Advertisement

ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಬೀಜಗಳ ರಾಶಿ

11:44 AM Jun 30, 2019 | Team Udayavani |

ಬ್ಯಾಡಗಿ: ತರಕಾರಿ ಬೀಜದ ಪಾಕೆಟ್‌ಗಳ ರಾಶಿ ಪಟ್ಟಣದ ಹೊರವಲಯದಲ್ಲಿ ಶನಿವಾರ ಪತ್ತೆಯಾಗಿವೆ. ನಕಲಿ ಬೀಜ ಮಾರಾಟ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರಬಹುದೇ ಎಂದು ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Advertisement

ರಾಮಗೊಂಡನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯ ಕೆರೆಯ ಏರಿ ಮೇಲೆ ಬೀಜದ ಪಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಬಿದ್ದಿವೆ. ಈ ಕುರಿತು ಖಚಿತ ಮಾಹಿತಿ ಪಡೆದ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಸದಸ್ಯರು ಪೊಲೀಸ್‌ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಹಾಗಲಕಾಯಿ, ಮುಳಗಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಎಲ್ಲ ರೀತಿಯ ತರಕಾರಿ ಹಾಗೂ ಹಣ್ಣಿನ ಬೀಜದ ಪಾಕೆಟ್‌ಗಳು ಸಿಕ್ಕಿದ್ದು, ಕೆಲ ಪಾಕೆಟ್‌ಗಳಲ್ಲಿ ಬೀಜಗಳನ್ನು ತುಂಬಲಾಗಿದೆ. ಇನ್ನೂ ಕೆಲವು ಖಾಲಿ ಪ್ಯಾಕೆಟ್‌ಗಳನ್ನು ಬಿಸಾಡಲಾಗಿದೆ. ಅಲ್ಲದೆ ಬೀಜ ತುಂಬಿದ್ದ ಗೋಣಿ ಚೀಲಗಳೂ ಪತ್ತೆಯಾಗಿವೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಗಂಗಣ್ಣ ಎಲಿ, ಪಟ್ಟಣದ ಆಜ್ಞಾತ ಸ್ಥಳವೊಂದರಲ್ಲಿ ಖಾಸಗಿ ಕಂಪನಿಯ ಪಾಕೆಟ್‌ಗಳು ರೀಫಿಲ್ಲಿಂಗ್‌ ಆಗುತ್ತಿದೆ. ಕಡಿಮೆ ದರಕ್ಕೆ ಬೀಜಗಳನ್ನು ಪೂರೈಸುವುದಾಗಿ ಹೇಳಿಕೊಳ್ಳುತ್ತ ಬೀದರ್‌, ವಿಜಯಪುರ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮಾರಾಟ ಜಾಲ ಬೇರು ಬಿಟ್ಟಿದೆ. ತಯಾರಿಸಿದ ದಿನಾಂಕ, ತೂಕ, ದರಗಳನ್ನು ಪಾಕೆಟ್ ಮೇಲೆ ಪಟ್ಟಣಲ್ಲಿಯೇ ಅಂಟಿಸಲಾಗುತ್ತಿದೆ. ಕೂಡಲೇ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ನಕಲಿ ಬೀಜ ಮಾರಾಟಗಾರರ ಜಾಲವೊಂದು ಪಟ್ಟಣದಲ್ಲಿ ಬೀಡು ಬಿಟ್ಟಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ರಾಜ್ಯ ರೈತ ಸಂಘ ಈ ಹಿಂದೆಯೇ ಮೌಖೀಕ ದೂರು ಸಲ್ಲಿಸಿತ್ತು. ಅದಾಗ್ಯೂ ಅನಾಮಧೇಯ ಕಂಪನಿ ಹೆಸರಿನೊಂದಿಗೆ ರಾಜ್ಯದೆಲ್ಲೆಡೆ ಬೀಜ ಮಾರಾಟ ಜಾಲ ಅದರಲ್ಲಿ ತೊಡಗಿದ್ದು, ಅಮಾಯಕ ರೈತರಿಗೆ ಮೋಸವೆಸಗುತ್ತಿದೆ. ಇದಕ್ಕೆ ಪಟ್ಟಣದಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರು ನಕಲಿ ಬೀಜ ಮಾರಾಟದ ಜಾಲದೊಂದಿಗೆ ನಂಟು ಹೊಂದಿದ್ದಾಗಿ ಆರೋಪಿಸಿದ ಅವರು, ಅದಕ್ಕೆ ಬೇಕಾದ ಎಲ್ಲ ಸಾಕ್ಷಾಧಾರಗಳು ದೊರಕಿದ್ದು, ಪೊಲೀಸ್‌ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next