Advertisement

ಜಾತ್ರಾ ಮಹೋತ್ಸವಕ್ಕೆ ಮಣ್ಣಿನ ಮಡಕೆಯ ಸೊಗಡು

04:27 PM Nov 16, 2017 | |

ಬೆಳ್ತಂಗಡಿ: ದೀಪಗಳ ಹಬ್ಬ ಲಕ್ಷದೀಪೋತ್ಸವ ಸಂಭ್ರಮಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಾಕ್ಷಿಯಾಗಿದೆ. ವೈವಿಧ್ಯಮಯ ಸಾಲು ಸಾಲು ಅಂಗಡಿಗಳು ಜನರನ್ನು ಸೆಳೆಯುತ್ತಿವೆ. ಶ್ರೀಕ್ಷೇತ್ರದ ಅನೇಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಧರ್ಮಸ್ಥಳ ಗ್ರಾಮೋದ್ಯೋಗ ಬಳಗದ ವತಿಯಿಂದ ಅನೇಕ ರೀತಿಯ ಸಾಂಪ್ರದಾಯಿಕ ಅಂಗಡಿಗಳು ಈ ಬಾರಿಯ ಜನಾಕರ್ಷಣೆಯ ಕೇಂದ್ರಗಳಾಗಿವೆ. 

Advertisement

ವಿಶೇಷವಾಗಿ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಗಳು ಜನರಿಗೆ ಹಿಂದಿನ ಕಾಲದ ಸೊಗಡನ್ನು ನೆನಪಿಸುತ್ತಿವೆ. ಅಲ್ಯೂಮಿನಿಯಂ ಮತ್ತು ಸ್ಟೀಲ್‌ ಪಾತ್ರೆಗಳ ಈ ಕಾಲದಲ್ಲಿ ಮಣ್ಣಿನ ಮಡಕೆಗಳ ಈ ಮಳಿಗೆ ಲಕ್ಷದೀಪೋತ್ಸವಕ್ಕೆ ಮೆರಗು ತಂದಿದೆ.

ಯಾವುದೇ ರಾಸಾಯನಿಕ ಬೆರೆಸದೆ ತೊಡಗುವ ಈ ಮಡಕೆ ತಯಾರಿಕೆಯು ದೇಸೀಯ ಸಂಸ್ಕೃತಿ ನೆನಪಿಸುತ್ತದೆ. ಒಂದು ದಿನದಲ್ಲಿ ಸುಮಾರು 20 ಮಡಕೆ ಮಾಡಿ ನಾಲ್ಕು ದಿನಗಳ ಕಾಲ ಸುಡು ಬಿಸಿಲಿನಲ್ಲಿ ಇಟ್ಟು ತದನಂತರ ಕಟ್ಟಿಗೆಯಲ್ಲಿ ಇದನ್ನು ಸುಡಲಾಗುತ್ತದೆ. ಅದನ್ನು ಜಾತ್ರಾ ಮಹೋತ್ಸವಕ್ಕೆ ಮಾರಲು ಕೊಂಡೊಯ್ಯಲಾಗುತ್ತದೆ. ಬೇಸಗೆ ಕಾಲದಲ್ಲಿ ಮಡಕೆ ಹಾಗೂ ಇನ್ನಿತರ ಮಣ್ಣಿನ ಕಲಾಕೃತಿಗಳನ್ನು ಹೆಚ್ಚಾಗಿ ತಯಾರಿಸಲಾಗುತ್ತದೆ.

ಮಣ್ಣಿನಲ್ಲಿ ಮೂಡುವ ಇತರ ಸೌಂದರ್ಯ ಆಕೃತಿಗಳನ್ನು ಮನೆಯ ಅಲಂಕಾರದ ಸಲುವಾಗಿ ಜನರು ಹೆಚ್ಚಿನ ರೀತಿಯಲ್ಲಿ ಖರೀದಿಸುತ್ತಾರೆ. ಒಂದು ಮಡಕೆ ತಯಾರಿಸಲು 40ರಿಂದ 60 ರೂ. ವರೆಗೆ ವೆಚ್ಚ ತಗಲುತ್ತದೆ. ಗೃಹ ಉಪಯೋಗಕ್ಕೆ ಬೇಕಾಗುವ ಎಲ್ಲ ಪಾತ್ರೆ, ಸಾಮಗ್ರಿಗಳು ಮಣ್ಣಿನಲ್ಲಿ ತಯಾರಿಸುತ್ತಾರೆ. ಮಣ್ಣಿನ ಮಡಕೆಗಳಿಗೆ ರೂ. 80ರಿಂದ 100ರ ದರದಲ್ಲಿ ಮಾರಲಾಗುತ್ತದೆ ಎಂದು ಮೋಟಾ ಕುಂಬಾರ ತಿಳಿಸುತ್ತಾರೆ.

ದಿಡುಪೆಯಿಂದ ಮಣ್ಣು
ಮಣ್ಣಿನ ಮಡಕೆ ಮಾಡಲು ಬೇಕಾಗುವ ಜೇಡಿಮಣ್ಣನ್ನು ದಿಡುಪೆಯಿಂದ ತರಲಾಗುತ್ತದೆ. ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳಿನಲ್ಲಿ ಈ ಮಣ್ಣನ್ನು ಟೆಂಪೋ ಮೂಲಕ ತರಲಾಗುತ್ತದೆ. ಒಂದು ಲೋಡ್‌ ಮಣ್ಣಿಗೆ ಸುಮಾರು 18,000 ರೂ. ವೆಚ್ಚ ತಗಲುತ್ತದೆ. ಮಣ್ಣನ್ನು ಗದ್ದೆಯಿಂದ ತಂದು ಒಣಗಿಸಿ ಅನಂತರ ಪುಡಿಮಾಡಿ ಅದನ್ನು ಗಾಣಿಸುವ ಮೂಲಕ ಶುಚಿಗೊಳಿಸಲಾಗುತ್ತದೆ.

Advertisement

ಧರ್ಮಸ್ಥಳದ ಲಕ್ಷದೀಪಕ್ಕೆ ಮಣ್ಣಿನ ಮಡಕೆಯ ಮಳಿಗೆ ಹಾಕಲು ಕಾಯರ್ತಡ್ಕದಿಂದ ಬಂದಿದ್ದೇವೆ. ಕಳೆದ ಸುಮಾರು 39 ವರ್ಷಗಳಿಂದ ಇಲ್ಲಿಂದ ಮಣ್ಣಿನ ಮಡಕೆಯನ್ನು ತರಲಾಗುತ್ತಿದ್ದು, ಲಕ್ಷದೀಪೋತ್ಸವದಲ್ಲಿ ಪ್ರದರ್ಶನ , ಮಾರಾಟದ ಮಳಿಗೆ ತೆರೆಯಲಾಗುತ್ತಿದೆ.
 ಮೋಟಾ ಕುಂಬಾರ,
 ಮಡಕೆ ವ್ಯಾಪಾರಿ

 – ಅರ್ಚನಾ ಕಾನೋಜಿ

Advertisement

Udayavani is now on Telegram. Click here to join our channel and stay updated with the latest news.

Next