Advertisement

ಮಹಿಳೆಯರಿಗೆ ಸಹಾಯಕವಾಗುವ ಕಾರ್ಯಕ್ರಮ ನಡೆಸುವಾಸೆ

08:50 AM Jul 26, 2017 | Team Udayavani |

ತಮ್ಮ ನಿರರ್ಗಳ ಮಾತಿನ ಶೈಲಿಯಲ್ಲಿ ಕಾರ್ಯ ಕ್ರಮ ನಿರ್ವಹಣೆ, ಟಿವಿ ಆ್ಯಂಕರಿಂಗ್‌, ಮಿಸ್‌ ಮಂಗಳೂರು, ನೃತ್ಯ, ನಾಟಕ, ಸಿನೆಮಾಗಳ ಮೂಲಕ ಚಿರಪರಿಚಿತರಾದ ಮಂಗಳೂರಿನ ಸೌಜನ್ಯಾ ಹೆಗ್ಡೆ ಇದೀಗ ಮಿಸೆಸ್‌ ಇಂಡಿಯಾ ವರ್ಲ್ಡ್ವೈಡ್‌ನ‌ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. 

Advertisement

ಹಾಟ್‌ ಮೊಂಡೆ  ಸಂಸ್ಥೆ ನಡೆಸುವ ಸ್ಪರ್ಧೆಯ ಅಂತಿಮ ಸುತ್ತಿಗೆ ತಲುಪಿರುವ ಸೌಜನ್ಯಾ ಹೆಗ್ಡೆ  ಮಂಗಳೂರಿನ ಏಕೈಕ ಸ್ಪರ್ಧಿ. ಸುಮಾರು 15 ವಿಭಾಗಗಳಲ್ಲಿ ಪ್ರತೀ ಸ್ಪರ್ಧಿಯೂ ಸ್ಪರ್ಧಿಸಬೇಕಿದ್ದು, ರಾಜ್ಯದಿಂದ 7 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಜು. 27ರಿಂದ ಆ. 4 ರವರೆಗೆ ವಿಯೆಟ್ನಾಂನಲ್ಲಿ ಪೂರಕ ತರಬೇತಿ ನಡೆಯಲಿದ್ದು, ಆ.5ರಂದು ಹೊಸದಿಲ್ಲಿಯಲ್ಲಿ ಫೈನಲ್‌ ಸ್ಪರ್ಧೆ ನಡೆಯಲಿದೆ. 

ಸಾಂಸ್ಕೃತಿಕ ನಂಟು
ಎಳವೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳ‌ ನಂಟು ಹೊಂದಿದ್ದ ಸೌಜನ್ಯಾ ಅದೇ ಕ್ಷೇತ್ರದಲ್ಲಿ ಇಂದು ಸಾಧನೆಯ ಹಾದಿ ಹಿಡಿದಿದ್ದಾರೆ. ನಾಟಕ, ಯಕ್ಷಗಾನ, ನೃತ್ಯಗಳ ಮೂಲಕ ಎಳವೆಯಲ್ಲಿ ಸಾಧನೆ ತೋರಿದ್ದ ಇವರು ಬಳಿಕ ಚಿತ್ರರಂಗ, ಸೌಂದರ್ಯ ಸ್ಪರ್ಧೆಗಳಿಗೆ ತನ್ನನ್ನು ತೆರೆದುಕೊಂಡರು. 

ಶೈಕ್ಷಣಿಕವಾಗಿ ಇವರು ಕೆಜಿ ಶಿಕ್ಷಣದಿಂದ ಪಿಯುಸಿವರೆಗೆ ಬೆಂದೂರ್‌ ಆ್ಯಗ್ನೇಸ್‌ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಬಳಿಕ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಲಾ ಪದವಿ ಪಡೆದರು. ಪಿಯುಸಿಯಲ್ಲಿ ಸೈನ್ಸ್‌ ಆಯ್ಕೆ ಮಾಡಿಕೊಂಡಿದ್ದ ಇವರು ಎಂಜಿನಿಯರೋ, ಡಾಕ್ಟರೋ ಆಗಬೇಕಿತ್ತು. ಕಾನೂನು ಪದವಿ ಪಡೆದ ಬಳಿಕ ನ್ಯಾಯವಾದಿಯಾಗಬೇಕಿತ್ತು. ಆದರೆ ಇಂದು ವೃತ್ತಿಯಲ್ಲಿ ಟಿವಿ ಚಾನೆಲ್‌ವೊಂದರೆ ಆ್ಯಂಕರ್‌ ಆಗಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಹಂತಕ್ಕೆ ಬೆಳೆದಿದ್ದಾರೆ. 

