ಬೆಂಗಳೂರು: ಮುಖ್ಯಮಂತ್ರಿಗಳ ಕನಸಿನ ಯೋಜನೆ “ಬಿಬಿಎಂಪಿ ರೋಶಿನಿ’ ಅನುಷ್ಠಾನಗೊಳಿಸಲು ಮೈಕ್ರೋಸಾಫ್ಟ್ ಸಂಸ್ಥೆಗೆ ಬಿಬಿಎಂಪಿ ಶಾಲಾ-ಕಾಲೇಜು ಗಳ ಮಾಹಿತಿ ನೀಡದೆ ಅಧಿಕಾರಿಗಳು ಸತಾಯಿ ಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪಾಲಿಕೆಯ ಶಾಲಾ-ಕಾಲೇಜುಗಳನ್ನು 500 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ಗೊಳಿಸಲು ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳು ಮುಂದಾಗಿವೆ. ಆ ಹಿನ್ನೆಲೆಯಲ್ಲಿ ಶಾಲಾ ಕಟ್ಟಡಗಳು ಹಾಗೂ ಮೈದಾನಗಳ ಸರ್ವೆ ಸಂಖ್ಯೆ ಹಾಗೂ ವಿಸ್ತೀ ರ್ಣದ ಮಾಹಿತಿ ಕೋರಿ ಎರಡು ತಿಂಗಳು ಕಳೆದರೂ, ಈವರೆಗೆ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿಲ್ಲ.
ಬಡ ಮಕ್ಕಳಿಗೆ 21ನೇ ಶತಮಾನದ ಶಿಕ್ಷಣ ಕಲಿಕಾ ವಿಧಾನಗಳನ್ನು ಕಲಿಸುವ ರೋಶಿನಿ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರು, ಯೋಜನೆ ಅನುಷ್ಠಾನಕ್ಕೆ ಸರ್ಕಾರ ಹಾಗೂ ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವ ಅಭಯ ಹಸ್ತ ನೀಡಿದ್ದರು. ಆದರೆ, ಪಾಲಿಕೆಯ ಶಾಲಾ-ಕಾಲೇಜು ಕಟ್ಟಡಗಳ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಪರಿಣಾಮ, ಯೋಜನೆಗೆ ಹಿನ್ನಡೆಯಾದಂತಾಗಿದೆ.
ಪಾಲಿಕೆಯ ಶಾಲೆಗಳಿಗೆ ಹೊಸ ರೂಪ ನೀಡುವ ಉತ್ಸಾಹದಲ್ಲಿದ್ದ ಸಂಸ್ಥೆಗಳಿಗೆ ಪಾಲಿಕೆ ಅಧಿಕಾರಿಗಳ ನಡೆ ಬೇಸರವನ್ನುಂಟು ಮಾಡಿದ್ದು, ಪರಿಣಾಮ ಶಾಲಾ- ಕಾಲೇಜುಗಳ ಕಟ್ಟಡ, ಮೈದಾನಗಳ ವಿಸ್ತೀರ್ಣದ ಮಾಹಿತಿ ಕೊಡಿಸುವಂತೆ ಮೇಯರ್ ಹಾಗೂ ಬಿಬಿಎಂಪಿ ಆಯುಕ್ತರಿಗೂ ಪತ್ರ ಬರೆದು ಒಂದೂವರೆ ತಿಂಗಳು ಕಳೆದರೂ ಮಾಹಿತಿ ಮಾತ್ರ ಲಭ್ಯವಾಗಿಲ್ಲ.
ಮಾಹಿತಿಯಿಲ್ಲದೆ ಯೋಜನೆ ಅನುಷ್ಠಾನವಿಲ್ಲ!: ರೋಶಿನಿ ಯೋಜನೆಯಡಿಯಲ್ಲಿ ನಿರ್ಮಿಸುವ ಪ್ರತಿಯೊಂದು ಶಾಲಾ-ಕಾಲೇಜು ಕಟ್ಟಡಗಳು ಉತ್ತಮ ಸ್ಥಿತಿಯಲ್ಲಿರಬೇಕೆಂಬ ಉದ್ದೇಶದಿಂದ ಸಂಸ್ಥೆಗಳು ಮಾಹಿತಿ ಕೋರಿವೆ. ಅದರಂತೆ ಪಾಲಿಕೆಯಿಂದ ಟೋಟಲ್ ಸ್ಟೇಷನ್ ಸರ್ವೆ ಮಾಡಿ ವರದಿಯನ್ನು ಸಂಸ್ಥೆಗೆ ನೀಡಬೇಕು. ವರದಿ ಬಂದ ಬಳಿಕ ಸಂಸ್ಥೆಗಳು ಕಟ್ಟಡ ವಿನ್ಯಾಸವನ್ನು ಅಂತಿಮಗೊಳಿಸಿದ ನಂತರವೇ ಯೋಜನೆ ಅನುಷ್ಠಾನ ಆರಂಭವಾಗುತ್ತದೆ. ಆದರೆ, ಪಾಲಿಕೆಯ ಅಧಿಕಾರಿಗಳು ಟೋಟಲ್ ಸ್ಟೇಷನ್ ಸರ್ವೆಗೆ ಇನ್ನೂ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಹೊಸ ಕಟ್ಟಡ ಭಾಗ್ಯ: