Advertisement
1980ರ ದಶಕದ ದ್ವಿತೀಯಾರ್ಧದ ದಿನಗಳು ಕಾಶ್ಮೀರ ಕಣಿವೆಯಲ್ಲಿ ವಾಸವಾಗಿದ್ದ ಪಂಡಿತ ಸಮುದಾಯದ ನಮಗೆ ಅತ್ಯಂತ ಕರಾಳವಾಗಿದ್ದವು. ದಶಕಗಳಿಂದ ವ್ಯವಸ್ಥಿತವಾಗಿ ನಡೆದುಬಂದ ದೌರ್ಜನ್ಯದ ಚರಮಘಟ್ಟ ತಲುಪುವ ಸಂದರ್ಭ ನಿರ್ಮಾಣವಾಗಿತ್ತು. ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮತ್ತು ಇಸ್ಲಾಮಿಕ್ ಉಗ್ರವಾದದ ಅಟ್ಟಹಾಸ ದಿಂದಾಗಿ ಸುಮಾರು 6 ಲಕ್ಷ ಕಾಶ್ಮೀರಿ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ವ್ಯವಹಾರ, ಆಸ್ತಿಪಾಸ್ತಿಗಳನ್ನು, ಮಂದಿರ, ಶ್ರದ್ಧಾಕೇಂದ್ರಗಳನ್ನೆಲ್ಲ ಬಿಟ್ಟು ಪ್ರಾಣ ಕೈಯಲ್ಲಿ ಹಿಡಿದು ಓಡಬೇಕಾಯಿತು.
Related Articles
Advertisement
ಇಂದು ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬ ತನ್ನ ಬೇರುಗಳನ್ನು ಹುಡುಕಿಕೊಂಡು ಪೂರ್ವಜರು ವಾಸವಾಗಿದ್ದ ಸ್ಥಳಕ್ಕೆ ಹೊರಟರೆ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು-ಬೆದರಿಕೆಗಳನ್ನು ಎದುರಿಸಬೇಕಾಗಿದೆ. ಒಂದು ಕಾಲದಲ್ಲಿ ನಮ್ಮದೇ ನೆರೆಹೊರೆಯಾಗಿದ್ದವರು ಇಂದು ಶತ್ರುಗಳಂತೆ ಕಾಣುತ್ತಾರೆ. ಕಾರಣ ನಮ್ಮ ಜಮೀನು, ಆಸ್ತಿ ಮನೆಗಳನ್ನು ಅವರು ಕಬಾ ಮಾಡಿಕೊಂಡಿದ್ದಾರೆ. ಪಂಡಿತರೇನಾದರೂ ವಾಪಸ್ಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕೃತಿಯ ಮೇರು ಶಿಖರ ಅಭಿನವ ಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ “ಭೈರವ ಗುಹೆ’ ಯಾವುದೋ ಪೀರರ ಮಸೀದಿಯಾಗಿದೆ.
ಇಷ್ಟೆಲ್ಲ ಅತ್ಯಾಚಾರ ಅನಾಚಾರ ನಡೆದದ್ದು ಪ್ರತ್ಯೇಕತಾವಾದಿಗಳು ಮತ್ತು ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪಟ್ಟಭದ್ರರಾಗಿ ಕಳೆದ ಏಳು ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಕಾಶ್ಮೀರ ಕಣಿವೆಯ ಕೆಲವು ರಾಜಕೀಯ ಪರಿವಾರಗಳ ನೆರಳಿನಲ್ಲೇ. ಇವರ ಕೈಯಲ್ಲಿ ಸಿಕ್ಕಿ 370ನೇ ವಿಧಿ ದುರಪಯೋಗವಾಗುತ್ತಾ ಬಂದಿದೆ. ದೌರ್ಭಾಗ್ಯವೆಂದರೆ 370ನೇ ವಿಧಿಯನ್ನು ದೇಶದ ಇತರ ಭಾಗಗಳಲ್ಲಿ ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡ ಕಾಂಗ್ರೆಸ್ ಮತ್ತಿತರ ತಥಾಕಥಿತ ಸೆಕ್ಯುಲರ್ ಪಕ್ಷಗಳು 370ನೇ ವಿಧಿ ಮತ್ತು ಆರ್ಟಿ ಕಲ್ 35ಎ ಕಾರ ಣ ದಿಂದ ನಡೆದಿರುವ ದೌರ್ಜನ್ಯವನ್ನು ಮಾತ್ರ ಚರ್ಚಿಸಲೂ ಸಿದ್ಧರಾಗಿಲ್ಲ.
ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಕೊನೆಗೊಳಿಸುವ ಭರವಸೆ ನೀಡಿದ್ದ ಬಿಜೆಪಿ ದೃಢ ಹೆಜ್ಜೆಯನ್ನು ಇಟ್ಟಿದೆ. ಆರ್ಟಿಕಲ್ 370 ಮತ್ತು 35ಎ ಕೊನೆಗೊಳ್ಳುವುದರೊಂದಿಗೆ ಕಾಶ್ಮೀರ ಕಣಿವೆ ಪ್ರತ್ಯೇಕತಾವಾದ, ಇಸ್ಲಾಂ ಭಯೋತ್ಪಾದನೆ ಮತ್ತು ಕಾಶ್ಮೀರಿ ಕಣಿವೆಯ ಸ್ವಾರ್ಥ ರಾಜಕಾರಣಿ ಕುಟುಂಬಗಳ ಕಪಿಮುಷ್ಟಿಯಿಂದ ಜಮ್ಮು ಕಾಶ್ಮೀರ ಮುಕ್ತವಾಗುವ ಭರವಸೆ ಮೂಡಿದೆ. ತಮ್ಮ ಬೇರಿನಿಂದ ಕಡಿದುಕೊಂಡು ನಿರಾಶ್ರಿತರಾದ ಪಂಡಿತ ಸಮುದಾಯ ಮತ್ತೆ ತಮ್ಮ ಪೂರ್ವಜರ ಭೂಮಿಗೆ ಮರಳುವ ಕನಸು ಜಾಗೃತಗೊಂಡಿದೆ.
(ಕಾಶ್ಮೀರದಿಂದ ಬಲವಂತವಾಗಿ ಹೊರದಬ್ಬಲ್ಪಟ್ಟು ಬೆಂಗಳೂರಿನಲ್ಲಿ ನೆಲೆಗೊಂಡವರು)
* ದಿಲೀಪ್ ಕಾಚ್ರು, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