ಬೆಂಗಳೂರು: ತಾವೇ ಡ್ರೈವಿಂಗ್ ಟ್ರ್ಯಾಕ್ ನಲ್ಲಿ ಪರೀಕ್ಷೆ ನಡೆಸಿ ಡ್ರೈವಿಂಗ್ ಲೈಸೆನ್ಸ್‌ಗೆ ಅಗತ್ಯವಿರುವ ಅರ್ಹತಾ ಪ್ರಮಾಣಪತ್ರ ವಿತರಿಸಲು ಹಲವು ಡ್ರೈವಿಂಗ್ ಸ್ಕೂಲ್‌ಗಳು ಉತ್ಸುಕವಾಗಿದ್ದು ಈಗಾಗಲೇ ಈ ಸಂಬಂಧ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸುತ್ತಿವೆ. ಈಗ ಇದರ ನಿಯಮಾವಳಿಗಳನ್ನು ಪೂರೈಸಿದ್ದಾಗಿ ಹೇಳಿಕೊಂಡಿರುವ ಖಾಸಗಿ ವ್ಯಕ್ತಿಯೊಬ್ಬರು ಅನುಮತಿ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಆರ್‌ಟಿಒ ಕಚೇರಿಗೆ ಅಲೆದಾಟ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಜೂನ್ 1ರಿಂದ ಖಾಸಗಿ ಡ್ರೈವಿಂಗ್ ಸ್ಕೂಲ್‌ಗಳಲ್ಲೇ ಪರೀಕ್ಷೆ ನಡೆಸಿ, ಚಾಲನಾ ಅನುಜ್ಞಾ ಪತ್ರಕ್ಕೆ (ಡ್ರೈವಿಂಗ್ ಲೈಸೆನ್ಸ್) ಅಗತ್ಯ ಅರ್ಹತಾ ಪ್ರಮಾಣಪತ್ರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಿದೆ. ಈ ಸಂಬಂಧದ ಪ್ರಕ್ರಿಯೆಗೆ ಸಾರಿಗೆ ಇಲಾಖೆ ಚಾಲನೆ ನೀಡಿದ್ದು, ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳಿಂದ (ಎಡಿಟಿಸಿ) ಅರ್ಜಿ ಆಹ್ವಾನಿಸಿದೆ. ಅಲ್ಪಾವಧಿಯಲ್ಲೇ ಖಾಸಗಿ ವ್ಯಕ್ತಿಯೊಬ್ಬರು ಈ ನಿಟ್ಟಿನಲ್ಲಿ ಮುಂದೆ ಬಂದಿದ್ದಾರೆ.
ನಗರದ ಯಲಹಂಕದ ವ್ಯಕ್ತಿಯೊಬ್ಬರು ತಮ್ಮ ಎರಡು ಎಕರೆ ಜಾಗದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸಿ, ಸಾರಿಗೆ ಇಲಾಖೆಯ ಅಗತ್ಯ ಮಾನದಂಡಗಳೊಂದಿಗೆ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಹತಾ ಪ್ರಮಾಣಪತ್ರ ವಿತರಿಸಲು ಮುಂದಾಗಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಖಾಸಗಿ ಸಂಸ್ಥೆಯಿಂದ ಡ್ರೈವಿಂಗ್ ಪರೀಕ್ಷೆ ನಡೆಸಿ, ಪ್ರಮಾಣಪತ್ರ ವಿತರಿಸುವ ರಾಜ್ಯದ ಮೊದಲ ಎಡಿಟಿಸಿ ಇದಾಗಲಿದೆ.
