ಕೋವಿಡ್ ಬಂದಾಗಿನಿಂದ ಎಲ್ಲವೂ ವರ್ಕ್ ಫ್ರಮ್ ಹೋಮ್. ಅದರಂತೆ ಸಾಫ್ಟ್ ವೇರ್ ಅಳಿಯ ಕೋಣೆಯಲ್ಲಿ ಕಿಟಕಿ ಎದುರು ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದರು. ಸಮಯ-ಬೆಳಗಿನ 10 ಗಂಟೆ. ನಾನು ಮೂಲೆಯ ಮಂಚದ ಮೇಲೆ ಕುಳಿತು ದಿನಪತ್ರಿಕೆ ತಿರುವುತ್ತಿದ್ದೆ.
ಒಮ್ಮೆಲೇ ಚಿಂವ್…ಚಿಂವ್ ಶಬ್ದದ ಮೊರೆತ. ನೋಡಿದರೆ ಅಲ್ಲೊಬ್ಬ ವಿಶೇಷ ಅತಿಥಿ! ಚೆಂದದ ಪಂಚರಂಗಿ ಗಿಳಿಯೊಂದು ಕಿಟಕಿಯ ಗ್ರಿಲ್ಸ್ ದಾಟಿ ಒಳ ಬಂದು ಕುಳಿತು ಲ್ಯಾಪ್‌ಟಾಪ್ ಹಾಗೂ ಅದರ ಒಡೆಯನನ್ನೇ ನೋಡುತ್ತಿತ್ತು,ಅಳಿಯಂದಿರು ಅಕ್ಕರೆಯೊಂದಿಗೆ ದೂರದಿಂದ ಬಂದಂಥ ಸುಂದರಾಂಗ ಜಾಣ ಎನ್ನುತ್ತಾ ಕೈ ಚಾಚಿದರು. ಗಿಣಿರಾಮ ಬೆದರುತ್ತಲೇ ಬಲಿಗಾಲಿಟ್ಟು ಮುಂದೆ ಬಂದ, ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಟೇಬಲ್ ತುಂಬಾ ಕಲರವ ಮೂಡಿಸಿದ.
ಇಲ್ಲಿ ಶತ್ರುಗಳಾರೂ ಇಲ್ಲ ಎಂಬ ಧೈರ್ಯ ಮೂಡಿದ ನಂತರ ಲ್ಯಾಪ್‌ಟಾಪ್ ಪರದೆಯನ್ನು ನೋಡಿ ಈ ಸಾಫ್ಟ್ ವೇರ್ ಎಂಜಿನಿಯರ್‌ನ ಕಾಯಕಪರೀಕ್ಷೆಗೈದ. ಬಟನ್‌ಗಳ ಮೇಲೆಲ್ಲ ಓಡಾಡಿದ.ಅಷ್ಟರಲ್ಲಾಗಲೇ ಒಳಗಿದ್ದ ಮಗಳು, ಮೊಮ್ಮಕ್ಕಳು ಜೋಳ, ಗೋಧಿ, ಹಣ್ಣಿನ ಚೂರು ತಂದು ಅತಿಥಿ ಸತ್ಕಾರ ಮಾಡಿಯಾಗಿತ್ತು.
ಆಕ್ಷೇಪಿಸದೇ ಮೊಮ್ಮಕ್ಕಳೊಂದಿಗೆ ಪೋಸು ಕೊಟ್ಟ. ಹೊಟ್ಟೆ ಭರ್ತಿಯಾಯಿತೇನೋ, ಬೈ ಹೇಳಿ ಪುರ್ರೆಂದು ಕಿಟಕಿಯಿಂದ ಹಾರಿಹೋದ, ಐದು ನಿಮಿಷಗಳಷ್ಟೇ ಇದ್ದದು ನಿಜವಾದರೂ, ಐದು ವರ್ಷಗಳಿಗಾಗುವಷ್ಟು ಸವಿ ನೆನಪು ತುಂಬಿ ಹೋಗಿದ್ದ.
-ಕೆ.ಲೀಲಾ ಶ್ರೀನಿವಾಸ್