ಕೋಲ್ಕತಾ: ರಾಜಕೀಯ ಪಕ್ಷವೊಂದು ತನ್ನ ಹತ್ಯೆಗೆ ಯತ್ನಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.
ರಾಜಕೀಯ ಪಕ್ಷವೊಂದು ನನ್ನ ಹತ್ಯೆಗೆ ಸುಫಾರಿ(ಗುತ್ತಿಗೆ) ಕೊಟ್ಟಿತ್ತು. ನಾನು ಮನೆಗೆ ವಾಪಸ್ ತೆರಳುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನನ್ನ ಹತ್ಯೆಗೆ ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಗೆ ಮನೆಯನ್ನು ಬದಲಾಯಿಸುವಂತೆ ಹೇಳಿದ್ದರು. ಈ ಹಿಂದೆಯೂ ನನ್ನ ಕೊಲೆಗೆ ಸಂಚು ನಡೆದಿತ್ತು ಎಂದು ಆರೋಪಿಸಿದರು.
ಖಾಸಗಿ ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ಕೂಡಲೇ ಸರ್ಕಾರಿ ಬಂಗ್ಲೆಯನ್ನು ಬದಲಾಯಿಸುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಈ ಮಾಹಿತಿ ನಿಜವಾಗಿರುವುದಾಗಿ ಮಮತಾ ತಿಳಿಸಿದ್ದಾರೆ.
ನಾನು ಸಾವಿಗೆ ಹೆದರುವುದಿಲ್ಲ ಎಂದು ಹೇಳಿರುವ ಮಮತಾ ಬ್ಯಾನರ್ಜಿ ಆ ರಾಜಕೀಯ ಪಕ್ಷ ಯಾವುದು? ಯಾರು ಎಂಬ ಗುಟ್ಟನ್ನು ಬಹಿರಂಗಪಡಿಸಿಲ್ಲ. ನಾನು 2 ಕೋಟಿ ರೂಪಾಯಿ ಹಣವನ್ನು ಕನ್ಯಾಶ್ರೀ ಯೋಜನೆಗಾಗಿ ವಿನಿಯೋಗಿಸಿದ್ದೇನೆ. ಆದರೆ ವಿರೋಧ ಪಕ್ಷ ಅದರ ಲಾಭ ಪಡೆಯಲು ಹವಣಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್, ಬಿಜೆಪಿ ಹಾಗೂ ಸಿಪಿಐ(ಎಂ) ಪಕ್ಷಗಳು ರೈತರ ಆತ್ಮಹತ್ಯೆ, ಕೋಮುಗಲಭೆ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿದರು.