ಬೆಂಗಳೂರು: ಬರೀ ವಾಹನಗಳಿಂದ ತುಂಬಿತುಳುಕುತ್ತಿದ್ದ ರಸ್ತೆಗಳು ಭಾನುವಾರ ಬಿಕೋ ಎನ್ನುತ್ತಿದ್ದವು. ಇದರಿಂದ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ವಾಯುಮಾಲಿನ್ಯ ಕುಸಿದಿದ್ದು, ಬಹುತೇಕ ಕಡೆಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 75ಕ್ಕಿಂತ ಕಡಿಮೆ ಇದೆ.
ಇದು “ಜನತಾ ಕರ್ಫ್ಯೂ’ಗೆ ಬೆಂಗಳೂರಿಗರು ನೀಡಿದ ಸ್ಪಂದನೆಯ ಎಫೆಕ್ಟ್!
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಶೇ. 95ರಷ್ಟು ವಾಹನ ಸಂಚಾರ ಇರಲಿಲ್ಲ. ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ರೈಲು ನಿಲ್ದಾಣ, ಕಾಡಬೀಸನಹಳ್ಳಿ ಹೊರತುಪಡಿಸಿದರೆ, ಉಳಿದ ಕಡೆಗಳಲ್ಲಿ ಸೂಚ್ಯಂಕ 75ಕ್ಕಿಂತ ಕಡಿಮೆ ಇದ್ದುದು ಕಂಡುಬಂದಿದೆ.
ಆ ಪೈಕಿ ಹೆಬ್ಟಾಳದಲ್ಲಿ 71, ಸಿಟಿ ರೈಲ್ವೆ ನಿಲ್ದಾಣದಲ್ಲಿ 134, ಕಾಡಬೀಸನಹಳ್ಳಿ 116, ಬಿಟಿಎಂ ಲೇಔಟ್‌ನಲ್ಲಿ 51, ಸಿಲ್ಕ್ಬೋರ್ಡ್ 73, ಬಾಪೂಜಿ ನಗರದಲ್ಲಿ 75, ಹೊಂಬೇಗೌಡ ನಗರದಲ್ಲಿ 75 ಹಾಗೂ ಜಯನಗರ 5ನೇ ಹಂತದಲ್ಲಿ 69 ಸೂಚ್ಯಂಕ ದಾಖಲಾಗಿದೆ. ಈ ಭಾಗದಲ್ಲಿ ಸಾಮಾನ್ಯವಾಗಿ ದಿನಗಳಲ್ಲಿ ಪೀಕ್ ಅವರ್‌ನಲ್ಲಿ ವಾಯುಗುಣಮಟ್ಟ ಸೂಚ್ಯಂಕ 100ರ ಆಸುಪಾಸು ಇರುತ್ತಿತ್ತು. ಇನ್ನು ಕೋವಿಡ್ 19 ವೈರಸ್ ಭೀತಿ ಸೃಷ್ಟಿಯಾದ ದಿನದಿಂದ ಈ ಇಳಿಮುಖ ಕಂಡುಬರುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ನಗರದ ಹಲವು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿರುವುದೂ ಈ ಶುದ್ಧಗಾಳಿಗೆ ಕೊಡುಗೆ ನೀಡಿದೆ ಎನ್ನಲಾಗಿದೆ.