Advertisement
ನನಗೆ ಚೆನ್ನಾಗಿ ನೆನಪಿದೆ. ನಾನು ಸಣ್ಣವಳಿರುವಾಗ ಹೆಚ್ಚಾಗಿ ಬಳಸಿದ್ದು ರೈನ್ ಕೋಟ್ ಅದು ನನಗೆ ಕೊಟ್ಟಷ್ಟು ಖುಶಿ ಇನ್ಯಾವ ವಸ್ತು ಕೂಡ ಕೊಟ್ಟಿರಲಿಲ್ಲ. ಆ ಕೊಡೆ ಹಿಡಿದುಕೊಂಡು ನೆನೆದುಕೊಂಡು ಹೋಗುವುದ್ದಕ್ಕಿಂತ ರೈನ್‌ಕೋಟ್ ಧರಿಸಿ ಸುತ್ತಾಡುವುದೇ ಉತ್ತಮ ಅಂತ ಅನಿಸುತ್ತೆ. ಶಾಲೆಯಲ್ಲಿ ಎಲ್ಲರೂ ಬಣ್ಣ ಬಣ್ಣದ ಕೊಡೆಯಲ್ಲಿ ಮಿಂಚಿದರೆ ನಾನಂತೂ ಬಣ್ಣ ಬಣ್ಣದ ರೈನ್‌ಕೋಟಲ್ಲಿ ಮಿಂಚುತ್ತಿದ್ದೆ.ಅಮ್ಮ ಯಾವಾಗಲೂ ನನಗೊಂದು ಸೈಜ್ ದೊಡ್ಡ ರೈನ್ ಕೋಟೇ ತೆಗೆದುಕೊಡುತ್ತಿದ್ದರು. ಏಕೆಂದರೆ ಆ ರೈನ್ ಕೋಟ್ ನನ್ನನ್ನು ಮಾತ್ರವಲ್ಲ, ನನ್ನ ಬ್ಯಾಗನ್ನೂ ಕೂಡ ಮುಚ್ಚಬೇಕಿತ್ತು ಅದಕ್ಕೆ. ಮಳೆ ಎಷ್ಟೇ ಜೋರಾಗಿ ಬರಲಿ ನಾನು ಮಾತ್ರ ಒದ್ದೆಯಾಗುವ ಪ್ರಶ್ನೆಯೇ ಇಲ್ಲ. ಹಾರಿಹೋಗುತ್ತೆ, ಮುರಿದು ಹೋಗುತ್ತೆ ಅನ್ನುವ ಭಯವೂ ಇಲ್ಲದೆ ದಾರಿಯುದ್ದಕ್ಕೂ ರೈನ್‌ಕೋಟ್ ಧರಿಸಿ ದಾರಿಯುದ್ದಕ್ಕೂ ಬೀಗುತ್ತ ಹೋಗುತ್ತಿದ್ದೆ. ಕ್ರಮೇಣ ನನ್ನ ಶಾಲೆಯಲ್ಲಿ ರೈನ್‌ಕೋಟ… ಧಾರಿಗಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಎಲ್ಲರಿಗೂ ನನಗೆ ಅನಿಸಿದ್ದೇ ಅನಿಸಿತ್ತೋ ಏನೋ. ಮೊದಲೆಲ್ಲ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದೆ. ಆಗ ಅಷ್ಟೇನೂ ಕಷ್ಟ ಅನಿಸುತ್ತಾ ಇರಲಿಲ್ಲ. ಆದರೆ ಯಾವಾಗ ನಾನು ಬಸ್ಸಲ್ಲಿ ಪ್ರಯಾಣ ಶುರು ಮಾಡಿದೆನೋ ಆಗ ಬಂತು ರೈನ್‌ಕೋಟ್‌ಗೆ ಕಷ್ಟಕಾಲ. ಜೋರಾದ ಮಳೆಗೆ ರೈನ್‌ಕೋಟ್ ಧರಿಸಿ, ಅದರೊಂದಿಗೆ ಬೆನ್ನಿನ ಮೇಲೆ ದೊಡ್ಡ ಮೂಟೆಯಂಥ ಬ್ಯಾಗ್ ಹೊತ್ತು ನಿಂತಾಗ ಆ ರೈನ್‌ಕೋಟ್ ಒದ್ದೆ ಎಲ್ಲರಿಗೂ ಕಿರಿಕಿರಿ ಮಾಡುವುದು ಸಹಜ. ಒಂದು ದಿನ ಎರಡು ದಿನ ಹಾಗಂತ ಎಲ್ಲಾ ಎಷ್ಟು ದಿನಾ ಅಂತ ಸಹಿಸಿಯಾರು. ಕೊನೆಗೊಮ್ಮೆ ಕಂಡಕ್ಟರ್ ಅಣ್ಣ ಬಿಪಿ ರೈಸ್ ಮಾಡಿಕೊಂಡು ಇನ್ನು ಹತ್ತುವಾಗ ರೈನ್‌ಕೋಟ್ ಕಳಚಿಟ್ಟು ಬನ್ನಿ. ನಿಮ್ಮ ಬ್ಯಾಗಿಗೆ, ಟಿಫಿನ್‌ಗೆ, ರೈನ್‌ಕೋಟ್‌ಗೆ ಅರ್ಧ ಬಸ್ಸು ಬೇಕು ಅಂತ ಎಗರಾಡಿ ಬಿಟ್ರಾ ನೋಡಿ ಸೀದಾ ಕೊಡೆಗೆ ಶಿಫr…. ಆದರೂ ರೈನ್ ಕೋಟ್‌ನಲ್ಲಿ ಸಿಗುತ್ತಿದ್ದ ಬೆಚ್ಚಗಿನ ಅನುಭವ ಯಾವತ್ತೂ ಕೊಡೆಯಲ್ಲಿ ಸಿಗುತ್ತಲೇ ಇರಲ್ಲಿಲ್ಲ. ಮಳೆಯಲ್ಲಿ ಎಷ್ಟೇ ನೆನೆದರೂ ಮನೆಗೆ ತಲುಪಿ ರೈನ್‌ಕೋಟ್ ಕಳಚಿದಾಗ ಆಹಾ ಅದೇನೋ ಬೆಚ್ಚಗಿನ ಅನುಭವ. ಬಟ್ಟೆ, ಬ್ಯಾಗೂ ಯಾವುದೂ ಒದ್ದೆಯಾಗಲ್ಲ. ಆದರೆ ಯಾವಾಗ ಕೊಡೆ ಬಳಸಲು ಶುರು ಮಾಡಿದೆನೋ ಅದು ಅದಲು ಬದಲು ಆಗೋಯ್ತು. ಹಾರಿ ಹೋಗುತ್ತಿದ್ದ ಕೊಡೆ (ಕಷ್ಟಪಟ್ಟು ಅದನ್ನು ಉಳಿಸಿಕೊಳ್ಳುತ್ತಿದ್ದೆ), ಮುರಿದು ಹೋದ ಅದರ ಕಡ್ಡಿಗಳು, ಒದ್ದೆಯಾದ ಬಟ್ಟೆ, ಬ್ಯಾಗು, ಬ್ಯಾಗೊಳಗಿನ ಪುಸ್ತಕ, ಪುಸ್ತಕದೊಳಗಿನ ಹಾಳೆ ಎಲ್ಲಾ ಒದ್ದೆ. ಉಫ್… ಸುಸ್ತಾಗಿ ಬಿಡುತ್ತಿತ್ತು. ನನಗೆ ಆಗೆಲ್ಲಾ ರೈನ್‌ಕೋಟ್ ನೆನಪಾಗಿ “ಮಿಸ್ ಯೂ…’ ಅಂತ ಮನದಲ್ಲೇ ಅಳುತ್ತಾ ಇದ್ದೆ.
Related Articles
Advertisement
– ಪಿನಾಕಿನಿ ಪಿ. ಶೆಟ್ಟಿ