ಪಾಲಿಕೆಯ ಎಲ್ಲ ಶಾಲಾ ಕಾಲೇಜು ಗಳು ಒಂದೇ ವಿನ್ಯಾಸವನ್ನು ಹೊಂದಿರಬೇಕೆಂಬ ಉದ್ದೇಶದಿಂದ ಕಟ್ಟಡ ವಿನ್ಯಾಸ ರೂಪಿಸುತ್ತಿದ್ದಾರೆ. ಅದರಂತೆ ಪಾಲಿಕೆಯ ಶಾಲಾ-ಕಾಲೇಜುಗಳನ್ನು ಹಂತ ಹಂತವಾಗಿ ಮರು ನಿರ್ಮಾಣ ಮಾಡುವ ಮೂಲಕ ಹೊಸ ರೂಪ ನೀಡುವುದು ಸಂಸ್ಥೆಯ ಉದ್ದೇಶ ವಾಗಿದೆ. ಆದರೆ, ಕೇವಲ ಗಾಂಧಿನಗರ ಶಾಲೆಯ ಮಾಹಿತಿ ಮಾತ್ರ ಸಂಸ್ಥೆಗಳಿಗೆ ಲಭ್ಯವಾಗಿದೆ. ಆ ಹಿನ್ನೆಲೆಯಲ್ಲಿ ಗಾಂಧಿನಗರ ಶಾಲೆಯನ್ನು ಮಾತ್ರ ಅಭಿವೃದ್ಧಿಪಡಿಸಲು ಸಂಸ್ಥೆ ಸಿದ್ಧತೆ ನಡೆಸಿದೆ.
ಮೈದಾನದಲ್ಲಿ ಅಂಕಣಗಳ ನಿರ್ಮಾಣ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಮಕ್ಕಳಿಗೆ ಶಿಕ್ಷಣ ದೊರೆಯಬೇಕೆಂಬ ಉದ್ದೇಶ ಯೋಜನೆ ಹೊಂದಿದೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಶಾಲೆಯ ಮೈದಾನದಲ್ಲಿ ವಿವಿಧ ಕ್ರೀಡೆಗಳಿಗಾಗಿ ಅಂಕಣಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಅದರಂತೆ ಶಾಲೆಗಳ ಮೈದಾನದ ವಿಸ್ತೀರ್ಣಕ್ಕೆ ಅನುಗುಣವಾಗಿ ಯಾವ ಕ್ರೀಡೆಗಳ ಅಂಕಣ ನಿರ್ಮಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಆದರೆ, ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಯೋಜನೆಗೆ ಹಿನ್ನಡೆ ಯಾದಂತಾಗಿದೆ.
ಚೈನಾ ಜತೆಗೆ ಒಪ್ಪಂದ: ಬಿಬಿಎಂಪಿ ಶಾಲೆಗಳ ಸದೃಢತೆ ಹಾಗೂ ಕಟ್ಟಡ ವಿನ್ಯಾಸಕ್ಕಾಗಿ ಈಗಾಗಲೇ ಮೈಕ್ರೋಸಾಫ್ಟ್ ಎರಡು ಏಜೆನ್ಸಿಗಳನ್ನು ನೇಮಿಸಿಕೊಂಡಿದ್ದು, ಕಟ್ಟಡ ನಿರ್ಮಾಣ ಕುರಿತಂತೆ ಚೈನಾದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಅದರಂತೆ ಏಜೆನ್ಸಿಗಳು ನೀಡುವ ವರದಿಯನ್ನು ಆಧರಿಸಿ ಎಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಹಾಗೂ ಹಳೆಯ ಕಟ್ಟಡಗಳನ್ನು ನವೀಕರಣಗೊಳಿಸಬೇಕು ಎಂಬುದನ್ನು ಸಂಸ್ಥೆಗಳು ನಿರ್ಧರಿಸಲಿವೆ.
ಮೈಕ್ರೋಸಾಫ್ಟ್ ಹಾಗೂ ಟೆಕ್ ಅವಾಂತ್ ಗಾರ್ಡ್ ಸಂಸ್ಥೆಗಳು ಪಾಲಿಕೆಯ ಶಾಲಾ-ಕಾಲೇಜು ಸರ್ವೆ ಸಂಖ್ಯೆ ಹಾಗೂ ವಿಸ್ತೀರ್ಣ ಮಾಹಿತಿ ಕೋರಿದ್ದು, ಈಗಾಗಲೇ ಕಂದಾಯ ವಿಭಾಗದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದರಿಂದ ಸಂಸ್ಥೆಗಳಿಗೆ ನೀಡಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲಿಯೇ ವರದಿಯನ್ನು ಸಂಸ್ಥೆಗಳಿಗೆ ನೀಡಲಾಗುವುದು.
ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ವೆಂ. ಸುನೀಲ್‌ಕುಮಾರ್