ತಮಿಳುನಾಡು ರಾಜ್ಯಕ್ಕೆ ಸ್ವಾಯತ್ತತೆ ಕೊಡಬೇಕು ಎಂದು ಆಗ್ರಹಿಸಿರುವ ಡಿಎಂಕೆ ನಾಯಕ, ಮಾಜಿ ಕೇಂದ್ರ ಸಚಿವ ಎ. ರಾಜಾ ಅವರು ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವಾಯತ್ತತೆ ನೀಡದೇ ಹೋದರೆ, ತಮಿಳುನಾಡನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಮಾಡಿ ಎಂಬ ಬೇಡಿಕೆ ಇಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದು, ಇದು ರಾಜಕೀಯ ವಲಯದಲ್ಲಿ ತೀರಾ ಆಕ್ರೋಶಕ್ಕೂ ಕಾರಣವಾಗಿದೆ.
ಅಂದ ಹಾಗೆ, ತಮಿಳುನಾಡಿನ ಈ ಪ್ರತ್ಯೇಕ ರಾಷ್ಟ್ರ “ಥಣಿ ನಾಡು” ಬೇಡಿಕೆ ಇಂದಿನದ್ದೇನಲ್ಲ. ಅದು ಡಿಎಂಕೆ ಹುಟ್ಟುಹಾಕಿದ ಪೆರಿಯಾರ್ ಅವರ ಕಲ್ಪನೆ. ತಮಿಳಿಗರಿಗಾಗಿಯೇ ಪ್ರತ್ಯೇಕ ದೇಶವೊಂದು ಬೇಕು ಎಂದು ಅವರು ವಾದಿಸಿದ್ದರು. ಅಂದರೆ, ಸ್ವಯಂ ಗೌರವ ಹೊಂದಿರುವ ತಮಿಳಿಗರಿಗಾಗಿ ದ್ರಾವಿಡ ನಾಡು ಎಂಬ ದೇಶ ರಚನೆಯಾಗಬೇಕು ಎಂದು ಆಗ್ರಹಿಸಿದ್ದರು.
ಆದರೆ 1963ರಲ್ಲಿ ಡಿಎಂಕೆ ದ್ರಾವಿಡ ನಾಡು ಎಂಬ ಬೇಡಿಕೆಯನ್ನು ಕೈಬಿಟ್ಟು, ಅನಂತರದ ದಿನಗಳಲ್ಲಿ ರಾಜ್ಯಗಳಿಗೆ ತನ್ನದೇ ಆದ ಸ್ವಾಯತ್ತವಿರಬೇಕು ಎಂಬ ಬೇಡಿಕೆಯನ್ನು ಮುಂದುವರಿಸಿಕೊಂಡು ಬಂದಿತ್ತು. 1969ರಲ್ಲಿ ಪಿ.ವಿ.ರಾಜಮನ್ನಾರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಮಾಡಿದ್ದ ಡಿಎಂಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಬಂಧ ಹೇಗಿರಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿತ್ತು. 1971 ಮತ್ತು 1974ರಲ್ಲಿಯೂ ತಮಿಳುನಾಡಿಗೆ ಸ್ವಾಯತ್ತ ಸ್ಥಾನ ನೀಡಬೇಕು ಎಂಬ ಹಕ್ಕೊತ್ತಾಯ ಮಾಡಿ, ತಮಿಳುನಾಡು ವಿಧಾನಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈ ಎಲ್ಲವೂ ಇತಿಹಾಸದ ಕಥೆಗಳು. ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡಿನ ಸ್ವಾಯತ್ತ ವಿಚಾರ ನನೆಗುದಿಗೆ ಬಿದ್ದಿತ್ತು. ಆದರೆ ಈಗ ಎ.ರಾಜಾ ಅವರ ವಿವಾದಾತ್ಮಕ ಮಾತಿನ ಮೂಲಕ ಮತ್ತೆ ಮುನ್ನೆಲೆಗೆ ಬಂದಿದೆ.
ಅಖಂಡ ಭಾರತ ಸದೃಢವಾಗಿದೆ. ಯಾವುದೇ ದೇಶದ ಬೆದರಿಕೆಗೂ ಬಗ್ಗದ ಸ್ಥಿತಿಯಲ್ಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಹೆಸರು ಪಡೆದುಕೊಂಡಿದೆ. ಅತ್ಯಂತ ಮುಂದುವರಿದ ದೇಶಗಳೂ ಭಾರತ ವೆಂದರೆ, ತಲೆ ಎತ್ತಿ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ. ಇಂಥ ಹೊತ್ತಿ ನಲ್ಲಿ ದೇಶವನ್ನು ಒಡೆಯುವ ಮಾತು ಯಾವುದೇ ಕಾರಣಕ್ಕೂ ಸಲ್ಲದು. ಇದು ತಮಿಳುನಾಡಿನ ರಾಜಕಾರಣಿಗಳಿಗೆ ಅರ್ಥವಾದರೆ ಒಳಿತು.
ತಮಿಳುನಾಡಿನ ಈ ಮನೋಭಾವ ಹೊಸದೇನಲ್ಲ. ಅಕ್ಕಪಕ್ಕದ ರಾಜ್ಯಗಳ ಜತೆಗೂ ಅದು ಜಗಳವಾಡುತ್ತಲೇ ಬಂದಿದೆ. ಕಾವೇರಿ ವಿಚಾರದಲ್ಲಂತೂ ಕರ್ನಾಟಕದ ವಿರುದ್ಧ ಇತಿಹಾಸದಿಂದಲೂ ಕಾನೂನು ಸಮರ ಮಾಡಿಕೊಂಡೇ ಬರುತ್ತಿದೆ. ಒಂದು ರೀತಿಯಲ್ಲಿ ಈ ಅಂತಾರಾಜ್ಯ ಜಲ ವಿವಾದ ಅಲ್ಲಿನ ರಾಜಕಾರಣಿಗಳಿಗೆ ಓಟ್‌ಬ್ಯಾಂಕ್ ರಾಜಕಾರಣದಂಥಾಗಿದೆ.
ಹೊಂದಿಕೊಂಡು ಹೋಗುವ ಸ್ವಭಾವವಂತೂ ಇಲ್ಲವೇ ಇಲ್ಲ. ಅಲ್ಲದೆ, ತನ್ನ ಮೂಗಿನ ನೇರಕ್ಕೆ ನಡೆಯದೇ ಹೋದರೆ, ಅದು ಎಂಥದ್ದೇ ಜಗಳಕ್ಕೂ ಸಿದ್ಧವಾಗಿ ನಿಂತಿರುತ್ತದೆ ಎಂಬುದು ಇತಿಹಾಸ ನಮಗೆ ತೋರಿಸಿಕೊಟ್ಟಿದೆ. ಏನೇ ಆಗಲಿ, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಮುಂದೆಯೇ ಎ.ರಾಜಾ ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿದ್ದರೂ, ಸಿಎಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಡೇ ಪಕ್ಷ ರಾಜಾಗೆ ಇಂಥ ಮಾತು ಸಲ್ಲದು ಎಂದಾದರೂ ಹೇಳಬೇಕಾಗಿತ್ತು.