Advertisement

ಪ್ರಯೋಗಶೀಲತೆಯಿಂದಲೇ ಪ್ರಸಿದ್ಧಿ ಪಡೆದ ಪ್ರಗತಿಪರ ಕೃಷಿಕ

10:22 AM Dec 23, 2019 | mahesh |

ಹೆಸರು: ಗಣಪತಿ ಭಟ್‌ ಎನ್‌.ಕೆ.
ಏನು ಕೃಷಿ: ಮಿಶ್ರ ಬೆಳೆ
ವಯಸ್ಸು: 48
ಕೃಷಿ ಪ್ರದೇಶ: 12 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬಂಟ್ವಾಳ: ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವ ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ ಗಣಪತಿ ಭಟ್‌ ಎನ್‌.ಕೆ. ಅವರು ಕೃಷಿ ಗಿಂತಲೂ ಹೆಚ್ಚಾಗಿ ಕೃಷಿ ಪೂರಕ ಯಂತ್ರೋಪಕರಣಗಳ ಮೂಲಕ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇವರು ಸಂಶೋಧಿಸಿದ ಮಾನವ ಸಹಿತ ಅಡಿಕೆ ಮರ ಏರುವ ಯಂತ್ರವಿಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ಮಿಶ್ರ ಬೆಳೆಯ ಕೃಷಿಕರಾಗಿ ಗುರುತಿಸಿಕೊಂಡಿರುವ ಅವರು ಅಡಿಕೆ, ತೆಂಗು, ಬಾಳೆ, ಕರಿಮೆಣಸಿನ ಜತೆಗೆ ಮನೆ ಖರ್ಚಿಗಾಗಿ ತರಕಾರಿಯನ್ನೂ ಬೆಳೆಯುತ್ತಿದ್ದಾರೆ. ಪ್ರಯೋಗಶೀಲ ಕೃಷಿಕರಾಗಿರುವ ಭಟ್‌ ಅವರು ಸಜೀಪ ಮೂಡ ಗ್ರಾ.ಪಂ.ನ ಸದಸ್ಯರೂ ಆಗಿದ್ದು, ಎರಡೂವರೆ ವರ್ಷಗಳ ಕಾಲ ಅಧ್ಯಕ್ಷ ರಾಗಿಯೂ ಕಾರ್ಯ ನಿರ್ವಹಿಸಿದ್ದರು. ಗಣಪತಿ ಭಟ್‌ ಅವರು ತಮ್ಮ ಶಿಕ್ಷಣ ಅಂದರೆ ಬಿ.ಎಸ್ಸಿ. ಪದವಿ ಮುಗಿಸಿಕೊಂಡು 1991ರಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 12 ಎಕ್ರೆ ವಿಸ್ತೀರ್ಣದಲ್ಲಿ ಕೃಷಿ ಕಾಯಕವನ್ನು ಮಾಡುತ್ತಿದ್ದು, ಸುಮಾರು 6,000 ಅಡಿಕೆ ಮರಗಳು, 440 ತೆಂಗಿನ ಮರಗಳು, 1,500 ಬಾಳೆ ಗಿಡಗಳನ್ನು ಹೊಂದಿದ್ದಾರೆ. ಬಾಳೆ ಯಲ್ಲಿ ಕದಳಿ, ಬೂದಿ ಸಹಿತ ಸ್ಥಳೀಯವಾಗಿ ಬೆಳೆಯುವ ತಳಿಗಳನ್ನು ಬೆಳೆಯು ತ್ತಿದ್ದಾರೆ. ತಮ್ಮ ಅಡಿಕೆ, ತೆಂಗು, ಬಾಳೆಗಳನ್ನು ಸ್ಥಳೀಯ ವ್ಯಾಪಾರಿ ಗಳಿಗೆ ಮಾರಾಟ ಮಾಡುತ್ತಿದ್ದು, ಸ್ವಲ್ಪ ಭಾಗವನ್ನು ಕ್ಯಾಂಪ್ಕೋ ಸಂಸ್ಥೆಗೆ ಮಾರಾಟ ಮಾಡುತ್ತಾರೆ.