ಕುಟುಂಬದ ಸಹಕಾರ
ಸೌಜನ್ಯ ಹೆಗ್ಡೆ ಅವರ ಪ್ರಗತಿಯಲ್ಲಿ ತಮ್ಮ ಕುಟುಂಬ, ಸಹೋದ್ಯೋಗಿಗಳು, ಸ್ನೇಹಿತರ ಸಹಕಾರವೇ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎಂ. ಸದಾಶಿವ ಹೆಗ್ಡೆ ಹಾಗೂ ಸುಮತಿ ಎಸ್‌. ಹೆಗ್ಡೆ ಅವರ ಪುತ್ರಿಯಾದ ಸೌಜನ್ಯಾ, ಸುಧೀರ್‌ ಹೆಗ್ಡೆ ಅವರನ್ನು ವಿವಾಹವಾದರು. 

Advertisement

ಸುಧೀರ್‌ ಅಬ್ರಾಡ್‌ನ‌ಲ್ಲಿ ಉದ್ಯೋಗಿಯಾಗಿದ್ದ ಕಾರಣ ಸೌಜನ್ಯಾ ಅವರು ಕೂಡ ತನ್ನ ಚಟುವಟಿಕೆ ಗಳನ್ನು ತ್ಯಜಿಸಿ ಅನಿವಾರ್ಯವಾಗಿ ಅಲ್ಲಿಗೆ ತೆರಳಿದರು. ಅಲ್ಲೂ ತನ್ನ ಮಾಲಕತ್ವದ ನೃತ್ಯ ಸಂಸ್ಥೆಯೊಂದನ್ನು ಸ್ಥಾಪಿಸಿದರು. 10 ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸೌಜನ್ಯಾ ಬಳಿಕ ಮತ್ತೆ ಮಂಗಳೂರಿಗೆ ಮರಳಿದರು. ಪ್ರಸ್ತುತ ಸೌಜನ್ಯಾ ಅವರು ಸೌರವಿ ಹಾಗೂ ಸೌರಾಗ್‌ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಬೆಳೆದಿರುವುದೇ ನನ್ನ ಹೆಮ್ಮೆ
ಪ್ರಶಸ್ತಿ ಗೆಲ್ಲುವುದಕ್ಕಿಂತಲೂ ಈ ಮಟ್ಟಕ್ಕೆ ಬೆಳೆದಿರುವುದೇ ನನ್ನ ಹೆಮ್ಮೆ. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಇಲ್ಲಿ ಒಟ್ಟು 15 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಟ್ಯಾಲೆಂಟ್‌ ರೌಂಡ್‌ನ‌ಲ್ಲಿ ಮಹಿಳಾ ಶಕ್ತಿಯ ರೂಪವನ್ನು ಪ್ರದರ್ಶಿಸಲಿದ್ದೇನೆ. ಚಾರಿಟಿ ಶೋನಲ್ಲಿ ರಾಷ್ಟ್ರೀಯ ಬ್ಲೆ$çಂಡ್‌ ಸ್ಕೂಲ್‌ನ ಜತೆಗೆ ಒಪ್ಪಂದ ಮಾಡಲಾಗಿದ್ದು, ಅದರ ನೆರವಿನ ಮೂಲಕ ನಾವು ಗೆಲ್ಲಬಹುದಾಗಿದೆ. ಗೆದ್ದು ಬಂದ ಬಳಿಕ ಮಹಿಳೆಯರಿಗೆ ಸಹಕಾರವಾಗುವ ಏನಾದರೂ ಕಾರ್ಯಕ್ರಮ ನಡೆಸಬೇಕೆಂಬ ಹಂಬಲವಿದೆ. 
– ಸೌಜನ್ಯಾ ಹೆಗ್ಡೆ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next