ಮಾನದಂಡಗಳು ಏನು?: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾಕಷ್ಟು ಡ್ರೈವಿಂಗ್ ಸ್ಕೂಲ್‌ಗಳಿವೆ. ಆದರೆ, ಅವರೆಲ್ಲರಿಗೂ ಅರ್ಹತಾ ಪ್ರಮಾಣಪತ್ರ ನೀಡಲು ಅವಕಾಶ ಇರುವುದಿಲ್ಲ. 2 ಎಕರೆ ಜಾಗ ಇರಬೇಕು. 8 ಸಂಖ್ಯೆ ಆಕೃತಿಯ ಡ್ರೈವಿಂಗ್ ಟ್ರ್ಯಾಕ್ ಜತೆಗೆ ನಿರ್ದಿಷ್ಟ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಿರಬೇಕು. ಅಭ್ಯರ್ಥಿಗಳಿಗೆ ಸುಮಾರು ಒಂದು ತಿಂಗಳು ತರಗತಿಗಳನ್ನು ತೆಗೆದುಕೊಂಡು, ಸಾರಿಗೆ ನಿಯಮಗಳ ಬಗ್ಗೆ ಮಾಹಿತಿ ನೀಡಿರಬೇಕು ಎನ್ನುವುದು ಸೇರಿದಂತೆ ಹಲವು ನಿಯಮಾವಳಿಗಳನ್ನು ರೂಪಿಸಲಾಗಿದೆ. ಅಂತಹವರು ಮಾತ್ರ ಈ ಅರ್ಹತಾ ಪ್ರಮಾಣಪತ್ರ ವಿತರಿಸಬಹುದು. ಅದರಂತೆ ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರಗಳು ರಾಜ್ಯದಲ್ಲಿ ಒಂದೂ ಇಲ್ಲ. ಈಗ ಯಲಹಂಕದಲ್ಲಿ ಮಾತ್ರ ವ್ಯಕ್ತಿಯೊಬ್ಬರಿಂದ ಅರ್ಜಿ ಸ್ವೀಕೃತಗೊಂಡಿದೆ. ಅವರು ಎಡಿಟಿಸಿಗೆ ಅಗತ್ಯವಿರುವ ಎಲ್ಲ ಮಾನದಂಡಗಳನ್ನು ಅನುಸರಿಸಿದ್ದರೆ, ಅವ ರಿಗೆ ಪರವಾನಗಿ ನೀಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಸರಾಸರಿ ವೃತ್ತಿಪರ ಮತ್ತು ವೃತ್ತಿಯೇತರ ಸೇರಿ ಒಂದೂವರೆಯಿಂದ ಎರಡು ಕೋಟಿ ಚಾಲನಾ ಅನುಜ್ಞಾ ಪತ್ರಗಳನ್ನು ಸಾರಿಗೆ ಇಲಾಖೆ ವಿತರಿಸುತ್ತದೆ. ಇದರಲ್ಲಿ ವೃತ್ತಿಪರ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆ 15ರಿಂದ 20 ಲಕ್ಷ ಇರುತ್ತದೆ. ಕಳೆದ ವರ್ಷ ಅಂದರೆ 2022-23ರಲ್ಲಿ 2.23 ಕೋಟಿ ವಿವಿಧ ಪ್ರಕಾರದ ಡ್ರೈವಿಂಗ್ ಲೈಸೆನ್ಸ್‌ಗಳನ್ನು ಸಾರಿಗೆ ಇಲಾಖೆ ನೀಡಿದೆ.
ಇದರಲ್ಲಿ ನಾಲ್ಕು ಚಕ್ರದ ವಾಹನಗಳ ಡ್ರೈವಿಂಗ್ ಲೈಸೆನ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಚಾಲನಾ ತರಬೇತಿ ಕೇಂದ್ರಗಳು ಅಥವಾ ಏಜೆಂಟ್‌ಗಳ ಮೂಲಕವೇ ಆಗುತ್ತವೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಡೆಯುವವರ ಸಂಖ್ಯೆ ಈಗಲೂ ಕಡಿಮೆ ಇದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಯಲಹಂಕ ವ್ಯಕ್ತಿಯೊಬ್ಬರಿಂದ ಡ್ರೈವಿಂಗ್ ಲೈಸೆನ್ಸ್‌ಗೆ ಬೇಕಾದ ಅರ್ಹತಾ ಪ್ರಮಾಣಪತ್ರ ವಿತರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಅದನ್ನು ಈಗಾಗಲೇ ಆ ಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪರಿಶೀಲನೆಗಾಗಿ ಕಳುಹಿಸಿಕೊಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ನೀಡಿದ ಮಾರ್ಗಸೂಚಿ ಹಾಗೂ ಸಾರಿಗೆ ಇಲಾಖೆ ನಿಯಮಗಳನ್ನು ಅನುಸರಿಸಿದ್ದರೆ, ಅನುಮತಿ ನೀಡಬೇಕಾಗುತ್ತದೆ.
●ಬಿ.ಪಿ. ಉಮಾಶಂಕರ್, ಹೆಚ್ಚುವರಿ ಸಾರಿಗೆ ಆಯುಕ್ತರು (ಆಡಳಿತ)
-ವಿಜಯಕುಮಾರ ಚಂದರಗಿ