ಯಂತ್ರೋಪಕರಣ ಬಳಕೆ
ಹುಲ್ಲು ಕತ್ತರಿಸುವ ಯಂತ್ರ, ಸ್ಪ್ರೆ ಪಂಪು, ಗುಂಡಿ ತೋಡುವ ಯಂತ್ರ, ಅಡಿಕೆ ಸಾಗಾಟಕ್ಕಾಗಿ ಯಂತ್ರ ಬಳಕೆ ಮಾಡುತ್ತಾರೆ. ಜತೆಗೆ ತಾವೇ ಆವಿಷ್ಕರಿಸಿರುವ ಅಡಿಕೆ ಮರ ಏರುವ ಯಂತ್ರವನ್ನೂ ಬಳಸುತ್ತಿದ್ದಾರೆ. ಗುಂಡಿತೋಡುವ ಯಂತ್ರ ಖರೀದಿಸಿ ಅದನ್ನು ಒಬ್ಬರೇ ಉಪಯೋಗಿಸುವಂತೆ ಅಭಿವೃದ್ಧಿಪಡಿಸಿದ್ದಾರೆ.

Advertisement

ಆವಿಷ್ಕಾರದ ಯಂತ್ರ
ಇವರು ಆವಿಷ್ಕರಿಸಿದ ಅಡಿಕೆ ಮರ ಏರುವ ಯಂತ್ರ ಪ್ರಸ್ತುತ ಸಾಕಷ್ಟು ಬೇಡಿಕೆ ಹೊಂದಿದ್ದು, ಇದನ್ನು ನೋಡಲು ಹಲವರು ಮನೆಗೆ ಆಗಮಿಸುತ್ತಿದ್ದಾರೆ. ಹಾಕಾಂಗ್‌, ನೈಝಿರಿಯಾ, ಕೆನಡಾದಿಂದಲೂ ತಂಡಗಳು ಆಗಮಿಸಿದ್ದವು. ಪ್ರಸ್ತುತ ಈ ಯಂತ್ರವನ್ನು ಶಿವಮೊಗ್ಗದ ಮೆಬನ್‌ ಎಂಜಿನಿಯರಿಂಗ್‌ ಸಂಸ್ಥೆ ತಯಾರಿಸುತ್ತಿದ್ದು, 250ಕ್ಕೂ ಹೆಚ್ಚು ಯಂತ್ರಗಳನ್ನು ಕೃಷಿಕರು ಖರೀದಿಸಿದ್ದಾರೆ. ಪ್ರಸ್ತುತ ಈ ಯಂತ್ರವನ್ನು ತೆಂಗಿನಮರ ಹತ್ತಲು, ವಿದ್ಯುತ್‌ ಕಂಬವೇರಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸುತ್ತಿದ್ದಾರೆ. ಅಡಿಕೆ, ತೆಂಗಿನ ಬುಡ ಬಿಡಿಸುವ ಯಂತ್ರವನ್ನೂ ಆವಿಷ್ಕರಿಸಿ ಯಶಸ್ವಿಯಾಗಿದ್ದಾರೆ.

