ಹುಬ್ಬಳ್ಳಿ: “ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ನೀರಿಗೆ ನೀರು ಕುರಿತ ಒಪ್ಪಂದಕ್ಕೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುತ್ತೇನೆ. ಅದಕ್ಕೆ ಪೂರಕವಾಗಿ ಶನಿವಾರ ಬೆಳಗಾವಿ ಜಿಲ್ಲೆಯ ವಿವಿಧ ಬ್ಯಾರೇಜ್ ಹಾಗೂ ಗಡಿ ಭಾಗಕ್ಕೆ ಭೇಟಿ ನೀಡಿ ನೀರಿನ ಸ್ಥಿತಿ ಕುರಿತು ಖುದ್ದಾಗಿ ಪರಿಶೀಲಿಸುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬರ ಹಿನ್ನೆಲೆಯಲ್ಲಿ ಕೊಯ್ನಾದಿಂದ ನೀರು ಬಿಡುವ ಬೇಡಿಕೆಗೆ ಮಹಾರಾಷ್ಟ್ರ ನೀರಿಗೆ ನೀರು ಒಡಂಬಡಿಕೆ ಪ್ರಸ್ತಾಪ ಮುಂದಿರಿಸಿತ್ತು. ನೀರು ನೀಡಿಕೆ ಹಾಗೂ ಒಡಂಬಡಿಕೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತಮ್ಮ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುವಂತೆ ಸಲಹೆ ನೀಡಿದ್ದಾರೆ ಎಂದರು.
ಎರಡೂ ರಾಜ್ಯಗಳು ನೀರಿಗೆ ನೀರು ಒಡಂಬಡಿಕೆಗೆ ಸಹಿ ಹಾಕಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಬ್ಯಾರೇಜ್‌ಗಳ ನೀರಿನ ಸ್ಥಿತಿಗತಿ ಅರಿಯಲು ರಾಜಾಪುರ, ಮಂಜರಿ, ಹಿಪ್ಪರಗಿ ಇನ್ನಿತರ ಬ್ಯಾರೇಜ್‌ಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗಡಿ ಜಿಲ್ಲೆಯ ಎಲ್ಲ ಶಾಸಕರಿಗೂ ಆಗಮಿಸುವಂತೆ ಆಹ್ವಾನ ನೀಡಲಾಗಿದೆ.
ಇದರ ಸಾಧಕ-ಬಾಧಕ ಕುರಿತು ಚರ್ಚಿಸುತ್ತೇನೆ. ನಮ್ಮ ರಾಜ್ಯದ ರೈತರಿಗೆ ಯಾವುದೇ ತೊಂದರೆ ಆಗಬಾರದು. ಮಹಾರಾಷ್ಟ್ರಕ್ಕೂ ಸಮಸ್ಯೆ ಸೃಷ್ಟಿಯಾಗದಂತೆ ಉಭಯ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆಯಲ್ಲಿ ಸೂಕ್ತ ಪರಿಹಾರ ಸೂತ್ರ ಕಂಡುಕೊಳ್ಳಲಾಗುವುದು ಎಂದರು.
ಕಾವೇರಿ ಜಲಾಶಯದಲ್ಲಿ ಕಳೆದ ವರ್ಷ ಈ ವೇಳೆಗೆ ಸುಮಾರು 48 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈ ಬಾರಿ ಒಂದು ಟಿಎಂಸಿ ಅಡಿ ನೀರು ಸಹ ಒಳಹರಿವು ಇಲ್ಲದ ಸ್ಥಿತಿ ಇದೆ. ಗುರುವಾರ ರಾತ್ರಿ ಆ ಭಾಗದಲ್ಲಿ ಮಳೆ ಆರಂಭವಾಗಿದ್ದು, ಸದ್ಯದ ಸ್ಥಿತಿಯಲ್ಲಿ ವರುಣ ದೇವರೇ ನಮ್ಮನ್ನು ಕಾಪಾಡಬೇಕು. ನಿರೀಕ್ಷೆಯಂತೆ ಮಳೆ ಬಾರದಿದ್ದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದರು.