Advertisement

ಕೃಷಿಯಿಂದ ಸ್ವಾವಲಂಬನೆ ಬದುಕು ಕಟ್ಟಿಕೊಂಡ ಶಿಮಂತೂರಿನ ಪ್ರಗತಿಪರ ಕೃಷಿಕ

07:38 PM Dec 25, 2019 | Sriram |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತರದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಮೂಲ್ಕಿ : ಅತ್ಯಂತ ಸುಂದರವಾಗಿ ಅಕ್ಕಿ ಮುಡಿ ಕಟ್ಟಬಲ್ಲ ಕಲಾವಿದ ಮೂಲ್ಕಿ ಹೋಬಳಿಯ ಶಿಮಂತೂರು ಗ್ರಾಮದ ಹರೀಶ್‌ ಶೆಟ್ಟಿ ಪಂಜಿನಡ್ಕ ಅವರು ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿಸಾಕಣೆಯ ಮೂಲಕ ಸ್ವಾವಲಂಬನೆ ಬದುಕನ್ನು ಕಟ್ಟಿಕೊಂಡು ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಇವರು ಕೃಷಿ ಕ್ಷೇತ್ರದಲ್ಲಿನ ತಮ್ಮ ಸಾಧನೆಗಾಗಿ ಕೃಷಿ ಇಲಾಖೆಯಿಂದ ನೀಡಲಾಗುವ 2018-19ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ತಂದೆ ಕಾಡಿಯ ಶೆಟ್ಟಿ, ತಾಯಿ ಸುಂದರಿ ಶೆಡ್ತಿ ಪುತ್ರನಾದ ಹರೀಶ್‌ ಶೆಟ್ಟಿ ಅವರು ತಮ್ಮ ಇಬ್ಬರ ಮಕ್ಕಳ ಕಾಳಜಿಯೊಂದಿಗೆ ಕೃಷಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಇಬ್ಬರೂ ತಮ್ಮ ವಿದ್ಯಾಭ್ಯಾಸದೊಂದಿಗೆ ತಂದೆಯವರ ಕೃಷಿ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದಾರೆ. ತಾಯಿ ಸುಂದರಿ, ಅಕ್ಕ ಶಾರದಾ ಕೂಡ ಇವರ ಕೃಷಿ ಬದುಕಿನ ಕೆಲಸಗಳಲ್ಲಿ ಆಸರೆಯಾಗಿದ್ದಾರೆ.

ಸುಮಾರು ಮೂರುವರೆ ಎಕ್ರೆ ಪ್ರದೇಶದಲ್ಲಿ ಭತ್ತ, ತೆಂಗು, ಅಡಿಕೆ, ಕಾಳು ಮೆಣಸು, ಸಹಿತ ತರಕಾರಿಯನ್ನು ಬೆಳೆಯುತ್ತಾರೆ. ಕೃಷಿಯ ಜತೆಗೆ ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಣೆಯನ್ನು ಮಾಡುತ್ತಾರೆ. ಕಠಿನ ಶ್ರಮಜೀವಿಯಾದ ಇವರು ತಮ್ಮ ಬೆಳೆಕೊಯ್ಲುವಿನ ಮೆಷಿನ್‌, 7 ಹುಲ್ಲು ಕಟ್ಟಿಂಗ್‌ ಮೆಷಿನ್‌ಗಳ ಮೂಲಕ ಇವರು ಕೃಷಿ ಕಾರ್ಯ ಮಾಡುತ್ತಾರೆ. ತಮ್ಮ ಜಮೀನಿನ ಕೆಲಸಗಳಲ್ಲಿ ಕೂಲಿ ಕಾರ್ಮಿಕರ ಜತೆಗೆ ತಾವೇ ಸ್ವತಃ ಕೆಲಸಗಳಲ್ಲಿ ಶ್ರಮಜೀವಿಯಾಗಿ ದುಡಿಯುತ್ತಾರೆ.

ಸಾವಯವ ಕೃಷಿ
ಹರೀಶ್‌ ಶೆಟ್ಟಿ ಅವರ ನಾಲ್ಕು ದಶಕಗಳ ಕೃಷಿ ಬದುಕಿನಲ್ಲಿ ಇಲ್ಲಿಯವರೆಗೂ ರಾಸಾಯನಿಕ ಗೊಬ್ಬರವನ್ನು ಬಳಸದೇ ಕೇವಲ ಸಾವಯವ ಗೊಬ್ಬರವನ್ನು ಬಳಸಿ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

Advertisement

ಬಹುಬೆಳೆಯ ಸಾಧಕ
ಈ ಬಾರಿ 40 ಸಾವಿರಕ್ಕೂ ರೂ. ಮಿಕ್ಕಿದ ಮೌಲ್ಯದ ನಾಟಿ ಕೋಳಿಯನ್ನು ಮರಿ ಮಾಡಿ ಬೆಳೆಸಿ ಮಾರಾಟ ಮಾಡಲಾಗಿದೆ. ಭತ್ತದ ಕೃಷಿಯ ಜತೆಗೆ ತೆಂಗು, ಅಡಿಕೆ ಮತ್ತು ಒಳ್ಳೆ ಮೆಣಸಿನ ಕೃಷಿಯನ್ನು ಮಾಡುತ್ತಿರುವ ಇವರು ತನ್ನ ಒಂದು ಗದ್ದೆಯಲ್ಲಿ ಸಾಕಷ್ಟು ಬಗೆಯ ತರಕಾರಿಯನ್ನು ಬೆಳೆಸುವ ಮೂಲಕ ಸಾಕಷ್ಟು ಆದಾಯವನ್ನು ಗಳಿಸುತ್ತಿರುವುದನ್ನು ಹೆಮ್ಮೆಯಿಂದ ಸಂತೋಷವನ್ನು ಹಂಚಿಕೊಳ್ಳುತ್ತಾರೆ ಹರೀಶ್‌ ಅವರು.

ಇವರ ಮನೆಯಲ್ಲಿ 6-7 ಹಸುಗಳನ್ನು ಸಾಕಲಾಗುತ್ತಿದೆ. ಹೈನುಗಾರಿಕೆಯೂ ಕೂಡ ಉತ್ತಮವಾಗಿದ್ದು ಕೃಷಿಯ ಜತೆಗೆ ಹೈನುಗಾರಿಕೆ ಕೂಡ ಇವರ ಜೀವನಕ್ಕೆ ಕೈ ಹಿಡಿದಿದೆ. ಕೃಷಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕೃಷಿಯಲ್ಲಿ ಉತ್ತಮ ಪರಿಶ್ರಮದಿಂದ ಉತ್ತಮ ಜೀವನವನ್ನು ಸಾಧಿಸಬಹುದಾಗಿದೆ ಎನ್ನುತ್ತಾರೆ ಅವರು.

ಸಾಮಾಜಿಕವಾಗಿ ವಿವಿಧ ಸಂಘಟನೆಯಲ್ಲಿ ದುಡಿಯುತ್ತಿರುವ ಅವರು ಉತ್ತಮ ಭಜನ ಸಂಕೀರ್ತನೆ ಕಾರರು ಮಾತ್ರವಲ್ಲ ತನ್ನ ಪರಿಸರದ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿಯೂ ಇವರು ಶ್ರಮಿಸುತ್ತಿದ್ದಾರೆ. ಇವರು ಪ್ರತಿ ವರ್ಷ ಭತ್ತದ ಕೃಷಿಯಲ್ಲಿ ಕೊಳಕೆ ಮತ್ತು ಎಣೆಲ್‌ ಬೆಳೆಯನ್ನು ಯಾವುದೇ ರಸಾಯನಿಕ ಗೊಬ್ಬರ ಇಲ್ಲದೆ ಕೇವಲ ಸಾವಯುವ ಗೊಬ್ಬರದಿಂದಲೇನಡೆಸಿ ಮುಂದುವರಿಸಿಕೊಂಡು ಬಂದಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು
ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘ ವಿಜಯ ಗಾಮೀಣಾ ಅಭಿವೃದ್ಧಿ ಯೋಜನೆಯ ಮೂಲಕ ಸಂಘದ ವ್ಯಾಪ್ತಿಯ 13 ಗ್ರಾಮಗಳಲ್ಲಿ ಉತ್ತಮ ಬೆಳೆಯ ಸಾಧನೆಗಾಗಿ ಪ್ರಥಮ ಸ್ಥಾನ, ತಾಲೂಕು ಮಟ್ಟದಲ್ಲಿ ಮೂರನೇ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನವನ್ನು ಗೆದ್ದು ಕೊಂಡಿರುವ ಇವರು 2018-2019ನೇ ಸಾಲಿನ ಸರಕಾರದ ಕೃಷಿ ಇಲಾಖೆಯ ಉತ್ತಮ ಕೃಷಿಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ಬಾರಿ ಕಟೀಲಿನಲ್ಲಿ ನಡೆದ ಕೃಷಿಮೇಳದಲ್ಲಿ ಮುಡಿ ಕಟ್ಟುವ ಸ್ಪರ್ಧೆಯಲ್ಲಿ 40 ಮಂದಿ ಸ್ಪರ್ಧಾಳುಗಳಲ್ಲಿ ಮೊದಲ ಸ್ಥಾನವನ್ನು ಪಡೆದ ಹಿರಿಮೆ ಇವರದ್ದು. ಶೂನ್ಯಬಂಡವಾಳ ಕೃಷಿ ಯೋಜನೆಯಲ್ಲಿ ಸಕ್ರೀಯ ಸದಸ್ಯರಾಗಿರುವ ಇವರು ಸಾವಯುವ ಗೊಬ್ಬರವನ್ನು ತಯಾರಿಸುವ ವಿವಿಧ ಹಂತಗಳ ಯೋಜನೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ದುಡಿಯಬಲ್ಲವರಿಗಷ್ಟೇ ಕೃಷಿ
ಕೃಷಿಯೂ ನನಗೆ ನೆಮ್ಮದಿಯ ಬದುಕು ನೀಡಿದೆ. ಉತ್ತಮ ರೀತಿಯ ಮನೆ, ಪರಿಸರ ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಮಾಜದಲ್ಲಿ ಗೌರವದಿಂದ ಬದುಕಲು ಕೃಷಿ ಬದುಕು ನನಗೆ ಕಲಿಸಿಕೊಟ್ಟಿದೆ. ತಾನು ಕೃಷಿ ಕೆಲಸ ಮಾಡುವ ಮೂಲಕ ಸಾಕಷ್ಟು ಬೆಳೆದಿದ್ದೇನೆ ಕೃಷಿಗೆ ಸರಕಾರದ ಮೂಲಕ ದೊರೆಯುವ ಸವಲತ್ತುಗಳಲ್ಲದೆ ಇನ್ನಾವುದೇ ಸಾಲ ಇಲ್ಲದೆ ತನ್ನ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದೇನೆ. ಇಂದಿನ ಯುವ ಜನತೆಯೂ ಯಾವುದೇ ಸಂಕೋಚವಿಲ್ಲದೇ ಕೃಷಿನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಉದ್ಯೋಗದ ಜತೆಗೆ ಸ್ವಾವಲಂಬಿಗೆ ಇದು ಸಾಧ್ಯ.
– ಹರೀಶ್‌ ಶೆಟ್ಟಿ,ಕೃಷಿಕ

ಮೊಬೈಲ್‌ ಸಂಖ್ಯೆ: 9916215538

ಹೆಸರು:
ಹರೀಶ್‌ ಶೆಟ್ಟಿ ಪಂಜಿನಡ್ಕ
ಏನೇನು ಕೃಷಿ: ಭತ್ತ, ತೆಂಗು, ಅಡಿಕೆ, ಕಾಳು ಮೆಣಸು ಮತ್ತು ತರಕಾರಿ
ವಯಸ್ಸು: 58
ಕೃಷಿ ಪ್ರದೇಶ:
ಮೂರುವರೆ ಎಕ್ರೆ

-ಸರ್ವೋತ್ತಮ ಅಂಚನ್‌ ಮೂಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next