Advertisement
ಉಡುಪಿ: ತೋಟಗಾರಿಕೆ ಬೆಳೆಯನ್ನು ತನ್ನ ಜೀವಾಳವನ್ನಾಗಿಸಿ ಜತೆಯಲ್ಲಿ ಹೈನುಗಾರಿಕೆ, ತರಕಾರಿ ಬೆಳೆ ಸಹಿತ ಸುಮಾರು 4 ಎಕ್ರೆ ಜಾಗದಲ್ಲಿ ಮಿಶ್ರ ಕೃಷಿ ಮಾಡುವ ಮೂಲಕ ಪಾಂಡುರಂಗ ಪ್ರಭು ಅವರು ಸಾವಯವ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ಪಾಂಡುರಂಗರ ಕುಟುಂಬ ಅನೇಕ ವರ್ಷಗಳಿಂದ ಭತ್ತ ಬೆಳೆಯುತ್ತಿತ್ತು. 2005ರ ಸುಮಾರಿಗೆ ಕರಾವಳಿಯಲ್ಲಿ ಗದ್ದೆ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಭತ್ತದ ಬೆಳೆ ಕಷ್ಟವಾಯಿತು. ಲಾಭಕ್ಕಿಂತ ನಷ್ಟ ಹೆಚ್ಚಾಗುತ್ತಿರುವುದನ್ನು ಮನಗೊಂಡ ಪ್ರಭು ಅವರು ತೋಟಗಾರಿಕೆ ಹಾಗೂ ಮಿಶ್ರ ಬೆಳೆಗೆ ಮನಮಾಡಿದರು.
Related Articles
ಪ್ರಾರಂಭದಲ್ಲಿ ಅಡಿಕೆ ಹಾಗೂ ತೆಂಗು ಬೆಳೆದರು. ಅನಂತರ ಕೇವಲ ಒಂದು ಬೆಳೆಯಿಂದ ಲಾಭ ಕಷ್ಟ ಎನ್ನುವುದನ್ನು ಮನಗೊಂಡು ಮಿಶ್ರ ಬೆಳೆಗೆ ನಿರ್ಧರಿಸಿದರು. ಅಂತೆಯೇ ತೆಂಗು, ಅಡಿಕೆ, ಕಾಳುಮೆಣಸು, ಬಾಳೆ, ಸುವರ್ಣಗಡ್ಡೆ, ವೀಳ್ಯದೆಲೆ ಸಹಿತ ಇತರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳು ಒಂದರ ಅನಂತರ ಇನ್ನೊಂದು ಇಳುವರಿ ನೀಡುವುದರಿಂದ ಪ್ರಭು ಅವರಿಗೆ ಉತ್ತಮ ಲಾಭ ದೊರಕುತ್ತಿದೆ.
Advertisement
ಸಾವಯವ ಗೊಬ್ಬರಪಾಂಡುರಂಗ ಅವರು ಕೇವಲ ಸಾವಯವ ಗೊಬ್ಬರ ಬಳಸಿ ತೋಟಗಾರಿಕೆ ಹಾಗೂ ಮಿಶ್ರ ಬೆಳೆಗಳನ್ನು ತೆಗೆಯುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಇವರು ಬೆಳೆಸುವ ತರಕಾರಿಗಳಿಗೆ ಉತ್ತಮ ಬೇಡಿಕೆಯಿದೆ. ಎರೆಹುಳ ಗೊಬ್ಬರ ತಯಾರಿಸಿ ಕೃಷಿಗೆ ಬೇಕಾದಷ್ಟು ಬಳಸಿಕೊಂಡು ಸಾರ್ವಜನಿಕರಿಗೂ ಮಾರಾಟ ಮಾಡುತ್ತಿದ್ದಾರೆ. ತಾಲೂಕು ಶ್ರೇಷ್ಠ ರೈತ ಪ್ರಶಸ್ತಿ
ಪ್ರಭು ಅವರಿಗೆ ವಾರ್ಷಿಕ 4 ಲ.ರೂ. ವರೆಗೆ ಲಾಭ ದೊರಕುತ್ತಿದೆ. ಮಾರುಕಟ್ಟೆಯ ಏರಿಕೆ ಬೆಲೆ ಅನುಗುಣವಾಗಿ ಬೆಳೆಗಳನ್ನು ರೈತರ ಮೂಲಕ ಮಾರಾಟ ಮಾಡುತ್ತಾರೆ. ತೋಟಗಾರಿಕೆ ಹಾಗೂ ಮಿಶ್ರ ಬೆಳೆಯಲ್ಲಿ ಇವರ ಸಾಧನೆ ಗಮನಿಸಿ ಜಿಲ್ಲಾಡಳಿತ ತಾಲೂಕು ಮಟ್ಟದ “ಶ್ರೇಷ್ಠ ರೈತ ಪ್ರಶಸ್ತಿ’ ನೀಡಿ ಗೌರವಿಸಿದೆ. ಪತ್ನಿಯ ಸಹಕಾರ
