ನಟರಾಜ ಹಳೆಬೀಡು ಸುಮಾರು 18 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಕೆಲಸದ ನಿಮಿತ್ತ ಹೋದ ಅವರು ಅಲ್ಲೇ ನೆಲೆಕಂಡುಕೊಂಡಿದ್ದಾರೆ. ಅಮೆರಿಕಾದಲ್ಲಿದ್ದುಕೊಂಡು ಸಾಕಷ್ಟು ಕನ್ನಡದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಅವರಿಗೆ ಕನ್ನಡದಲ್ಲಿ ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ ಅನೇಕ ವರ್ಷಗಳಿಂದ ಇತ್ತಂತೆ. ಗಾಂಧಿನಗರದಲ್ಲಿ ತಯಾರಾದ ಚಿತ್ರಗಳು ಅಮೆರಿಕಾದಲ್ಲಿ ಬಿಡುಗಡೆಯಾಗಿ ಹಿಟ್ ಆಗಿವೆ. ಅದೇ ರೀತಿ ಅಮೆರಿಕಾದಲ್ಲಿದ್ದುಕೊಂಡು ಸಿನಿಮಾ ಮಾಡಿ ಇಲ್ಲಿ ಬಿಡುಗಡೆ ಮಾಡಬೇಕೆಂಬ ಆಸೆಯಿಂದ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದರಂತೆ. ಇವರ ಆಸೆಗೆ ಸಾಥ್ ನೀಡಿದವರು ಸಂದೀಪ್ ಕುಮಾರ್. ಇವರು ಕೂಡಾ ಅಮೆರಿಕಾದಲ್ಲಿ ಕಂಪೆನಿ ಹೊಂದಿದವರು. ಈಗ ಈ ಇಬ್ಬರು ಸೇರಿಕೊಂಡು “ರತ್ನಮಂಜರಿ’ ಎಂಬ ಸಿನಿಮಾ
ಮಾಡಲು ಮುಂದಾಗಿದ್ದಾರೆ.
“ರತ್ನಮಂಜರಿ’ ಚಿತ್ರವನ್ನು ಪ್ರಸಿದ್ಧ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಒನ್ ಲೈನ್ ಕಥೆ ಒದಗಿಸಿದ್ದು
ನಿರ್ಮಾಪಕರೇ. ಅದು ಅಮೆರಿಕಾದಲ್ಲೇ ನಡೆದ ಕಥೆ. ಕೆಲವು ವರ್ಷಗಳ ಹಿಂದೆ ಅಮೆರಿಕಾದಲ್ಲೊಂದು ಕೊಲೆಯಾಗಿತ್ತು. ಭಾರತಕ್ಕೆ ಸೇರಿದ ವ್ಯಕ್ತಿಯ ಕೊಲೆಯದು. ಆ ಕೊಲೆಯನ್ನಿಟ್ಟುಕೊಂಡು ಅದಕ್ಕೆ ಸಿನಿಮ್ಯಾಟಿಕ್ ಟಚ್ ಕೊಟ್ಟು ಮರ್ಡರ್ ಮಿಸ್ಟರಿ ಸಿನಿಮಾ
ಮಾಡಲು ಚಿತ್ರತಂಡ ಮುಂದಾಗಿದೆ. ಚಿತ್ರದಲ್ಲಿ ಅಮೆರಿಕಾದ ಕಲಾವಿದರೂ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ದೇಶಿಸುತ್ತಿರುವ ಪ್ರಸಿದ್‌ಟಛಿ ಅವರಿಗೆ ಇದು ಮೊದಲ ಸಿನಿಮಾ.
ಅವರು ಕೂಡಾ ಐಟಿ ಕಂಪೆನಿಯಲ್ಲಿದ್ದವರು. ಈಗ ಸಿನಿಮಾ ಮಾಡಲು ಬಂದಿದ್ದಾರೆ. “ಇದೊಂದು ಮರ್ಡರ್ ಮಿಸ್ಟರಿ. ನಿರ್ಮಾಪಕರು ಕೊಟ್ಟ ಒನ್‌ಲೈನ್ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಚಿತ್ರದ ಮೊದಲರ್ಧ ಅಮೆರಿಕಾದ ಕಲಾವಿದರೇ ಇರುತ್ತಾರೆ ಮತ್ತು ಅವರ ಪಾತ್ರ ಅಲ್ಲಿಗೇ ಮುಗಿಯುತ್ತದೆ. ಆ ನಂತರ ಕಥೆ ಮಡಿಕೇರಿಯಲ್ಲಿ ನಡೆಯುತ್ತದೆ. ಮೊದಲ ಚಿತ್ರವಾದ್ದರಿಂದ ಪಕ್ಕಾ ಕನ್ನಡದ ಟೈಟಲ್ ಇಡಬೇಕೆಂಬ ನಿರ್ಮಾಪಕರ ಆಸೆಯಂತೆ “ರತ್ನಮಂಜರಿ’ ಎಂದಿಟ್ಟಿದ್ದೇವೆ. ಚಿತ್ರದ ಇಬ್ಬರೂ ನಿರ್ಮಾಪಕರು ಕೂಡಾ ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವುದರಿಂದ ನನ್ನ ಜವಾಬ್ದಾರಿ ಕೂಡಾ ಹೆಚ್ಚಿದೆ’ ಎಂದರು. ಈ ಚಿತ್ರದಲ್ಲಿ ರಾಜ್‌ಚರಣ್ ನಾಯಕ. ಇವರಿಗಿದು ಮೊದಲ ಸಿನಿಮಾ. ಆಡಿಷನ್ ಮೂಲಕ ಆಯ್ಕೆಯಾದರಂತೆ. ಅಖೀಲ ಪ್ರಕಾಶ್ ನಾಯಕಿ. ಚಿತ್ರಕ್ಕೆ ಹರ್ಷವರ್ಧನ್ ಸಂಗೀತವಿದೆ. ಕೆ. ಕಲ್ಯಾಣ್ ಸಾಹಿತ್ಯವಿದ್ದು, ಇಲ್ಲಿ ಅವರು ಹಾಡೊಂದರಲ್ಲಿ “ಕಾಳಿದಾಸಳ’ ಎಂಬ ಪದ ಬಳಸಿದ್ದಾರಂತೆ.
“ಕಾಳಿದಾಸ’ ಪದ ಓಕೆ “ಕಾಳಿದಾಸಳು’ ಎನ್ನುವುದು ಸರಿಯಾ ಎಂದು ನಿರ್ಮಾಪಕರು ಸಾಕಷ್ಟು ಚರ್ಚೆ ಮಾಡಿ ಕೊನೆಗೆ ಒಪ್ಪಿಕೊಂಡಿದ್ದಾಗಿ ಹೇಳಿದರು ಕಲ್ಯಾಣ್. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ನಟ ವಸಿಷ್ಠ ಸಿಂಹ ಹಾಗೂ ಶಾಸಕ ವಿಶ್ವನಾಥ್ ಹಾಜರಿದ್ದರು.
ಸಾರ್ಥಕ್ ರೈ