ವೇಣೂರು: ಗಬ್ಬದಲ್ಲಿರುವಾಗಲೇ ದೇಹದಿಂದ ಹೊರಗೆ ಕರುಳಿನ ಬಾಗಗಳು ಬೆಳವಣಿಗೆಯಾಗುವ ಅತ್ಯಂತ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದ ಕರುವನ್ನು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಯಶಸ್ವಿಯಾಗಿ ಪಶು ವೈದ್ಯ ಡಾ| ವಿನಯ ಕುಮಾರ್‌ರವರು ಹೊರತೆಗೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಪುರಿಯದಲ್ಲಿ ತುಂಬು ಗಬ್ಬದಲ್ಲಿದ್ದ ದನ ಅನಾರೋಗ್ಯದಿಂದ ಬಳಲುತ್ತಿತ್ತು. ವಿಷಯ ತಿಳಿದ ಮಡಂತ್ಯಾರು ಪಶು ಚಿಕಿತ್ಸಾಲಯ ಪಶು ವೈದ್ಯ ಡಾ| ವಿನಯ ಕುಮಾರ್‌ರವರು ಮನೆಗೆ ಆಗಮಿಸಿ ದನವನ್ನು ಪರಿಶೀಲಿಸಿದಾಗ ಗಬ್ಬದಲ್ಲಿರುವ ಕರು ಸ್ಕಿಸ್ಟೊಸೋಮಸ್ ರಿಫ್ಲೆಕ್ಸಸ್ ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿರುವುದು ಕಂಡು ಬಂದಿದೆ. ತಕ್ಷಣ ವೈದ್ಯರು ಸುಮಾರು 2 ತಾಸುಗಳ ಕಾಲ ದನವನ್ನು ಚಿಕಿತ್ಸೆಗೆ ಒಳಪಡಿಸಿ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ರೋಗಪೀಡಿತ ಕರುವಿನ ಮೃತದೇಹವನ್ನು ಹೊರಗೆತೆದು ದನವನ್ನು ರಕ್ಷಿಸಿದ್ದಾರೆ. ವೈದ್ಯರ ಸಮಯಪ್ರಜ್ಞೆ ಹಾಗೂ ತಾಂತ್ರಿಕ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಏನಿದು ಸ್ಕಿಸ್ಟೊಸೋಮಸ್ ರಿಫ್ಲೆಕ್ಸಸ್?
ಇದು ಆಹಾರವನ್ನು ಮೆಲುಕು ಹಾಕುವ ಪ್ರಾಣಿಗಳ ಗಬ್ಬದ ನವಜಾತ ಕರುವಿಗೆ ಬರುವ ತೀರಾ ಅಪರೂಪದ ಮತ್ತು ಮಾರಣಾಂತಿಕ ಖಾಯಿಲೆ. ದನದ ಎದೆಗೂಡಿನ ಚರ್ಮ ಒಳಬಾಗಕ್ಕೆ ಒಡ್ಡುವಿಕೆ, ಅಸಹಜ ಜೀರ್ಣಕ್ರಿಯೆ ಮತ್ತು ಮೂತ್ರ ಜನಕಾಂಗ ಮತ್ತು ಜನನೇಂದ್ರೀಯಗಳಿಗೆ ಸಂಬಂಧಿತ ಕಾಯಿಲೆಗಳು ಕಂಡು ಬರುವುದು ಇದರ ಪ್ರಮುಖ ಲಕ್ಷಣಗಳು. ಹೆಚ್ಚಾಗಿ ಇದು ಅನುವಂಶಿಕವಾಗಿ ಬರುವ ಕಾಯಿಲೆ ಆಗಿದೆ. ಗಬ್ಬದಲ್ಲಿರುವ ಕರು ಬೆಳವಣಿಗೆಯಾಗುತ್ತಿದ್ದಂತೆ ಅದರ ಹೊರಗಡೆ ಹರಡಿಕೊಂಡಿರುವ ಕರುಳು ಸಹ ಬೆಳೆಯುತ್ತಿರುತ್ತದೆ. ಈ ಖಾಯಿಲೆಗೆ ತುತ್ತಾದ ದನ ಕರುವನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಹೊರಗಡೆ ತೆಗೆಯಲು ಅಸಾಧ್ಯ ಎನ್ನುತ್ತದೆ ಪಶು ವೈದ್ಯಲೋಕ.
ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ರೋಗ: Schistosomus reflus and kyphosis ಎಂಬುದು ಪಶುಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ರೋಗ. ಗಬ್ಬದಲ್ಲಿರುವಾಗಲೇ ಕರುವಿನ ದೇಹದ ಹೊರಗಡೆ ಕರುಳುಗಳು ಹಾಗೂ ಇತರ ಭಾಗಗಳು ಬೆಳವಣಿಗೆಯಾಗುತ್ತಾ ಹೋಗುತ್ತದೆ. ಈ ಖಾಯಿಲೆಯಿಂದ ಕರು ಬದುಕುಳಿಯಲು ಸಾಧ್ಯವಿಲ್ಲ. ದನದ ಪ್ರಾಣಕ್ಕೂ ಸಂಚಕಾರ ತಂದೊಡ್ಡುವ ಅಪರೂಪದ ಖಾಯಿಲೆ. ಸುಮಾರು ೨ ಗಂಟೆ ಚಿಕಿತ್ಸೆಗೆ ಒಳಪಡಿಸಿ ದನವನ್ನು ರಕ್ಷಿಸಲಾಗಿದೆ. –
ಡಾ| ವಿನಯ ಕುಮಾರ್, ಪಶು ವೈದ್ಯಾಧಿಕಾರಿ ಪಶು ಆಸ್ಪತ್ರೆ, ಮಡಂತ್ಯಾರು
-ಪದ್ಮನಾಭ ವೇಣೂರು