Advertisement

ವೃತ್ತಿಪರ ತನಿಖೆ ನಡೆದಂತೆ ಕಾಣುತ್ತಿಲ್ಲ!

12:06 PM Jun 02, 2018 | Team Udayavani |

ಬೆಂಗಳೂರು: ಒಂದು ತನಿಖಾ ಸಂಸ್ಥೆಯಿಂದ ನಿರೀಕ್ಷಿಸಬಹುದಾದ ವೃತ್ತಿಪರ ತನಿಖೆ ನಡೆದಂತೆ ಕಾಣುತ್ತಿಲ್ಲ; ಕೇವಲ ಕಣ್ಣೊರೆಸುವ ತಂತ್ರದಂತಿದೆ. ವರದಿಯಲ್ಲಿ ತುಂಬಾ ತೂಕದ ವಿಷಯಗಳಿವೆ ಎಂದು ಅನಿಸಿದರೂ, ಒಳಗಡೆ ಏನೂ ಇಲ್ಲ. ಅಲ್ಲಿಗೆ ಹೋದ; ಇಲ್ಲಿಗೆ ಬಂದ ಎಂದಷ್ಟೇ ಇದೆ. ಈ ಅಸಮರ್ಪಕ ಮತ್ತು ಅಸಮರ್ಥತೆಯಿಂದ ಕೂಡಿದ ತನಿಖಾ ವಿಧಾನ ಆಘಾತ ತರಿಸಿದೆ.

Advertisement

ವೈಟ್‌ಫೀಲ್ಡ್‌ನಲ್ಲಿ ಟೆಕ್ಕಿ ಕುಮಾರ್‌ ಅಜಿತಾಬ್‌ ನಾಪತ್ತೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳನ್ನು ಹೈಕೋರ್ಟ್‌ ಶುಕ್ರವಾರ ತರಾಟೆಗೆ ತೆಗೆದುಕೊಂಡ ರೀತಿ ಇದು. “ನಾನು ತನಿಖಾಧಿಕಾರಿಯ ಸಾಮರ್ಥ್ಯ ಪ್ರಶ್ನಿಸುತ್ತಿಲ್ಲ. ಆದರೆ, ತನಿಖೆ ಸಮಗ್ರ ಹಾಗೂ ಸಮರ್ಥವಾಗಿರಬೇಕು ಎಂದು ಹೇಳುತ್ತಿದ್ದೇನೆ.

ಇಷ್ಟು ತಿಂಗಳಿಂದ ತನಿಖೆ ನಡೆಸಿದರೂ ಸಕಾರಾತ್ಮಕ ಫ‌ಲಿತಾಂಶ ಸಿಕ್ಕಿಲ್ಲ ಹಾಗೂ ತನಿಖೆ ಪ್ರಗತಿ ಕಂಡಿಲ್ಲ. ಈವರೆಗಿನ ಬೆಳವಣಿಗೆ ಕಣ್ಣೊರೆಸುವ ಮಾದರಿಯಲ್ಲಿದೆ. ಈವರೆಗೂ ಅಜಿತಾಬ್‌ ಬದುಕಿದ್ದಾನೋ ಅಥವಾ ಇಲ್ಲವೋ? ಎಂಬುದನ್ನೇ ಕಂಡುಕೊಂಡಿಲ್ಲ’ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಬೇಸರ ವ್ಯಕ್ತಪಡಿಸಿದರು.

ಅಜಿತಾಬ್‌ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ತಂದೆ ಅಶೋಕ್‌ಕುಮಾರ್‌ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರು ಸಿಐಡಿ ಕಾರ್ಯವೈಖರಿಯನ್ನು ಟೀಕಿಸಿದರು. 

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಅಜಿತಾಬ್‌ ನಾಪತ್ತೆಯಾದ ನಂತರ ಆತನ ಮೊಬೈಲ್‌ ಕರೆಗಳ ಮಾಹಿತಿ ಒಳಗೊಂಡ ವರದಿಯನ್ನು ಹಾಜರುಪಡಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಅಜಿತಾಬ್‌ ಮೊಬೈಲ್‌ಗೆ ಯಾರು ಕರೆ ಮಾಡಿದ್ದರು? ಆತ ಯಾರಿಗೆ ಕರೆ ಮಾಡಿದ್ದ? ಕರೆ ಮಾಡಿದವರನ್ನು ತನಿಖಾಧಿಕಾರಿಗಳು ಸಂಪರ್ಕಿಸಿದರೇ ಎಂದು ಪ್ರಶ್ನಿಸಿದರು. ಇದಕ್ಕೆ ಸರ್ಕಾರಿ ವಕೀಲರು ಯಾರನ್ನೂ ಸಂಪರ್ಕಿಸಿಲ್ಲ ಎಂದು ಉತ್ತರಿಸಿದರು.

Advertisement

ಯಾವ ರೀತಿ ತನಿಖೆ ಮಾಡಿದ್ದೀರಿ?: ತನಿಖಾಧಿಕಾರಿ ಮಾತು ಕೇಳಿ ಕೋಪಗೊಂಡ ನ್ಯಾಯಮೂರ್ತಿಗಳು, “ನಾಪತ್ತೆಯಾದ ನಂತರ ಅಜಿತಾಬ್‌ಗ ಕರೆ ಮಾಡಿದವರ್ಯಾರು? ಆತ ಯಾರಿಗೆ ಕರೆ ಮಾಡಿದ್ದ? ಎಂಬುದು ತಿಳಿದುಕೊಳ್ಳಲಿಲ್ಲ ಎಂದಾದರೆ, ಇನ್ಯಾವ ರೀತಿ ತನಿಖೆ ಮಾಡಿದ್ದೀರಿ?’ ಎಂದು ಖಾರವಾಗಿ ಪ್ರಶ್ನಿಸಿದರು. “ಈ ವಿಚಾರಗಳನ್ನು ಸಾಮಾನ್ಯರೂ ಯೋಚಿಸುತ್ತಾರೆ.

ಆದರೆ, ತನಿಖಾಧಿಕಾರಿ ಯೋಚಿಸಿಲ್ಲ ಎಂದರೆ ಆಶ್ಚರ್ಯವಾಗುತ್ತದೆ. ನ್ಯಾಯಾಧೀಶನಾಗಿ ನಾನೇ ಇಷ್ಟೆಲ್ಲಾ ದಿಕ್ಕುಗಳಿಂದ ಯೋಚಿಸಬೇಕಾದರೆ, ತನಿಖಾಧಿಕಾರಿಯು ಸಾವಿರಾರು ದಿಕ್ಕುಗಳಿಂದ ಆಲೋಚನೆ ಮಾಡಬೇಕಾಗುತ್ತದೆ,’ ಎಂದು ತರಾಟೆಗೆ ತೆಗೆದುಕೊಂಡರು.

ಆರೇಳು ತಿಂಗಳಿಂದ ತನಿಖೆ ನಡೆಸಿದರೂ ಸಕಾರಾತ್ಮಕ ಫ‌ಲಿತಾಂಶ ಸಿಕ್ಕಿಲ್ಲ ಹಾಗೂ ತನಿಖೆ ಪ್ರಗತಿ ಕಂಡಿಲ್ಲ. ಈವರೆಗಿನ ಬೆಳವಣಿಗೆ ಕಣ್ಣೊರೆಸುವ ಮಾದರಿಯಲ್ಲಿದೆ. ವರದಿಯಲ್ಲಿ ತುಂಬಾ ತೂಕದ ವಿಷಯಗಳಿವೆ ಎಂದು ಅನಿಸುತ್ತದೆ. ಒಳಗಡೆ ಏನೇನೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

