ಹಾವೇರಿ: ಈ ಹಿಂದೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳಿಗಿಂತ ಹಾವೇರಿಯ ಸಮ್ಮೇಳನ ಉತ್ಕೃಷ್ಟವಾಗಿರಲಿದ್ದು, ಭವ್ಯ ಕರ್ನಾಟಕ ರಚನೆ ಮಾಡುವ ನಿರ್ಣಯಗಳು ಸಮ್ಮೇಳನದಲ್ಲಿ ಹೊರ ಹೊಮ್ಮಲಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಶಿಗ್ಗಾವಿಯಲ್ಲಿ ಶನಿವಾರ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉತ್ಕೃಷ್ಟವಾದ ಚಿಂತನೆ, ಕನ್ನಡ ಹಾಗೂ ಕನ್ನಡ ನಾಡನ್ನು ಇನ್ನಷ್ಟು ಗಟ್ಟಿಗೊಳಿಸುವಂತಹ, ಕನ್ನಡ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ, ಕನ್ನಡಿಗರ ಆಶೋತ್ತರಗಳನ್ನು ಈಡೇರಿಸುವ, ಕನ್ನಡಿಗರಲ್ಲಿ ಅಭಿಮಾನ ಹಾಗೂ ಸ್ವಾಭಿಮಾನ ಮೂಡಿಸುವ ಕಾರ್ಯ ಕ್ರಮ ಇದಾಗಿದೆ. ಕನ್ನಡ ನಾಡಿನ ಇವತ್ತಿನ ಸವಾಲುಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಈ ಸಾಹಿತ್ಯ ಸಮ್ಮೇಳನದಲ್ಲಿ ಆಗಲಿದೆ. ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಲಿದೆ. ಹೀಗಾಗಿ, ಎಲ್ಲರೂ ಭಾಗವಹಿಸಬೇಕು ಎಂದು ಕೋರಿದರು.
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಜಿಲ್ಲೆಯಲ್ಲಿ ಸಮ್ಮೇಳನ ನಡೆಸಲು ಹತ್ತಾರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೆವು. ಯೋಗಾಯೋಗ ಈಗ ಕನ್ನಡ ತೇರು ಎಳೆಯುವ ಅವಕಾಶ ಸಿಕ್ಕಿದೆ. ಪ್ರತಿಯೊಬ್ಬರಲ್ಲೂ ಸಹ ಸಾಹಿತ್ಯ ಇದೆ. ನಮ್ಮ ಜೀವನದ ಅನುಭವವೇ ನಮ್ಮ ಸಾಹಿತ್ಯ. ಸಮ್ಮೇಳನ ಎಲ್ಲಾ ಕನ್ನಡಿಗರ ಕಾರ್ಯಕ್ರಮ. ಇದು ಕನ್ನಡದ ಕಂಪನ್ನು ಪಸರಿಸುವ ಸುಸಂದರ್ಭ. ಕಾರಣ ಸಮ್ಮೇಳನದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಸಾಪ ರಾಜ್ಯಾಧ್ಯಕÒ ಮಹೇಶ ಜೋಶಿ, ಕಸಾಪ ಜಿಲ್ಲಾಧ್ಯಕÒ ಲಿಂಗಯ್ಯ ಹಿರೇಮಠ, ಜಿಲ್ಲಾ ಧಿಕಾರಿ ರಘುನಂದನ್ ಮೂರ್ತಿ, ಜಿ.ಪಂ. ಸಿಇಒ ಮಹ್ಮದ್ ರೋಶನ್, ಕಸಾಪ ಪದಾ ಧಿಕಾರಿಗಳು ಇದ್ದರು.
ಕನ್ನಡಿಗರ ಕಲ್ಯಾಣದ ಸಂಕಲ್ಪ
ಕನ್ನಡ ಬೆಳೆಯುವಂತಹ ಪರ್ವ ಕಾಲ ಇದಾಗಿದೆ. ಕನ್ನಡ ನಾಡಿನಲ್ಲಿ ಎಲ್ಲವೂ ಇದೆ. ಗಂಧದ ಗುಡಿ, ನಿಸರ್ಗ ಸಂಪತ್ತು, ಚಿನ್ನದ ನಾಡು, ಸಾಹಿತ್ಯದ ಬೀಡು, ರಾಜ- ಮಹಾರಾಜರ ಗತವೈಭವ ಹೊಂದಿರುವ ನಮ್ಮದು ಶ್ರೀಮಂತ ನಾಡಾಗಿದೆ. ಎಲ್ಲೆಡೆಯೂ ಕನ್ನಡದ ಕಂಪು ಹರಿಸಬೇಕು. ಕನ್ನಡಿಗರ ಅಭಿವೃದ್ಧಿ ಆಗಬೇಕು. ಅವರಿಗೆ ಶಿಕ್ಷಣ, ಉದ್ಯೋಗ ಸೇರಿ ಎಲ್ಲವೂ ಒಳ್ಳೆಯ ರೀತಿಯಲ್ಲಿ ಆಗಬೇಕು ಎಂಬುದು ನಮ್ಮ ಸಂಕಲ್ಪವಾಗಿದೆ ಎಂದು ಸಿಎಂ ಹೇಳಿದರು.
ಕನ್ನಡ ಭಾಷೆ ಇಡೀ ದೇಶದಲ್ಲಿ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಶತಮಾನಗಳ ಕಾಲ ಏನೆಲ್ಲ ಬದಲಾವಣೆ ಆದರೂ ಕನ್ನಡ ಮಾತ್ರ ಗಟ್ಟಿಯಾಗಿ ಹಾಗೇ ಉಳಿದುಕೊಂಡಿದೆ. ಯಾರೂ ಅಲ್ಲಾಡಿಸಲು ಸಾಧ್ಯವಾಗಿಲ್ಲ. ಕನ್ನಡ ಭಾಷೆ, ನುಡಿ, ಕನ್ನಡಿಗರನ್ನು ಯಾರೂ ಸಹ ಏನೂ ಮಾಡಲು ಸಾಧ್ಯವಿಲ್ಲ.
-ಬಸವರಾಜ ಬೊಮ್ಮಾಯಿ,
ಮುಖ್ಯಮಂತ್ರಿ