Advertisement

ಅಪೂರ್ವ ಕ್ಷಮಾಗುಣ ಪ್ರಗತಿಶೀಲ ನಿಲುವು

08:25 PM Dec 29, 2019 | Lakshmi GovindaRaj |

ಪೇಜಾವರ ಮಠದಲ್ಲಿ ಒಬ್ಬ ಹುಡುಗ ಇನ್ನೊಬ್ಬರ ಚಿನ್ನದ ಸರ ಕದ್ದ. ಸ್ವಾಮೀಜಿಯವರಿಗೂ ದೂರು ಹೋಯಿತು. ಯಾರೇ ಕದ್ದಿರಲಿ, ದೇವರ ಪೀಠದೆದುರು ಇರಿಸಿ ಹೋಗುವಂತೆ ಬುದ್ಧಿ ಹೇಳಿದರು. ದಿನ ಕಳೆದರೂ ಪ್ರಗತಿಯಾಗಲಿಲ್ಲ. ಮರುದಿನ ಶ್ರೀಗಳು ನಿರಶನ ಕೈಗೊಂಡರು. ರಾತ್ರಿ ಕಳೆದರೂ ಪ್ರಯೋಜನವಾಗಲಿಲ್ಲ. ಮರುದಿನ ರಾತ್ರಿ ನಿರಶನ ಅಂತ್ಯವಾದ ಸುದ್ದಿ ಹರಡಿತು. ಕದ್ದಾತ ಸದ್ದಿಲ್ಲದೆ ಶ್ರೀಗಳಲ್ಲಿ ತೆರಳಿ ಸರ ಕೊಟ್ಟು ತಪ್ಪೊಪ್ಪಿಕೊಂಡಿದ್ದ.

Advertisement

ಶ್ರೀಗಳು ದಂಡ ವಿಧಿಸಲಿಲ್ಲ, ಬಹಿರಂಗವಾಗಿ ಮಾನ ಹರಾಜು ಹಾಕಲಿಲ್ಲ. ಆತನ ತಪ್ಪಿಗೆ ತನ್ನ ದೇಹವನ್ನು ದಂಡಿಸಿ ಅವನ ಮನಸ್ಸು ಮಾಗಿಸಿದರು. ಇದು ಶ್ರೀಗಳ ಕ್ಷಮಾಗುಣ, ವಾತ್ಸಲ್ಯ ಎಂಬುದಾಗಿ ಮಹಾವಿದ್ವಾಂಸ, ಹೆಸರಾಂತ ಅರ್ಥಧಾರಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಲೇಖನವೊಂದರಲ್ಲಿ ಉಲ್ಲೇಖೀಸಿದ್ದಾರೆ.

ಶ್ರೀಗಳ ಇನ್ನೊಂದು ಪ್ರಗತಿಶೀಲ ಗುಣವನ್ನು ನೋಡೋಣ: ವಿಧವೆಯರನ್ನು ಗೌರವದಿಂದ ಕಾಣಬೇಕು. ಸಕೇಶಿ ವಿಧವೆಯರೂ ಉಳಿದವರಂತೆ ಧಾರ್ಮಿಕ ಆಚರಣೆಗಳನ್ನು ಮಾಡಬಹುದು. ಪುರುಷರು ಶಿಖಾಧಾರಣೆಯೇ ಮೊದಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ ಅವರಿಗೆ ಧಾರ್ಮಿಕ, ಸಾಮಾಜಿಕ ವ್ಯವಹಾರಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಸಕೇಶಿ ವಿಧವೆಯರಿಗೂ ಯಾಕೆ ಕೆಲವು ರಿಯಾಯಿತಿ ನೀಡಬಾರದು?

ವಿಧವೆಯರು ಕಟ್ಟುನಿಟ್ಟಾದ ಧಾರ್ಮಿಕ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಅವರಿಗೆ ನಿರ್ಬಂಧಗಳನ್ನು ವಿಧಿಸಿರುವುದು ನಿಜ. ಆದರೆ ಅವನ್ನು ಪೂರ್ತಿಯಾಗಿ ಪಾಲಿಸದಿದ್ದ ಸಂದರ್ಭ ಅವರನ್ನು ಧಾರ್ಮಿಕ, ಸಾಮಾಜಿಕ ವ್ಯವಹಾರಗಳಿಗೆ ಅನರ್ಹರೆಂದು ಭಾವಿಸಬಾರದು- ಇದು ಪೇಜಾವರ ಶ್ರೀಗಳ ನಿಲುವಾಗಿತ್ತು.

