನೀಡಬಾರದು ಎಂದು ಸ್ಪಷ್ಟ ಸೂಚನೆಯನ್ನೇ ನೀಡಿದೆ.
ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಸರಕಾರಿ ಮಳಿಗೆ ಗಳಲ್ಲಿ ಪ್ಯಾರಾಸಿಟಮಾಲ್ ಮಾತ್ರೆಗಳ ಮಾರಾಟ ಪ್ರಮಾಣದ ಮೇಲೆ ನಿಯಂತ್ರಣ ಹೇರುವ ಬಗ್ಗೆ ತೀರ್ಮಾನಿಸಿತ್ತು. 2018ರಿಂದ ಆ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದರಿಂದ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಔಷಧ ಮಳಿಗೆಗಳಲ್ಲಿ 16 ಪ್ಯಾರಾಸಿಟಮಾಲ್ ಮಾತ್ರೆಗಳನ್ನು ಮಾತ್ರ ಮಾರಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ನಮ್ಮ ದೇಶದಲ್ಲಿ ಕೂಡ ಅಗತ್ಯಕ್ಕಿಂತ ಹೆಚ್ಚು ಆ್ಯಂಟಿ ಬಯಾಟಿಕ್‌ಗಳನ್ನು ವೈದ್ಯರು ನೀಡುವುದರಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಪ್ಪಿಸಲು ಡಿಜಿಎಚ್‌ಎಸ್ ಹೊಸ ನಿಯಮಗಳನ್ನು ಜಾರಿ ಮಾಡಿದೆ. ವೈದ್ಯರು ಆ್ಯಂಟಿ ಬಯಾಟಿಕ್‌ನೀಡುವ ಸಂದರ್ಭ ಬಂದರೆ, ಚೀಟಿಯಲ್ಲಿ ಯಾವ ಕಾರಣಕ್ಕಾಗಿ ಅದನ್ನು ನೀಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿ ಸಬೇಕು. ಇದರಿಂದ ಅದನ್ನು ನೋಡಿ, ಔಷಧ ಕೊಡುವ ಮಳಿಗೆಯವರಿಗೂ ಸ್ಪಷ್ಟವಾಗುತ್ತದೆ. ಒಂದು ವೇಳೆ, ಆ ಔಷಧದ ಬಳಕೆಯ ಬಗ್ಗೆ ಮತ್ತೂಬ್ಬ ವೈದ್ಯರ ಅಭಿಪ್ರಾಯ ಪಡೆದುಕೊಳ್ಳುವ ಸಂದರ್ಭ ಬಂದಾಗ ಚೀಟಿಯಲ್ಲಿ ಬರೆದ ಕಾರಣಗಳು ಸ್ಪಷ್ಟವಾಗುತ್ತವೆ.
ಇದರ ಜತೆಗೆ ಸಾರ್ವಜನಿಕರೂ ಕೂಡ ತಾವೇ ಇಂಥ ಕಾಯಿಲೆಗಳಿಗೆ ಇಂಥ ಔಷಧ ನೀಡಬೇಕು ಎಂದು ಔಷಧ ಮಳಿಗೆಗಳಿಗೆ ದುಂಬಾಲು ಬಿದ್ದು ಖರೀದಿ ಸುತ್ತಾರೆ. ಇದರಿಂದ ಉಂಟಾಗುವ ಅಪಾಯಗಳನ್ನು ತಪ್ಪಿಲು ಮೆಡಿಕಲ್ ಶಾಪ್‌ನವರೂ ಕೂಡ ವೈದ್ಯರ ಚೀಟಿ ಇಲ್ಲದೆ ಮುಂದಿನ ದಿನಗಳಲ್ಲಿ ಔಷಧ ಕೊಡುವ ಕೆಟ್ಟ ಪರಿಪಾಠಕ್ಕೆ ಪೂರ್ಣ ವಿರಾಮ ಬಿದ್ದಂತೆ ಆಗುತ್ತದೆ. ಬದಲಾಗಿರುವ ಪರಿಸ್ಥಿತಿಯಲ್ಲಿ ಆರೋಗ್ಯ ಸಮಸ್ಯೆ ಉಂಟಾದರೂ, ಅನಗತ್ಯ ಔಷಧೋಪಚಾರ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಡಿಜಿಎಚ್‌ಎಸ್ ಆದೇಶ ಸ್ತುತ್ಯರ್ಹ.