ಸದಾ ಪ್ರಯೋಗಶೀಲತೆಯಿಂದ ಕೂಡಿರುವ ಇವರು ಕಡಿಮೆ ಜಮೀನು ಹೊಂದಿದ್ದರೂ ಕರಿ ಮೆಣಸು ಬೆಳೆಯಲು ಅನುಕೂಲವಾಗುವಂತೆ ಕಾಲಂ ಮೆಥಡ್‌ ಸಂಶೋಧಿಸಿದ್ದಾರೆ. ಜತೆಗೆ ಅಡಿಕೆ ಕೊಳೆ ರೋಗವನ್ನು ದೂರ ಮಾಡುವ ನಿಟ್ಟಿನಲ್ಲಿ ತನ್ನ 200 ಅಡಿಕೆ ಗಿಡಗಳಿಗೆ ಪ್ರಯೋಗಾತ್ಮಕವಾಗಿ ಕೇವಲ 6 ಕೆ.ಜಿ. ಸುಣ್ಣವನ್ನು ನೂರು ಲೀ. ನೀರಿನಲ್ಲಿ ಕಲಸಿ ಸಿಂಪಡಣೆ ಮಾಡಿದ್ದಾರೆ. 20 ದಿನಗಳಿಗೊಮ್ಮೆ 4 ಬಾರಿ ಈ ರೀತಿ ಮಾಡಿದ್ದು, ಪ್ರಸ್ತುತ ಅವುಗಳು ಕೊಳೆರೋಗಕ್ಕೆ ತುತ್ತಾಗಿಲ್ಲ.

ಪ್ರಶಸ್ತಿ-ಸಮ್ಮಾನ
ಗಣಪತಿ ಭಟ್‌ ಅವರ ಸಾಧನೆಗೆ ಸಾಕಷ್ಟು ಪ್ರಶಸ್ತಿಗಳು ಲಭಿಸಿದ್ದು, ಪುತ್ತೂರಿನ ಎಂಜಿನಿಯರ್ ಡೇ ಪ್ರಶಸ್ತಿ, ವಿವೇಕಾನಂದ ಕಾಲೇಜಿನಲ್ಲಿ ನಡೆದ ಅಗ್ರಿಫೆಸ್ಟ್‌ನಲ್ಲಿ ಇವರ ಸಂಶೋಧನೆಗೆ ಪ್ರಥಮ ಸ್ಥಾನ ದೊರಕಿದ್ದು, ಕೃಷಿ ಇಲಾಖೆಯ ಆತ್ಮ ಯೋಜನೆಯಲ್ಲಿ ಇವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಲಭಿಸಲಿದ್ದು, ಅದು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.

 ಬಿ.ಎಸ್ಸಿ. ಪದವೀಧರ
 ಕೃಷಿ ಆರಂಭ-1991
 ಅಡಿಕೆ ಗಿಡಗಳು-6,000
 ತೆಂಗು-440
 ಬಾಳೆ ಗಿಡಗಳು-1,500
 ಆದಾಯ-ಸುಮಾರು 5 ಲಕ್ಷ ರೂ.
 ಮೊಬೈಲ್‌ ಸಂಖ್ಯೆ- 9632774159

ಕೃಷಿ ಪೂರಕ ಆವಿಷ್ಕಾರಗಳು
ಪ್ರಗತಿಪರ ಕೃಷಿಕನಾಗಿ ಕೃಷಿಕರಿಗೆ ಅನುಕೂಲವಾಗುವ ಹಲವು ಆವಿಷ್ಕಾರಗಳನ್ನು ನಡೆಸಿದ್ದೇನೆ. ಪ್ರಸ್ತುತ ಮಾನವ ಸಹಿತ ಅಡಿಕೆ ಮರ ಏರುವ ಯಂತ್ರ ಉತ್ತಮ ಹೆಸರನ್ನು ತಂದುಕೊಟ್ಟಿದೆ. ಜತೆಗೆ ಅದು ಕೃಷಿಕರಿಗೆ ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚು ಬಾಳ್ವಿಕೆ ಬರುವ ಗುಣಮಟ್ಟದ ಯಂತ್ರವನ್ನು ಕೃಷಿಕರಿಗೆ ನೀಡಬೇಕು ಎಂದು ತಯಾರಿಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗಬೇಕು ಎನ್ನುವ ನಿಟ್ಟಿನಲ್ಲಿ ಮನೆಗೆ ಬಂದ ವರ್ತಕರಿಗೆ ಬೆಳೆಯನ್ನು ಮಾರಾಟ ಮಾಡುತ್ತೇನೆ.
 -ಗಣಪತಿ ಭಟ್‌ ಎನ್‌.ಕೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next