ಯತಿ ವಿಸ್ತಾರ: ಗುಬ್ಬಚ್ಚಿಯಂತಹ ಆಕಾರದ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಜೀವನ ಮಾತ್ರ ತ್ರಿವಿಕ್ರಮ ಸ್ವರೂಪದಲ್ಲಿ ಬೆಳೆದು ನಿಂತದ್ದು. ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ ಎಂಬಂತೆ ಶ್ರೀಪಾದರು ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು, ಅಲ್ಲೆಲ್ಲ ಗುರು ಸ್ವರೂಪಿಯಾಗಿ ಮಾದರಿ ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ.

Advertisement

ಗಾಂಧೀಜಿ ಪ್ರಭಾವ: ಬಾಲ್ಯದ ನೆನಪುಗಳನ್ನು ಬರೆಯುತ್ತಾ ಶ್ರೀ ವಿಶ್ವೇಶ ತೀರ್ಥರು, “ನಾನು ಗಾಂಧೀಜೀಯವರ ವಿಚಾರಕ್ಕೆ ಸಂಬಂಧಿಸಿದ ಪತ್ರಿಕೆಗಳು ಮತ್ತು ಪುಸ್ತಕಗಳನ್ನು ತರಿಸಿ ಓದುತ್ತಿದ್ದೆ. ಗಾಂಧೀಜಿಯವರ “ಹರಿಜನ’ ಪತ್ರಿಕೆಯ ಕನ್ನಡ ಅನುವಾದಗಳು, ಗಾಂಧೀಜಿ, ವಿನೋಬಾ, ಮಶ್ರೂವಾಲಾ, ಕುಮಾರಪ್ಪ ಮುಂತಾದವರ ಲೇಖನಗಳನ್ನು ಓದುತ್ತಿದ್ದೆ. ವಿಕೇಂದ್ರೀಕರಣ ಹಾಗೂ ಗ್ರಾಮೋದ್ಯೋಗಿಗಳಿಗೆ ಒತ್ತು ಕೊಡುತ್ತಿದ್ದ ಗಾಂಧೀಜಿಯವರ ಆರ್ಥಿಕ ವಿಚಾರಗಳ ಬಗ್ಗೆ ನನ್ನ ಒಲವು ಬೆಳೆದಿತ್ತು. ಇದರ ಜತೆಗೆ ಜಯಪ್ರಕಾಶ, ಲೋಹಿಯಾ, ಆಚಾರ್ಯ ನರೇಂದ್ರ ದೇವ ಮುಂತಾದವರ ಸಮಾಜವಾದಿ ವಿಚಾರಗಳಿಂದಲೂ ಪ್ರಭಾವಿತನಾಗಿದ್ದೆ. ಶ್ರೀಮಂತರ ಹಾಗೂ ಬಡವರ ಆರ್ಥಿಕ ಅಂತರವು ಬಹಳಷ್ಟು ಕಡಿಮೆ ಇರಬೇಕು. ಜನರ ಆರ್ಥಿಕ ಸಮಾನತೆಯನ್ನು ಸಾಧಿಸಬೇಕೆಂಬ ತೀವ್ರ ಕಳಕಳಿಯು ನನ್ನಲ್ಲಿ ಬಾಲ್ಯ ದಿಂದಲೂ ಬೆಳೆದುಕೊಂಡು ಬಂದಿತ್ತು” ಎಂದಿದ್ದರು.