ಕೃಷಿ ಕೆಲಸಗಳಿಗೆ ಕೂಲಿ ಕಾರ್ಮಿಕರ ಕೊರತೆಯಿಂದ ಪಾಂಡುರಂಗ ಮತ್ತು ಪತ್ನಿ ಪ್ರಭಾವತಿ ಪ್ರಭು ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಭು ಅವರು ಅಡಿಕೆ ಹಾಗೂ ತೆಂಗಿನಕಾಯಿಗಳನ್ನು ಯಂತ್ರದ ಮೂಲಕ ಖುದ್ದಾಗಿ ಮರವೇರಿ ಕೀಳುತ್ತಿದ್ದಾರೆ. ಹಲವಾರು ಕಾರಣಗಳಿಂದ ಕೃಷಿ ಕ್ಷೇತ್ರದಿಂದ ಹಿಂದೆ ಸರಿಯುತ್ತಿರುವ ಅದೆಷ್ಟೋ ಕೃಷಿಕರ ಮಧ್ಯೆ ಗ್ರಾಮೀಣ ಭಾಗದಲ್ಲಿದ್ದೂ ಕೃಷಿಯ ಜತೆ ಬದುಕು ಕಟ್ಟುತ್ತಿದ್ದಾರೆ ಈ ದಂಪತಿ. ಕೃಷಿ ಕುಟುಂಬ- ಆದರ್ಶ ತಂದೆ
ಪಾಂಡುರಂಗ ಪ್ರಭು ಅವರಿಗೆ ಬಾಲ್ಯದಿಂದಲೇ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲವಿತ್ತು. ಪಾಂಡುರಂಗ ಪ್ರಭು ಅವರ ತಂದೆ ರಾಮಕೃಷ್ಣ ಪ್ರಭು ಅವರು ಕೂಡ ಕೃಷಿಕರಾಗಿದ್ದರು. ತಂದೆಯ ಮಾರ್ಗದರ್ಶನದಲ್ಲಿ ಬಾಲ್ಯದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಪಿಯು ಶಿಕ್ಷಣದ ಬಳಿಕ ಕೃಷಿ ಕಡೆಗೆ ಮುಖ ಮಾಡಿದ ಪಾಂಡುರಂಗ ಪ್ರಭು ತಂದೆಯ ಕಾಲಾನಂತರ ವಂಶಪಾರಂಪರ್ಯವಾಗಿ ಬಂದ ಕೃಷಿಯನ್ನು 38 ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೆಚ್ಚಿನ ಲಾಭ
ಹೈನುಗಾರಿಕೆ ಮಾಡುವುದರಿಂದ ಹಾಗೂ ಮಿಶ್ರ ಬೆಳೆಗಳನ್ನು ಬೆಳೆಯುವುದರಿಂದ ನಾವು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯ. ಜತೆಗೆ ನಾನು ನಮ್ಮ ಮನೆಯ ಅಂಗಳದಲ್ಲಿ ಹರಿವೆ, ಬಸಲೆ ಸಹಿತ ವಿವಿಧ ತರಕಾರಿ ಬೆಳೆಸಿದ್ದೇನೆ. ಅದಕ್ಕೆ ಸಾವಯವ ಗೊಬ್ಬರವನ್ನು ಮಾತ್ರ ಹಾಕಲಾಗುತ್ತಿದೆ. ಎರೆಹುಳ ಗೊಬ್ಬರ ಬಳಸುತ್ತೇನೆ. ಸುವರ್ಣಗಡ್ಡೆ, ವೀಳ್ಯದೆಲೆ ಬೆಳೆಯು ವುದರಿಂದಲೂ ಬಹಳ ಅನುಕೂಲವಿದೆ.
-ಪಾಂಡುರಂಗ ಪ್ರಭು,
ಪ್ರಗತಿಪರ ಕೃಷಿಕ ಹೆಸರು:ಪಾಂಡುರಂಗ ಪ್ರಭು
ಏನೇನು ಕೃಷಿ : ತೆಂಗು, ಅಡಿಕೆ, ಕಾಳುಮೆಣಸು, ಬಾಳೆ, ತರಕಾರಿ, ವೀಳ್ಯದೆಲೆ
ಎಷ್ಟು ವರ್ಷ: ಸುಮಾರು 38 ವರ್ಷಗಳಿಂದ
ಕೃಷಿ ಪ್ರದೇಶ:ಸುಮಾರು 4 ಎಕ್ರೆ -ತೃಪ್ತಿ ಕುಮ್ರಗೋಡು