ಮಣಿಪಾಲ: ಸಿವಿಯರ್ ಕಂಬೈನ್ಡ್ ಇಮ್ಯುನೊಡಿಫಿಶಿಯೆನ್ಸಿ ಎಂಬ ತೀವ್ರ ತರಹದ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ಮಗುವಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರ ತಂಡವು ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ- ಹೊಂದಾಣಿಕೆಯ ಅಸ್ಥಿ ಮಜ್ಜೆ ಕಸಿ ನಡೆಸಿದೆ. ಇದು ಕರಾವಳಿ ಕರ್ನಾಟಕದಲ್ಲಿ ಮೊದಲ ಪ್ರಕರಣವಾಗಿದೆ.
ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಮಗುವನ್ನು ಉಳಿಸಲು ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕಾಲಜಿ ವಿಭಾಗದ ವೈದ್ಯರ ತಂಡವು ವಿಶಿಷ್ಟವಾದ ಅಸ್ಥಿಮಜ್ಜೆಯ ಕಸಿ ಮಾಡಲು ನಿರ್ಧರಿಸಿತ್ತು.
ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಅರ್ಚನಾ ಎಂ.ವಿ. ಮಾತನಾಡಿ, “ರೋಗಿಯು ಮಾರಣಾಂತಿಕ ಕ್ಷಯರೋಗದ ಸೋಂಕಿನಿಂದ ಬಳಲುತ್ತಿದ್ದ ಕಾರಣ ಕೀಮೋಥೆರಪಿ ಮತ್ತು ಇಮ್ಯುನೊಸಪ್ರಸಿವ್ ಔಷಧಗಳನ್ನು ಬಳಸಲಾಗಲಿಲ್ಲ. ಅಂತಹ ಔಷಧಗಳನ್ನು ತಪ್ಪಿಸಲು, ಟಿಸಿಆರ್ ಆಲ್ಫಾ ಬೀಟಾ ಡಿಪ್ಲೀಷನ್ ಎಂದು ಕರೆಯಲ್ಪಡುವ ಸ್ಟೆಮ್ ಸೆಲ್ ಗ್ರಾಫ್ಟ್ ಮ್ಯಾನಿಪ್ಯುಲೇಶನ್ ತಂತ್ರಜ್ಞಾನವನ್ನು ಬಳಸಲಾಯಿತು ಎಂದರು.
ಮಗುವಿಗೆ ಮೂಳೆ ಮಜ್ಜೆಯ ಕಸಿ ನಡೆಸಿ, 6 ವಾರಗಳ ಅನಂತರ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಗುವು ರೋಗ ಮತ್ತು ಸೋಂಕಿನಿಂದ ಮುಕ್ತವಾಗಿ, ಆರೋಗ್ಯಕರ ಜೀವನ ನಡೆಸುವಂತಾಗಿದೆ ಎಂದರು.
ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ| ವಾಸುದೇವ ಭಟ್ ಕೆ. ಮಾಹಿತಿ ನೀಡಿ, ರಾಜ್ಯದ ಕರಾವಳಿ ಪ್ರದೇಶದಲ್ಲಿ ಯಶಸ್ವಿ ಟಿ ಸೆಲ್-ಡಿಪ್ಲೀಟೆಡ್ ಹ್ಯಾಪ್ಲೋಡೆಂಟಿಕಲ್ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾದ ಮೊದಲ ಪ್ರಕರಣ ಇದು ಎಂದರು.
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಅವರು ವೈದ್ಯರ ಮತ್ತು ಶುಶ್ರೂಷಾ ಸೇವೆಗಳ ತಂಡದ ಕಾರ್ಯವನ್ನು ಶ್ಲಾಫಿಸಿದರು.