ಓಟದ ಮೆರವಣಿಗೆ!: ಬಿಡುವಿಲ್ಲದ ಕಾರ್ಯಕ್ರಮಗಳು ಶ್ರೀ ವಿಶ್ವೇಶ ತೀರ್ಥರ ದಿನಚರಿಯಲ್ಲಿ ಅನಿವಾರ್ಯ. ಇಲ್ಲಿದೆ ಅಂಥದೊಂದು ಪ್ರಸಂಗ. ಉತ್ತರ ಕರ್ನಾಟಕದ ಒಂದು ಗ್ರಾಮ. ಪರ್ಯಾಯ ಸಂಚಾರ ಕಾಲದಲ್ಲಿ ಶ್ರೀಗಳು ಅಲ್ಲಿನ ಸಂದರ್ಶನಕ್ಕಾಗಿ ಕೇವಲ 15 ನಿಮಿಷಗಳನ್ನಿಟ್ಟಿದ್ದರು. ಭಕ್ತರು ಬಹಳ ಸಂಖ್ಯೆಯಲ್ಲಿ ಸೇರಿದ್ದರು. ಮೆರವಣಿಗೆಯಲ್ಲಿ ಶ್ರೀಗಳನ್ನು ಕರೆ ದೊಯ್ಯಬೇಕೆಂದು ಜನರ ಅಪೇಕ್ಷೆ. ಶ್ರೀಗಳು ನಿರಾಕರಿಸಿದರು. “ತಾವು ಕಾರಲ್ಲಿ ಬನ್ನಿ, ನಾವು ನಡೆದು ಬರುತ್ತೇವೆ’ ಎಂದರು ಜನರು. “ಅದು ಸಂಕೋಚವಾಗುತ್ತದೆ’ ಎಂದು ಕೊನೆಗೂ ಶ್ರೀಗಳು ಮೆರವಣಿಗೆಗೆ ಒಪ್ಪಿದರು. ಶ್ರೀಗಳು ಓಡುತ್ತಾ ಹೋದರು. ಜನರೂ ಹಿಂದಿನಿಂದ ಓಡಿದರು. ಇದೊಂದು ರೀತಿಯ ಓಟದ ಮೆರವಣಿಗೆಯಾಯಿತು!

ಕನ್ನಡಪರ ದಿಟ್ಟ ಹೆಜ್ಜೆ: ಮಧ್ವಾಚಾರ್ಯರು ತನ್ನ ಎಲ್ಲ ಗ್ರಂಥಗಳನ್ನೂ ಸಂಸ್ಕೃತದಲ್ಲೇಬರೆದರು. ಸೋದೆ ಶ್ರೀ ವಾದಿರಾಜ ಸ್ವಾಮಿಗಳು ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ಬರೆದರು. ಉಡುಪಿಯ ಅಷ್ಟಮಠಗಳ ಇತಿಹಾಸದಲ್ಲಿ ಶ್ರೀ ವಾದಿರಾಜರ ಅನಂತರ ಕನ್ನಡಪರವಾದ ದಿಟ್ಟ ಹೆಜ್ಜೆ ಇಟ್ಟವರು ಶ್ರೀ ವಿಶ್ವೇಶತೀರ್ಥರು. ಮಧ್ವಾಚಾರ್ಯರ ಸರ್ವಮೂಲ ಗ್ರಂಥಗಳ ಕನ್ನಡ ಭಾಷಾಂತರಗಳನ್ನು ಮಾಡಿಸಿರುವ ಇವರು ಆ ಎಲ್ಲ ಗ್ರಂಥಗಳಿಗೆ ಕನ್ನಡದಲ್ಲಿ ಪ್ರಸ್ತಾವನೆಯನ್ನು ಬರೆದಿದ್ದಾರೆ.

ವೈದಿಕ-ಲೌಕಿಕ ಸಮನ್ವಯ: ಶ್ರೀಗಳಿಗೆ ವೈದಿಕ ಮತ್ತು ಲೌಕಿಕಗಳತ್ತ ಸಮಾನ ಆದರ. ಪ್ರಜಾಪ್ರಭುತ್ವದ ಮೇಲೆ ಅಪಾರ ಗೌರವ. ಚುನಾವಣಾ ಕಾಲದಲ್ಲಿ ಮಠದ ಮುಂದುಗಡೆ ಭಾಷಣವು ನಡೆಯುತ್ತಿರುವಾಗ ಮಠದಲ್ಲಿ ನಗಾರಿ ಬಡಿಯುವುದನ್ನು ನಿಲ್ಲಿಸುತ್ತಿದ್ದರು. ಭಾಷಣವೂ ನಗಾರಿಯಂತೆ ಪರಮಾತ್ಮನ ಪೂಜಾ ಸಾಧನವೆಂಬುದು ಶ್ರೀಗಳ ಭಾವನೆ. ಪ್ರಜಾಪ್ರಭುತ್ವದ ಏಳಿಗೆಯೂ ಪೂಜೆ ಯಷ್ಟೇ ಪವಿತ್ರವೆಂದು ಅವರ ಅಭಿಪ್ರಾಯ.

