ಕಾರವಾರ: ಜಿಲ್ಲೆಯಲ್ಲಿ ಮಳೆಯಿಂದಾದ ಹಾನಿ ವೀಕ್ಷಿಸಿ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೀವ ಹಾನಿ, ಪ್ರಾಣಿ ಹಾನಿ, ಮನೆ ಹಾನಿಯಾದ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗಿದ್ದು, ವಿವಿಧ ಕಡೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡದಿಂದ ಸಮೀಕ್ಷೆ ಮಾಡಿಸಲಾಗುತ್ತಿದೆ ಹಾಗೂ ಕಾರವಾರ, ಕುಮಟಾ, ಅಂಕೋಲಾ, ಯಲ್ಲಾಪುರ ತಾಲೂಕಿನಲ್ಲಿ ಎಸ್‌ಡಿಆರ್‌ಎಫ್ ತಂಡದ ಸದಸ್ಯರನ್ನು ನಿಯೋಜಿಸಲಾಗಿದೆ ಎಂದರು.
ವಿಮಾನ ನಿಲ್ದಾಣ ಎಕ್ಸಗ್ರೇಷಿಯಾ ಪ್ಯಾಕೇಜ್: ಅಂಕೋಲಾ ತಾಲೂಕಿನ ಅಲಗೇರಿ ನಾಗರಿಕ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಭೂಸ್ವಾಧೀನ ಸಂಸ್ಥೆ ಕೆಎಸ್‌ಎಸ್‌ಐಡಿಸಿಯವರು ಐತೀರ್ಪಿನ ಮೊತ್ತ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮೊತ್ತ ಹಾಗೂ ಅನುದಾನ ಬಿಡುಗಡೆ ಮಾಡಿರುತ್ತಾರೆ. ಬಾಕಿ ಇರುವ ಅನುದಾನ ತಕ್ಷಣ ಬಿಡುಗಡೆಗೆ ಕೋರಲಾಗಿದೆ. ರನ್‌ವೇ ಮತ್ತು ಟರ್ಮಿನಲ್ ಭಾಗದ ಹೆಚ್ಚುವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ವಿಶೇಷ ಎಕ್ಸ್ ಗ್ರೇಷಿಯಾ ಪ್ಯಾಕೇಜ್ ನೀಡಲು ಸರ್ಕಾರದ ಹಂತದ ತೀರ್ಮಾನ ಬಾಕಿ ಇದೆ ಎಂದರು.
ಮೊಸಳೆ ದಾಳಿಯಿಂದಾದ 3 ಜೀವಹಾನಿ ಪ್ರಕರಣಗಳಲ್ಲಿ 2 ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ತಲಾ 7.5 ಲಕ್ಷ ರೂ. ಪರಿಹಾರ ವಿತರಿಸಲಾಗಿದ್ದು, ಇನ್ನೊಂದು ಪ್ರಕರಣ ಪರಿಶೀಲನಾ ಹಂತದಲ್ಲಿ ಇದೆ ಎಂದು ಹೇಳಿದರು. ಭಾರೀ ಮಳೆಯಿಂದ ಭೂಕುಸಿತವಾದ ಹಿನ್ನೆಲೆಯಲ್ಲಿ ಜೋಯಿಡಾ ತಾಲೂಕಿನ ಅಣಶಿ ಘಟ್ಟದ ರಾಜ್ಯ ಹೆದ್ದಾರಿ-34ರಲ್ಲಿ ಎಲ್ಲಾ ತರಹದ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಅಣಶಿ ಘಟ್ಟ ಮಾರ್ಗವಾಗಿ ಹಾದು ಹೋಗುವ ವಾಹನಗಳನ್ನು ಜೋಯಿಡಾ ದಾಂಡೇಲಿ ಜನರು ಕೆಸರೊಳ್ಳಿ, ಯಲ್ಲಾಪುರ, ಅಂಕೋಲಾ, ಕಾರವಾರ ಮತ್ತು ಕೆಸರೊಳ್ಳಿ, ಯಲ್ಲಾಪುರ, ಶಿರಸಿ, ಕುಮಟಾ ಮುಖಾಂತರ ಪಥ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.