Advertisement

ಅಪರೂಪದ ತೆಂಕುತಿಟ್ಟಿನ ಬೊಂಬೆಯಾಟ

06:09 PM Sep 19, 2019 | mahesh |

ಒಂದೆಡೆ ಪೂಜೆಗೊಳ್ಳುತ್ತಿರುವ ವಿಘ್ನೇಶ್ವರ. ಇನ್ನೊಂದೆಡೆ ಆರ್ಭಟಿಸುತ್ತಿರುವ ನರಕಾಸುರ. ವಿಘ್ನೇಶ್ವರ ಶಾಂತಚಿತ್ತನಾಗಿ ಕುಳಿತು ಸರ್ವವನ್ನೂ ವೀಕ್ಷಿಸುತ್ತಾನೆ. ಅಟ್ಟಹಾಸಗೈಯ್ಯುತ್ತಾ ನರಕಾಸುರ ನಡುಕ ಹುಟ್ಟಿಸುತ್ತಾನೆ. ವಿಘ್ನೇಶ್ವರನ ಸುತ್ತಲೂ ಕೋಟಿ ಸೂರ್ಯಪ್ರಕಾಶ. ಭಯಾತಂಕ ಸೃಷ್ಟಿಸುವ ನರಕಾಸುರನ ದಾಳಿಗೆ ಸರ್ವನಾಶ. ಮೂಡುಬೆಳ್ಳೆಯಲ್ಲಿ ನಲುವತ್ತನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೆಂಕುತಿಟ್ಟು ಯಕ್ಷಗಾನ ಬೊಂಬೆಯಾಟವನ್ನು ಆಯೋಜಿಸಲಾಗಿತ್ತು.

Advertisement

ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಪ್ರಸ್ತುತಪಡಿಸಿದ ನರಕಾಸುರ ವಧೆ-ಗರುಡ ಗರ್ವಭಂಗ ರಮ್ಯಾದ್ಭುತ ಸನ್ನಿವೇಶವನ್ನು ಸೃಷ್ಟಿಸಿ ಜನಮನ್ನಣೆ ಪಡೆಯಿತು. ಕೆ. ವೆಂಕಟಕೃಷ್ಣಯ್ಯ ಅವರು ಸ್ಥಾಪಿಸಿದ ಈ ಸಂಸ್ಥೆಯು ಯಕ್ಷಗಾನ ಕಲೆಗೆ ಕಾಯಕಲ್ಪ ನೀಡುತ್ತಿದ್ದು, ಪ್ರಸ್ತುತ ಏಕೈಕ ತೆಂಕುತಿಟ್ಟಿನ ಯಕ್ಷಗಾನ ಬೊಂಬೆಯಾಟ ತಂಡವಾಗಿದೆ.

ವಿ| ಕಲ್ಲಕಟ್ಟ ಲಕ್ಷ್ಮೀನಾರಾಯಣಯ್ಯರ ಧರ್ಮಪತ್ನಿ ಅಕ್ಕಮ್ಮ ಪಾರ್ತಿಸುಬ್ಬನ ವಂಶಜೆ. ವೆಂಕಟಕೃಷ್ಣಯ್ಯನವರು ಈ ದಂಪತಿಯ ಪುತ್ರ. ಅವರೇ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸ್ಥಾಪಕರು. ಅವರ ಪುತ್ರ ಕೆ. ವಿ. ರಮೇಶ ಸಂಘದ ನಿರ್ದೇಶಕರು ಮತ್ತು ಪ್ರಧಾನ ಸೂತ್ರಧಾರರು. ದೇಶವಿದೇಶಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನೀಡಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ.

ಬೆಳ್ಳೆಯಲ್ಲಿ ಪ್ರದರ್ಶನಗೊಂಡ ನರಕಾಸುರ ವಧೆ- ಗರುಡ ಗರ್ವಭಂಗ ಪ್ರಸಂಗ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಖ್ಯಾತ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಶ್ರುತಿ ಮಧುರ ಪದಶೈಲಿ, ಯಕ್ಷಗಾನದ ಪ್ರಸಿದ್ಧ ಕಲಾವಿದರ ಅರ್ಥಗಾರಿಕೆ, ಸೂತ್ರಧಾರರ ಅದ್ಭುತ ಕೈಚಳಕ ಈ ಪ್ರಸಂಗ ಯಶಸ್ವಿಯಾಗಲು ಮುಖ್ಯ ಕಾರಣ.

ಪ್ರಧಾನ ಸೂತ್ರಧಾರ ಕೆ. ವಿ. ರಮೇಶ ಅವರ ಸಹಸೂತ್ರಧಾರರಾದ ಡಾ| ಓಂಪ್ರಕಾಶ್‌ ಕೆ.ವಿ., ತಿರುಮಲೇಶ ಕೆ.ವಿ., ಸುದರ್ಶನ ಕೆ.ವಿ., ಚಂದ್ರಶೇಖರ ವಿ., ಅನೀಶ್‌ ಪಿಲಿಕುಂಜೆ ಅವರ ಕೈಚಳಕದಲ್ಲಿ ಯಕ್ಷಗಾನ ಬೊಂಬೆಗಳು ಜೀವಚೈತನ್ಯ ಪಡೆದು ಭಾವಪೂರ್ಣವಾಗಿ ಅಭಿನಯಿಸಿದುವು. ಒಂದು ಸಾರ್ಥಕ ರಂಗಪ್ರದರ್ಶನವಾಗಿ ಯಕ್ಷಗಾನ ಬೊಂಬೆಯಾಟ ದಾಖಲಾತಿ ಪಡೆಯಿತು.

Advertisement

ರಾಧಾಕೃಷ್ಣ ಕೆ. ಉಳಿಯತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next