ಕಾರ್ಕಳ: ಹಿರ್ಗಾನ ಬಳಿಯ ಮನೆಯೊಂದರ ಬಾವಿಗೆ ಸೋಮವಾರ ಮುಂಜಾನೆ ಬಿದ್ದ ಅಪರೂಪದ ಕಪ್ಪು ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ.
ಸೋಮವಾರ ರಾತ್ರಿ ನಾಯಿಧಿಯನ್ನು ಬೇಟೆಯಾಡುವ ಭರದಲ್ಲಿ ಚಿರತೆಯು ಹಿರ್ಗಾನ ಗ್ರಾಮದ ಬಾಳೆಹಿತ್ಲು ನಿವಾಸಿ ರಾಜಾರಾಮ ಕಡಂಬ ಅವರ ಬಾವಿಗೆ ಬಿದ್ದಿತು. ಮುಂಜಾನೆ ಬಾವಿಯೊಳಗಿನಿಂದ ಪ್ರಾಣಿಯ ಗರ್ಜನೆ ಕೇಳಿದ್ದರಿಂದ ಬಾವಿಗೆ ಇಣುಕಿದ ಕಡಂಬ ಅವರಿಗೆ ಕಪ್ಪು ಚಿರತೆ ನೀರಲ್ಲಿ ಈಜಾಡುಧಿತ್ತಿರುವುದು ಕಂಡುಬಂತು. ತತ್‌ಕ್ಷಣ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖಾ ಸಿಬಂದಿ ಅಡಿಕೆ ಮರದ ಏಣಿ ನಿರ್ಮಿಸಿ ಬಾವಿಗೆ ಬಿಟ್ಟ ಕೆಲವು ಕ್ಷಣಗಳಲ್ಲಿ ಚಿರತೆ ಅದರ ಮೂಲಕ ಮೇಲೇರಿ ಬಂತು. ಕೂಡಲೇ ಅರಣ್ಯ ಇಲಾಖೆ ಸಿಬಂದಿ ಚಿರತೆಯನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾದರು. ಸುಮಾರು 2 ತಾಸು ಕಾರ್ಯಾಚರಣೆ ನಡೆಯಿತು.
ಮುಗಿಬಿದ್ದ ಜನ: ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸುವ ಮೊದಲೇ ಸ್ಥಳೀಯರು ಅಪರೂಪದ ಚಿರತೆ ನೋಡಲು ಜಾತ್ರೆಯಂತೆ ಜಮಾಯಿಸಿದ್ದರು. ಸ್ಥಳೀಯರು ಈ ಹಿಂದೆ ಕಪ್ಪು ಚಿರತೆಯನ್ನು ನೋಡಿರದೇ ಇದ್ದುದರಿಂದ ಅವರಲ್ಲಿ ಕುತೂಹಲ ಇತ್ತು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿಗಳಾದ ದಿನೇಶ್, ಪ್ರಕಾಶ ಪೂಜಾರಿ, ಉಪ ಅರಣ್ಯಾಧಿಕಾರಿ ರಾಜಶೇಖರ್, ಸಿಬಂದಿ ಮಂಜುನಾಥ, ಹುಕ್ರಪ್ಪ ಗೌಡ, ಜಿ. ಕೃಷ್ಣಪ್ಪ, ಕೆ. ಬಾಬು, ಶಮೀನ್, ಜಗದೀಶ ಶೇರಿಗಾರ್, ಮಹಾಂತೇಶ್, ಫಕೀರಪ್ಪ, ಮಿಥುನ್, ಅನ್ವರ್, ಶೇಖರ್ ಭಾಗವಹಿಸಿದ್ದರು. ಸ್ಥಳೀಯ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಶೆಟ್ಟಿ ಸಹಕರಿಸಿದರು.
ಅಪರೂಪದ ಅತಿಥಿ: ಪ್ಯಾಂಥೇರಾ ಪಾರ್ಡಸ್ ಎನ್ನುವ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುವ ಈ ಕಪ್ಪು ಚಿರತೆ (ಬ್ಲ್ಯಾಕ್ ಪ್ಯಾಂಥರ್) ಏಷ್ಯಾ ಹಾಗೂ ಆಫ್ರಿಕ ಖಂಡದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ ಇದು ಹೆಚ್ಚಾಗಿ ನೇಪಾಲ, ಅಸ್ಸಾಂಗಳಲ್ಲಿ ಕಂಡುಬರುತ್ತದೆ. ಕರ್ನಾಟಕದಲ್ಲಿನ ಕೆಲವೊಂದು ಅಭಯಾರಣ್ಯಗಳಲ್ಲಿಯೂ ಈ ಚಿರತೆ ಕಂಡುಬಂದಿದೆ. ಇದು ಜನರ ಕಣ್ಣಿಗೆ ಬೀಳುವುದು ಅಪರೂಪ.