Advertisement
643 ಅಂಗನವಾಡಿ ಸೂಪರ್‌ವೈಸರ್‌ಗಳ ನೇಮಕಾತಿ ಪ್ರಕ್ರಿಯೆಗೆ 2016ರ ಮಾರ್ಚ್‌ನಲ್ಲಿ ಚಾಲನೆ ಸಿಕ್ಕಿತ್ತು. ಆದರೆ, ಇಲ್ಲಿತನಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದರಿಂದಾಗಿ ಪರೀಕ್ಷೆ ಬರೆದು, ಸಂದರ್ಶನ ಎದುರಿಸಿ, ಹುದ್ದೆಯ ಅರ್ಹತೆ ಪಡೆದುಕೊಂಡವರಿಗೆ “ಹುದ್ದೆಯ ಭಾಗ್ಯ’ ಮಾತ್ರ ಇನ್ನೂ ಸಿಕ್ಕಿಲ್ಲ.
Related Articles
ಅಂಗನವಾಡಿ ಸೂಪರ್‌ವೈಸರ್ ಹುದ್ದೆ “ಸಿ’ ದರ್ಜೆ ಹುದ್ದೆಗೆ ಸಮಾನ. ಕರ್ನಾಟಕ ಲೋಕಸೇವಾ ಆಯೋಗದ ನಿಯಮಗಳ ಪ್ರಕಾರ “ಸಿ’ ದರ್ಜೆ ಹುದ್ದೆಗಳಿಗೆ ಅರ್ಜಿ ಆಹ್ವಾನದಿಂದ ನೇಮಕಾತಿ ಆದೇಶದವರೆಗಿನ ಪ್ರಕ್ರಿಯೆ 7ರಿಂದ 9 ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಆದರೆ, ಅಂತಿಮ ಪ್ರಕಟಕ್ಕೆ ಒಂದೂವರೆ ವರ್ಷ ಆಯಿತು. ಬಳಿಕ, ಹಲವು ಸುತ್ತಿನ ದಾಖಲೆಗಳ ಪರಿಶೀಲನೆ ನಡೆಸಿ ಜುಲೈ 2019ರಲ್ಲಿ 258 ಮಂದಿಯ ಅಂತಿಮ ಪಟ್ಟಿ ಪ್ರಕಟಿಸಲಾಯಿತು. ಈ ಪೈಕಿ ಕೆಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಆದರೆ, ಯಾರಿಗೂ ಸ್ಥಳ ನಿಯೋಜನೆ ನೀಡಿಲ್ಲ. ನಮ್ಮ ಸೇವಾವಧಿ ಯಾವಾಗ ಪ್ರಾರಂಭವಾಗುತ್ತದೆ, ವೇತನ ನಿಗದಿ ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಸೂಪರ್‌ವೈಸರ್ ಒಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
Advertisement
2016ರ ಮಾರ್ಚ್‌ನಲ್ಲಿ ಅಧಿಸೂಚನೆ:ಒಟ್ಟು 643 ಅಂಗನವಾಡಿ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗೆ 2016ರ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ವರ್ಷ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. 628 ಜನ ಆಯ್ಕೆಯಾಗಿದ್ದರು. 2017ರಲ್ಲಿ ಅರ್ಹತಾ ಪಟ್ಟಿ, 2018ರ ಜನವರಿ ಮತ್ತು 2019ರ ಫೆಬ್ರವರಿಯಲ್ಲಿ 2 ಹಂತಗಳಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. 2019ರ ಜುಲೈ ತಿಂಗಳಲ್ಲಿ 258 ಮಂದಿಗೆ ನೇಮಕಾತಿ ಆದೇಶ ನೀಡಲಾಯಿತು. ಉಳಿದವರ ಸಿಂಧುತ್ವ ಹಾಗೂ ಪೊಲೀಸ್ ಪರಿಶೀಲನೆ ಬಾಕಿ ಇದೆ ಎಂದು ಇಲಾಖೆ ಹೇಳಿತ್ತು. ಈ ನಡುವೆ, ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳ ಮೂಲ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಆಯಾ ಶಿಕ್ಷಣ ಮಂಡಳಿ ಅಥವಾ ವಿ.ವಿ.ಗಳು ದೃಢೀಕರಿಸಬೇಕೆಂದು ಸರ್ಕಾರ ಹೊಸ ನಿಯಮ ಜಾರಿಗೆ ತಂದಿರುವುದರಿಂದ ಎಲ್ಲ 628 ಅಭ್ಯರ್ಥಿಗಳ ದಾಖಲೆಗಳನ್ನು ಸಂಬಂಧಪಟ್ಟ ಶಿಕ್ಷಣ ಮಂಡಳಿ ಹಾಗೂ ವಿ.ವಿ.ಗಳಿಗೆ ಕಳಿಸಿಕೊಡಲಾಗಿದೆ. ಇದು ನೇಮಕಾತಿ ಪ್ರಕ್ರಿಯೆಯ ವಿಳಂಬಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. 628 ಅಭ್ಯರ್ಥಿಗಳ ಪೈಕಿ ಈವರೆಗೆ 400 ಮಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಕಪಟ್ಟಿ ಹಾಗೂ ಇತರ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಆಯಾ ವಿ.ವಿ. ಹಾಗೂ ಶಿಕ್ಷಣ ಮಂಡಳಿಗಳಿಂದ ದೃಢಪಡಿಸಿಕೊಂಡ ಬಳಿಕ ನೇಮಕಾತಿ ಆದೇಶ ನೀಡಬೇಕು ಎಂಬ ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಕೆಲವೊಂದು ವಿ.ವಿ.ಗಳಿಂದ ದೃಢೀಕರಣ ಬಂದಿಲ್ಲ. ಶೀಘ್ರವೇ ಎಲ್ಲವೂ ಸರಿ ಆಗಲಿದೆ.
– ಕೆ.ಎ.ದಯಾನಂದ, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
-ರಫೀಕ್ ಅಹ್ಮದ್