“ಅಜಿತಾಬ್‌ ಈವರೆಗೆ ಪತ್ತೆ ಆಗದಿರುವುದನ್ನು ನೋಡಿದರೆ, ದೇಶದ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವ ಸಂಘನೆಗಳ ಕೈಗೆ ಆತ ಸಿಕ್ಕಿರಬಹುದೇನೋ? ಎಂಬ ಅನುಮಾನ ಮೂಡಿದೆ. ಮೇಲಾಗಿ ಆತ ಟೆಕ್ಕಿಯಾಗಿದ್ದು, ಆ ಸಂಘಟನೆಗಳು ಆತನ ಕೌಶಲ್ಯವನ್ನು ದೇಶದ ವಿರುದ್ಧ ಬಳಸುತ್ತಿದ್ದರೆ ಏನು ಮಾಡಲು ಸಾಧ್ಯವಿದೆ?

ಈಗಿನ ತಂತ್ರಜ್ಞಾನ ಬಳಸಿಕೊಂಡು ಒಬ್ಬ ವ್ಯಕ್ತಿ ಎಲ್ಲಿದ್ದಾನೆ ಎಂಬುದನ್ನು ಶ್ರಮಿವಿಲ್ಲದೆ ಕಂಡು ಹಿಡಿಯಬಹುದು. ಆದರೆ, ಅಜಿತಾಬ್‌ ಬದುಕ್ಕಿದ್ದಾನೋ ಇಲ್ಲವೋ? ಎಲ್ಲಿದ್ದಾನೆ? ಎಂಬುದ್ನನೇ ನೀವು ಕಂಡು ಹಿಡಿದಿಲ್ಲ. ತನಿಖೆ ಅಸಮರ್ಪಕ ಹಾಗೂ ಅಸಮರ್ಥತೆಯಿಂದ ಕೂಡಿದೆ. ತನಿಖಾಧಿಕಾರಿ ಶ್ರಮ ಹಾಕಿಲ್ಲ,’ ಎಂದರು.

ಮುಂದಿನ ವಿಚಾರಣೆ ವೇಳೆ 2017ರ ಡಿ.18ರಿಂದ 26ರವರೆಗಿನ ಅಜಿತಾಬ್‌ನ ಮೊಬೈಲ್‌ ಕರೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಕೋರ್ಟ್‌ಗೆ ಸಲ್ಲಿಸಬೇಕು. ಸಾಧ್ಯವಾದರೆ ಮೊಬೈಲ್‌ ಸೇವಾ ಕಂಪನಿಗಳಿಂದ ಕರೆಗಳ ಧ್ವನಿಮುದ್ರಿಕೆ ಪಡೆಯುವಂತೆ ನ್ಯಾಯಾಧೀಶರು ತನಿಖಾಧಿಕಾರಿಗಳಿಗೆ ಸೂಚಿಸಿದರು.

ನ್ಯಾಯಾಲಯ ಹೇಳಿದ್ದೇನು?
-ತನಿಖಾ ವರದಿ ಕೇವಲ ಕಣ್ಣೊರೆಸುವ ತಂತ್ರದಂತಿದೆ.
-ಹೊರಗಿಂದ ಮಹತ್ವದ್ದೆನಿಸಿದರೂ ವರದಿ ಒಳಗೆ ಏನೂ ಇಲ್ಲ.
-ಆತ ಅಲ್ಲಿಗೆ ಹೋದ, ಇಲ್ಲಿಗೆ ಬಂದ ಎಂದಷ್ಟೇ ಇದೆ.
-ಟೆಕ್ಕಿ ಏನಾದ? ಬದುಕಿದ್ದಾನೋ ಇಲ್ಲವೋ ಎಂಬ ಸ್ಪಷ್ಟತೆ ಎಲ್ಲೂ ಇಲ್ಲ.
-ಆರು ತಿಂಗಳು ಕಳೆದರೂ ಸಕಾರಾತ್ಮಕ ಫ‌ಲಿತಾಂಶ ದೊರೆತಿಲ್ಲ.
-ಅಸಮರ್ಥತೆಯಿಂದ ಕೂಡಿದ ತನಿಖಾ ವಿಧಾನ ಆಘಾತ ತರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next