ಅದೂ ಇದೂ ಒಂದೇ ತಿಂಗಳು: ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು 1938ರಲ್ಲಿ ಹಂಪಿ ಚಕ್ರತೀರ್ಥದಲ್ಲಿರುವ ಶ್ರೀವ್ಯಾಸರಾಜ ಪ್ರತಿಷ್ಠಾಪಿತ ಯಂತ್ರೋದ್ಧಾರ ಪ್ರಾಣದೇವರ ಗುಡಿಯಲ್ಲಿ ಶ್ರೀವಿಶ್ವಮಾನ್ಯತೀರ್ಥ ಶ್ರೀಪಾದರಿಂದ ಸನ್ಯಾಸಾಶ್ರಮ ಸ್ವೀಕರಿಸಿದ್ದರು. ಆಗ ಅವರಿಗೆ ವಯಸ್ಸು 8. ನಾಲ್ಕು ಪರ್ಯಾಯಗಳನ್ನು ನಡೆಸಿ 76 ಚಾತುರ್ಮಾಸ್ಯಗಳನ್ನು ನಡೆಸಿದ ಶ್ರೀಪಾದರು ಶಿಷ್ಯ ಶ್ರೀ ವಿಶ್ವಪ್ರಸನ್ನ ತೀರ್ಥರ ಜತೆಗೂಡಿ ಮಂಗಳ ವಾರದ ದಿನ(ಡಿ. 29, 2015 ) ಅದೇ ಸ್ಥಳಕ್ಕೆ ಭೇಟಿ ನೀಡಿ ನದಿ ನೀರಿನಲ್ಲಿ ಪ್ರೋಕ್ಷಣೆ ಮಾಡಿಕೊಂಡು ಪ್ರಾಣದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆರತಿ ಬೆಳಗಿದ್ದರು.

ಸನ್ಯಾಸಾಶ್ರಮ ಸ್ವೀಕರಿಸಿದ್ದು ಡಿಸೆಂಬರ್‌ 3ರಂದು, ಪರ್ಯಾಯ ಪೂರ್ವಭಾವಿ ಪ್ರಾರ್ಥನೆಯೂ ಡಿ. 29. 2015 ರಂದು. ಎರಡೂ ಒಂದೇ ತಿಂಗಳಲ್ಲಿ ನಡೆದಿವೆ. ಕಾಕ‌ತಾಳೀಯವೆಂಬಂತೆ ಶ್ರೀಗಳು ಹರಿಪಾದ ಸೇರಿದ್ದೂ ಡಿ. 29ರಂದೇ . ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಪರ್ಯಾಯ ಪೀಠಾರೋಹಣ ಪೂರ್ವಭಾವಿಯಾಗಿ ಡಿ. 9 2016 ರಂದು ತಿರುಪತಿ ದೇವರ ದರ್ಶನ ಪಡೆಯಲು ಹೋಗಿದ್ದರು. ದರ್ಶನ ಮುಗಿಸಿ ವಾಪಸಾಗುವಾಗ ಅಲ್ಲಿನ ಸಂಪ್ರದಾಯದಂತೆ ದೇವರಿಗೆ ಸಮರ್ಪಿಸುವ ಶೇಷವಸ್ತ್ರ, ಉತ್ಸವಕ್ಕೆ ಬಳಸಿದ ಸುಮಾರು ಹತ್ತಡಿ ಎತ್ತರದ ವಸ್ತ್ರದ ಛತ್ರ (ಕೊಡೆ) ಕೊಟ್ಟು ಗೌರವಿಸಿದ್ದರು.

ಒಂದು ಸಮುದಾಯ ಅನ್ಯಾಯ ಎದುರಿಸುತ್ತಿದ್ದರೆ, ಅದನ್ನು ಸಹಿಸಿಕೊಳ್ಳಬೇಕೆಂದು ನಾ ಹೇಳಲಾರೆ.
-ಶ್ರೀ ವಿಶ್ವೇಶ ತೀರ್ಥರು

Advertisement

Udayavani is now on Telegram. Click here to join our channel and stay updated with the latest news.

Next