ನಮಗಿರುವುದು ಒಂದೇ ಭೂಮಿ. ಆಕೆಯೇ ಸಮಸ್ತ ಜೀವ ಸಂಕುಲದ ತಾಯಿಯಾಗಿದ್ದಾಳೆ. ಭೂಮಿ ಹಾಗೂ ಪರಿಸರ ಮಾಲಿನ್ಯಗೊಳಿಸುವ, ನಾಶ ಮಾಡುವ ಹಕ್ಕು ಯಾರಿಗೂ ಇಲ್ಲ. ಆದರೂ ನಾವು ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್ ಗಳು ಸುತ್ತಮುತ್ತಲಿನ ಪರಿಸರವನ್ನು ನಾಶಮಾಡುತ್ತಿದೆ. ಇದೆಲ್ಲವೂ ತಿಳಿದಿದ್ದರೂ ಸಹ ಮನುಷ್ಯ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಪರಿಸರ ವಿನಾಶದ ಪ್ರತೀಕವೆಂದರೆ ತಪ್ಪಾಗಲಾರದು.
ಪ್ಲಾಸ್ಟಿಕ್ ಬಳಕೆಯನ್ನು ನಾವು ಪ್ರತೀ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಮಾಡುತ್ತಲೇ ಇರುತ್ತೇವೆ. ಅದು ನಮ್ಮೆಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇತ್ತೀಚೆಗೆ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಿದ್ದರು ಕೂಡ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಲೇ ಇದೆ ಎನ್ನುವುದು ಚಿಂತನೆಯ ವಿಷಯವಾಗಿದೆ. ಚಿಲ್ಲರೆ ಮಾರಾಟಗಾರರಿಂದ ಮೊದಲ ಬಾರಿ ಉಲ್ಲಂಘನೆಗೆ 2,000 ರೂ., ಎರಡನೇ ಬಾರಿಗೆ 5,000 ರೂ. ಮತ್ತು ಮೂರನೇ ಬಾರಿ ಉಲ್ಲಂಘನೆಗೆ 10,000 ರೂ. ಗಳ ದಂಡವನ್ನು ವಿಧಿಸುವ ಕೆಲಸವನ್ನು ಬೆಂಗಳೂರಿನ ನಗರಗಳಲ್ಲಿದೆ. ಅಲ್ಲದೆ 40 ಮೈಕ್ರಾನ್‌ಗಿಂತ ತೆಳುವಾದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪನ್ನ ಹಾಗೂ ಥರ್ಮಕೋಲ್, ಮೈಕೋ ಬೀಡ್ಸ್ ಬಳಸಿ ತಯಾರಿಸುವ ವಸ್ತುಗಳನ್ನು ನಿಷೇಧಿಸಲಾಗಿದೆ. ಕ್ಯಾರಿ ಬ್ಯಾಗ್, ಊಟದ ಮೇಜಿನ ಮೇಲೆ ಬಳಸುವ ಪ್ಲಾಸ್ಟಿಕ್ ಸೀಟು, ಥರ್ಮಾಕೋಲ್ ಪ್ಲೇಟ್, ನೀರಿನ ಲೋಟ, ಬ್ಯಾನರ್‌ಗೆ ನಿಷೇಧ ಹೇರಲಾಗಿದ್ದರೂ ತಮ್ಮ ಪ್ರಮುಖ ರಾಜಕೀಯ ನಾಯಕರು ನೆಚ್ಚಿನ ಕಲಾವಿದರಿಗೆ ಬ್ಯಾನರ್, ಪ್ರಿಂಟಿಂಗ್ಸ್ ಬಳಸುವ ಹಾವಳಿ ಇನ್ನೂ ಮುಂದುವರಿಯುತ್ತಲೇ ಇದೆ.
ಇದಲ್ಲದೆ ಇಯರ್ ಬಡ್ಸ್‌ಗಳು, ಬಲೂನ್ ಗಳು, ಕ್ಯಾಂಡಿ, ಐಸ್ ಕ್ರೀಮ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಪ್ಲೇಟ್‌ಗಳು, ಕಪ್, ಸಿಗರೇಟ್ ಪ್ಯಾಕ್‌ಗಳಿಗೆ ಬಳಸುವ ಪ್ಯಾಕೇಜಿಂಗ್ ವಸ್ತುಗಳು ಇತರ ವಸ್ತುಗಳು ಎಲ್ಲವೂ ಸಮಸ್ಯೆಯ ಮೂಲವಾಗಿದೆ. ಈಗಾಗಲೇ ರಾಜ್ಯಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿದ್ದರೂ, ನಮ್ಮ ಕರ್ನಾಟಕ ಸರಕಾರವು 2016ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ಇದು ಬರೀ ಹೆಸರಿಗೆ ಮಾತ್ರ. ಆದರೆ ಇನ್ನೂ ಸಂಪೂರ್ಣ ಅನುಷ್ಠಾನಕ್ಕೆ ಬಂದಿಲ್ಲ. ಕೆಲವು ಮಾರ್ಗೋಪಾಯಗಳು ಜಾರಿಗೊಳ್ಳದಿರುವುದು ಸರಕಾರದ ಕೆಲವು ಬೇಜವಾಬ್ದಾರಿತನವನ್ನು ಎದ್ದು ತೋರಿಸುತ್ತದೆ. ಹಾಗೂ ಈ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದೇ ಯಕ್ಷ ಪ್ರಶ್ನೆಯಾಗಿದೆ. ಜನರು ಸರಕಾರದ ನಿಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ ಕಷ್ಟಕರವಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ? ಹೊಟೇಲ್ ಪಾರ್ಸೆಲ್‌ಗಳಿಗೆ ಮನೆಯಿಂದಲೇ ಬಟ್ಟೆಯ ಬ್ಯಾಗ್‌ಗಳನ್ನು, ಸ್ಟೀಲ್ ಡಬ್ಬಗಳನ್ನು ತೆಗೆದು ಕೊಂಡು ಬರುವ ಗ್ರಾಹಕರಿಗೆ ಕನಿಷ್ಠ ರಿಯಾಯಿತಿ ನೀಡಿ ಪ್ರೋತ್ಸಾಹಿಸಲು ಪ್ರಾರಂಭಿಸಿದಾಗ ಸಮಸ್ಯೆಗಳು ಬಗೆಹರಿಯಬಹುದು. ಕೆಲವು ಹೊಟೇಲ್‌ಗಳು ಅದನ್ನು ಪಾಲಿಸುತ್ತಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಸರಕಾರ ದಿಟ್ಟ ಕ್ರಮಕ್ಕೆ ಮುಂದಾಗಬೇಕಿದೆ.
–ಗಿರೀಶ ಜೆ. ತುಮಕೂರು ವಿ.ವಿ