ಮಲ್ಪೆ ಸಾರ್ವಜನಿಕ ಗಣೇಶೋತ್ಸವದ ಮೂಲ ರೂವಾರಿ ಮಲ್ಪೆಯ ಮಹಮ್ಮದ್ ಇಕ್ಬಾಲ್. ಇದು 1971ರಲ್ಲಿ ನಡೆದ ಘಟನೆ. ಮಹಮ್ಮದ್ ಇಕ್ಬಾಲ್ ಅವರು ಸಿಂಡಿಕೇಟ್ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಇವರ ಸ್ನೇಹಿತ ಶ್ಯಾಮ ಅಮೀನ್ ಅವರು ಕಿರಾಣಿ ಅಂಗಡಿ ನಡೆಸುತ್ತಿದ್ದರು. ಇಬ್ಬರೂ ಗಳಸ್ಯ ಕಂಠಸ್ಯ ಸ್ನೇಹಿತರು.
ಒಂದು ದಿನ ಅಂಗಡಿ ಎದುರು ಇಕ್ಬಾಲ್ ನಿಂತುಕೊಂಡಿರುವಾಗ ಕೈಗಾಡಿಯಲ್ಲಿ ವಿವಿಧ ರೀತಿಯ ಸಣ್ಣ ಗಾತ್ರದ ಗಣಪತಿ ವಿಗ್ರಹಗಳನ್ನು ಇರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಅದನ್ನು ನೋಡಿ ಇಕ್ಬಾಲ್ ಆಕರ್ಷಿತರಾದರು. ಆಗ ಮಲ್ಪೆ ಮಧ್ವರಾಜರ ಹೆಂಚಿನ ಕಾರ್ಖಾನೆಯಲ್ಲಿ ಆವೆ ಮಣ್ಣು ಸಿಗುತ್ತಿತ್ತು. ಇಕ್ಬಾಲ್ ಅವರು ಶ್ಯಾಮ್ ಅವರಲ್ಲಿ ತಾವೂ ಒಂದು ಗಣೇಶೋತ್ಸವವನ್ನು ನಡೆಸುವ ಸಲಹೆ ನೀಡಿದರು. ಹೆಂಚಿನ ಕಾರ್ಖಾನೆಗೆ ಹೋಗಿ ಮಣ್ಣು ತಂದರು.
ಶ್ಯಾಮ್ ಅವರ ಅಂಗಡಿ ಎದುರು ಎಂ.ಕೆ.ಮಂಜಪ್ಪ ಅವರ ಮನೆ ಆವರಣದಲ್ಲಿ ಇಬ್ಬರೂ ಸೇರಿ ಗಣಪತಿ ವಿಗ್ರಹವನ್ನು ನಿರ್ಮಿಸಿದರು. ಇದು ನಡೆದದ್ದು ಗಣೇಶ ಚತುರ್ಥಿ ದಿನ ತರಾತುರಿಯಲ್ಲಿ. ಸಂಜೆ ಪೂಜೆ ಮಾಡಿ ಆಸುಪಾಸಿನವರು ಒಟ್ಟಾಗಿ ಮಲ್ಪೆಯ ಧಕ್ಕೆ ಪ್ರದೇಶದಲ್ಲಿ ವಿಸರ್ಜನೆ ಮಾಡಿದರು.
‘ಇದು ಒಂದು ವರ್ಷ ಮಾಡಿದರೆ ಸಾಕಾಗದು. ಪ್ರತಿ ವರ್ಷವೂ ಮಾಡಬೇಕು’ ಎಂದು ಪರಿಸರದವರು ಸಲಹೆ ನೀಡಿದಂತೆ ಮರುವರ್ಷದಿಂದ ಎಲ್ಲರೂ ಸೇರಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಆರಂಭಿಸಿದರು. ಮರು ವರ್ಷದಿಂದ ವಿಗ್ರಹವನ್ನು ಕಲಾವಿದರಿಂದಲೇ ಮಾಡಿಸಿದರು.
ಇಕ್ಬಾಲ್ ಅವರು 1978ರಲ್ಲಿ ಮಡಿಕೇರಿ, ಅನಂತರ ಬೆಂಗಳೂರಿಗೆ ವರ್ಗವಾದರು. ಈಗ ನಿವೃತ್ತಿಗೊಂಡು 12 ವರ್ಷಗಳಾಗಿವೆ. ಗಣೇಶೋತ್ಸವಕ್ಕೆ ಈಗ 49ನೆಯ ವರ್ಷ ನಡೆಯುತ್ತಿದೆ. ಮುಂದಿನ ವರ್ಷ ಸುವರ್ಣ ಮಹೋತ್ಸವ ಆಚರಿಸಲು ಸಾರ್ವಜನಿಕರು ತುಂಬು ಉತ್ಸಾಹದಿಂದ ಇದ್ದಾರೆ. ಈ ಎಲ್ಲ ವರ್ಷಗಳಲ್ಲಿಯೂ ಎಲ್ಲೇ ಇದ್ದರೂ ಚೌತಿ ದಿನ ಇಕ್ಬಾಲ್ ಗಣೇಶೋತ್ಸವದಲ್ಲಿ ಹಾಜರಿರುತ್ತಿದ್ದರು, ಈಗಂತೂ ಮಲ್ಪೆಯಲ್ಲಿ ನೆಲೆಸಿರುವುದಿಂದ ಇದು ಸಹಜ.
‘ಸಾರ್ವಜನಿಕರು, ಸ್ನೇಹಿತರೆಲ್ಲ ಸೇರಿ ಪ್ರೋತ್ಸಾಹ ನೀಡಿದ್ದರಿಂದ ಇದೆಲ್ಲ ಸಾಧ್ಯವಾಯಿತು. ಅಂದಿನಿಂದ ಇಂದಿನವರೆಗೂ ಸಮಿತಿಯಲ್ಲಿ ಸಕ್ರಿಯನಾಗಿದ್ದೇನೆ. ಆರಂಭದಿಂದ ಇದುವರೆಗೆ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿರುವುದು ತುಂಬ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಮಹಮ್ಮದ್ ಇಕ್ಬಾಲ್ ಅವರು.
ನಿರೂಪಣೆ: ಮಟಪಾಡಿ ಕುಮಾರಸ್ವಾಮಿ