Advertisement

ಕಾಲು ಸ್ವಾಧೀನ ಕಳೆದುಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು

11:06 AM Feb 08, 2018 | |

ಸ್ಟೇಟ್‌ಬ್ಯಾಂಕ್‌ : ಸ್ವಚ್ಛತಾ ಕಾರ್ಯಕ್ರಮದೊಂದಿಗೆ ಕಾಲು ಸ್ವಾಧೀನ ಕಳೆದುಕೊಂಡು ರಸ್ತೆಯಲ್ಲಿ ನರಳುತ್ತಿದ್ದ ವ್ಯಕ್ತಿಯನ್ನು ಆಸ್ಪತ್ತೆಗೆ ಸೇರಿಸುವ ಮೂಲಕ ಮಂಗಳೂರು ಯುವ ಬ್ರಿಗೇಡ್‌ ಮಾನವೀಯ ಕಾಳಜಿ ಪ್ರದರ್ಶಿಸಿದೆ.

Advertisement

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಸಂಕಲ್ಪದಂತೆ ಪ್ರತೀ ರವಿವಾರ ಈ ತಂಡ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಅದರಂತೆ ಕಳೆದ ರವಿವಾರ ಸ್ಟೇಟ್‌ ಬ್ಯಾಂಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಲ್ಲಿ ವ್ಯಕ್ತಿಯೋರ್ವ ನಡೆಯಲಾರದೆ ನರಳುತ್ತಿರುವುದನ್ನು ತಂಡ ಗಮನಿಸಿತು.

ಆ ವ್ಯಕ್ತಿಗೆ ಏಳಲು ಸಾಧ್ಯವಾಗದ್ದರಿಂದ ಮಲಮೂತ್ರವನ್ನೂ ಅಲ್ಲೇ ಪೂರೈಸಿಕೊಳ್ಳುತ್ತಿದ್ದರು. ಇದನ್ನು ಕಂಡ ತಂಡವು, ಅವರನ್ನು ಮಾತನಾಡಿಸಿದಾಗ ಮೈಸೂರಿನ ಶ್ರೀನಿವಾಸ್‌ ಎಂಬುದು ತಿಳಿಯಿತು. ಯಾವುದೋ ಸಮಸ್ಯೆಯಿಂದ ಮನೆ ಬಿಟ್ಟು ಬಂದು ಮಂಗಳೂರಿನಲ್ಲಿದ್ದರು. ಇತ್ತೀಚೆಗೆ ಸರ್ಕಲ್‌ ಬಳಿ ಮಲಗಿದ್ದಾಗ ಲಾರಿಯೊಂದು ಅವರ ಕಾಲಿನ ಮೇಲೆ ಹರಿದು ಹೋದ ಪರಿಣಾಮ ಸ್ವಾಧೀನ ಕಳೆದುಕೊಂಡು ಸ್ನಾನ-ಊಟವಿಲ್ಲದೆ ನರಳುತ್ತಿದ್ದರು.

ಬಳಿಕ ತಂಡದ ತಿಲಕ್‌ ಶಿಶಿಲ, ಮನು ಭಕ್ತ, ದಯಾ ಆಕಾಶ್‌, ವಿಕ್ರಮ್‌ ಮಂಗಳೂರು, ಸುಜಿತ್‌ ಕೋಟೆಕಾರ್‌ ಮತ್ತಿತರರು, ಆತನಿಗೆ ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ, ಚಿಕಿತ್ಸೆಗಾಗಿ ಸರಕಾರಿ ವೆನ್‌ ಲಾಕ್‌ ಆಸ್ಪತ್ರೆಗೆ ದಾಖಲಿಸಿದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. 

ಸ್ವಚ್ಛತೆಗೆ ಪ್ರಶಂಸೆ
ನಿತ್ಯವೂ ರಸ್ತೆಯಲ್ಲಿ ಬಿದ್ದಿರುವ ಮಣ್ಣು, ಮರಳನ್ನು ತೆಗೆದು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದೆ. ಕಳೆದ ವಾರ ಮಹಾನಗರ ಪಾಲಿಕೆ ಮುಂಭಾಗದ ಸರ್ಕಲ್‌ ಬಳಿ ರಸ್ತೆಯಲ್ಲೇ ಮರಳು ಬಿದ್ದಿತ್ತು. ಇದರಿಂದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗಿ ಬೀಳು ಅಪಾಯದ ಬಗೆ ಸ್ಥಳೀಯರೊಬ್ಬರು ಯುವ ಬ್ರಿಗೇಡ್‌ಗೆ ತಿಳಿಸಿದ್ದರು. ತತ್‌ಕ್ಷಣ ಕಾರ್ಯ ಪ್ರವೃತ್ತವಾದ ತಂಡ, ಮರಳನ್ನು ತೆಗೆದು ಶುಚಿಗೊಳಿಸಿತು. ಸರ್ಕಿಟ್  ಹೌಸ್‌ ಬಳಿಯೂ ಎರಡು ದಿನಗಳ ಹಿಂದೆ ಲಾರಿಯಿಂದ ಲೀಕ್‌ ಆಗಿ ಬಿದ್ದ ಆಯಿಲ್‌ ಮೇಲೆ ಮಣ್ಣು ಮತ್ತು ಮರಳನ್ನು ರಾಶಿ ಹಾಕಿ, ಪೊಲೀಸರು ಬ್ಯಾರಿಕೇಡ್‌ ಇರಿಸಿದ್ದರು. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವುದನ್ನು ಗಮನಿಸಿದ್ದರು. ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ತಂಡವೇ ಶುಚಿಗೊಳಿಸಿತು.

Advertisement

ಆಶ್ರಯ ಕಲ್ಪಿಸಲು ವ್ಯವಸ್ಥೆ 
ಶ್ರೀನಿವಾಸ ಅವರು ಪೂರ್ಣವಾಗಿ ಗುಣಮುಖನಾದ ಬಳಿಕ ನಗರದ ಯಾವುದಾದರೂ ಆಶ್ರಮದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ತಂಡ ಯೋಚಿಸುತ್ತಿದೆ. ಉತ್ತಮ ಕೆಲಸ ಮಾಡಿದ ನಂತರ ಸಿಗುವ ಆತ್ಮ ಸಂತೃಪ್ತಿ ಇನ್ನಾವುದರಿಂದಲೂ ಸಿಗದು. ಆತನಿಗೆ ವಸತಿ ಕಲ್ಪಿಸಲೂ ಚಿಂತಿಸಲಾಗಿದೆ ಎನ್ನುತ್ತಾರೆ ತಂಡದ ತಿಲಕ್‌ ಶಿಶಿಲ.

ಸರ್ಕಲ್‌ಗೆ ಹೊಸರೂಪ
ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ನಲ್ಲೇ ಶ್ರೀನಿವಾಸ ಮಲಮೂತ್ರವನ್ನೂ ಮಾಡಿದ್ದರಿಂದ ಪರಿಸರ ಕಲುಷಿತವಾಗಿತ್ತು. ತಂಡವು ಸರ್ಕಲ್‌ ನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಹೊಸ ರೂಪ ನೀಡಿದೆ. 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next