Advertisement

ನಾಯಕೀ ಭಾವದ ಅಪರೂಪದ ಅಭಿವ್ಯಕ್ತಿ

08:49 PM Dec 12, 2019 | mahesh |

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ನಡೆಯುತ್ತಿರುವ ಹೆಜ್ಜೆ-ಗೆಜ್ಜೆ ಸಂಸ್ಥೆಯ ರಜತ ಮಹೋತ್ಸವದ ನೃತ್ಯಾಂಜಲಿಯ 28ನೇ ಕಾರ್ಯಕ್ರಮವನ್ನು ನೀಡಿದವರು ಹೆಜ್ಜೆ-ಗೆಜ್ಜೆಯ ನಿರ್ದೇಶಕಿ ವಿ| ಯಶಾ ರಾಮಕೃಷ್ಣ ಮತ್ತು ಅವರ ಶಿಷ್ಯ ವೃಂದದವರು.

Advertisement

ಇದು ಒಂದು ಪ್ರಯೋಗಾತ್ಮಕವಾದ ನೃತ್ಯವಾಗಿತ್ತು. ಅಮರು ಕವಿ ವಿರಚಿತ ಅಮರು ಶ್ಲೋಕಗಳಲ್ಲಿ ಬರುವ ನಾಯಕೀ ಭಾವಗಳನ್ನು ಪ್ರಸ್ತುತ ಪಡಿಸುವ ವಿಷಯಾಧರಿತ ಏಕವ್ಯಕ್ತಿ ನೃತ್ಯವಿದು. ಮುಗ್ದಾ, ಸ್ವಾಧೀನ ಪತಿಕಾ, ವಾಸಿಕಾ ಸಜಾ, ವಿರಹೋತ್ಕಂಠಿಕಾ, ವಿಪ್ರಲಬ್ಧ, ಪ್ರೋಷಿತಾ ಭತೃìಶಾ, ಖಂಡಿತಾ, ಅಭಿಸಾರಿಕಾ ನಾಯಕಿಯರನ್ನು ಅಮರು ಕವಿಯು ಬಿಂಬಿಸಿದಂತೆ ವಿಶೇಷವಾಗಿ ಭಾವಾಭಿನಯ ಮೂಲಕ ತೋರಿಸಲಾಗಿತ್ತು. ವಿ| ಮಧೂರು ಬಾಲಸುಬ್ರಹ್ಮಣ್ಯಂ ಮತ್ತು ವಿ| ವಿನುತಾ ಆಚಾರ್ಯರು ಸಂಗೀತ ಸಂಯೋಜನೆ ಮಾಡಿದ್ದರು. ಸಂಪೂರ್ಣ ಒಂದೂವರೆ ತಾಸಿನ ನೃತ್ಯ ಕಾರ್ಯಕ್ರಮವನ್ನು ಯಶಾ ರಾಮಕೃಷ್ಣ ನಿರ್ದೇಶಿಸಿದ್ದರು.

ಆರಂಭದಲ್ಲಿ ಯಶಾ ಅವರು ಅಮರು ಶತಕದ ಆಯ್ದ ಶ್ಲೋಕಗಳ ತಾತ್ಪರ್ಯವನ್ನು ಹೇಳಿ, ಸ್ವತಃ ಎಲ್ಲ ನಾಯಕೀ ಭಾವಗಳನ್ನು ಏಕವ್ಯಕ್ತಿ ಪ್ರದರ್ಶನದಲ್ಲಿ ಅಭಿನಯ ಕೌಶಲ ಮೂಲಕ ಪ್ರದರ್ಶಿಸಿದರು. ಅನಂತರ ಒಂಭತ್ತು ಶಿಷ್ಯೆಯರಿಂದ ಸಮೂಹ ನೃತ್ಯದ ಮೂಲಕ ಸಮಂಜಸವಾಗಿ ನಾಯಕೀ ಭಾವನೆಗಳ ಲಕ್ಷಣಗಳನ್ನು ಸೂಕ್ತವಾದ ನೃತ್ಯಾಭಿನಯಗಳ ಮೂಲಕ ಸಮರ್ಪಕವಾಗಿ ಬಿಂಬಿಸಿದರು.

ನೃತ್ಯ ಸಂಯೋಜನೆಯಲ್ಲಿ ಪ್ರತಿ ನಾಯಕಿಗೂ ಕೂಡ ಹೊಂದುವಂಥ ರಾಗಗಳಲ್ಲಿ ಸ್ವರವಿದ್ದು, ರಾಗಾಲಾಪನೆಯನ್ನು ಹೊಂದಿದ್ದು, ಜತಿ ಜೋಡಣೆಯಲ್ಲಿ ಭಾವಕ್ಕೆ ಹೊಂದುವಂಥ ಹಸ್ತ ಮುದ್ರೆಗಳು, ಕಾಲ್ಚನೆಗಳು, ನೃತ್ಯ ಸಂಯೋಜನೆಯು ಈ ಪ್ರಸ್ತುತಿಗೆ ವಿಶೇಷವಾದ ಮೆರುಗನ್ನು ನೀಡಿತು. ಪ್ರತಿಯೊಂದು ನಾಯಕೀ ಭಾವಕ್ಕೆ 2-3 ಶ್ಲೋಕಗಳನ್ನು ಬಳಸಿ ಸನ್ನಿವೇಶವನ್ನು ಕಲ್ಪಿಸಿದ್ದು ವಿಶೇಷವಾಗಿತ್ತು. ಸಮೂಹ ನೃತ್ಯಾಭಿನಯದಲ್ಲಿ ಸಮರ್ಪಕ ಹಿಮ್ಮೇಳದೊಂದಿಗೆ ನಾಯಕೀ
ಭಾವವನ್ನು ಹೇಗೆ ಉತ್ತಮವಾಗಿ ಅಭಿವ್ಯಕ್ತಿಸಬಹುದು ಎಂಬುದನ್ನು ಯಶಾ ತೋರಿಸಿದರು. ಒಟ್ಟಾರೆಯಾಗಿ ಇದು ವಿದ್ವತ್‌ಪೂರ್ಣವಾದ ನೃತ್ಯ ಪ್ರಸ್ತುತಿಯಾಗಿತ್ತು.

ಕು| ರಕ್ಷಾ ಶೆಣೈ (ಮುಗ್ದಾ ನಾಯಕಿ), ಕು| ಕಾವ್ಯಾ ಶೆಟ್ಟಿ, (ಸ್ವಾಧೀನ ಪತಿಕಾ), ಶ್ರೀಲಕ್ಷ್ಮೀ (ವಾಸಿಕಾ ಸಜಾç), ವಿ|ಶ್ರಾವ್ಯಾ(ವಿಪ್ರಲಬ್ಧ), ಜಯಲಕ್ಷ್ಮೀ (ವಿರಹೋತ್ಕಂಠಿಕಾ), ವಿ| ಅಕ್ಷಿತಾ (ಖಂಡಿತಾ), ಕು|ಸ್ಮಿತಾ (ಪ್ರೋಷಿತ ಭತೃಶಾ), ಕು|ಸಂಸ್ಕೃತಿಕ(ಅಭಿಸಾರಿಕಾ) ಆಯಾ ನಾಯಕೀ ಭಾವಗಳನ್ನು ಸಮರ್ಥವಾಗಿ ಬಿಂಬಿಸಿದರು.

Advertisement

ನಟುವಾಂಗದಲ್ಲಿ ಯಶಾ, ಹಾಡುಗಾರಿಕೆಯಲ್ಲಿ ವಿ| ವಿನುತಾ ಆಚಾರ್ಯ, ಮೃದಂಗದಲ್ಲಿ ವಿ| ಹರ್ಷ ಸಾಮಗ, ಕೊಳಲಿನಲ್ಲಿ ವಿ| ನಿತೀಶ್‌ ಅಮ್ಮಣ್ಣಾಯ, ಕೀ ಬೋರ್ಡ್‌ನಲ್ಲಿ ಮುರಳೀಧರ ಸಹಕರಿಸಿದರು.

ಅನಿತಾ ಜಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next