Advertisement

ಸಿಗರೇಟ್‌ ತಂದು ಕೊಡದ ವ್ಯಕ್ತಿ ಎದೆಗೇ ಚೂರಿ ಇರಿತ

11:21 AM Oct 10, 2017 | Team Udayavani |

ಬೆಂಗಳೂರು: ಮದ್ಯ ಸೇವಿಸುವ ವೇಳೆ ಸಿಗರೇಟ್‌ ತಂದು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲ್ಲಲು ಯತ್ನಿಸಿದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಅರೇಹಳ್ಳಿ ನಿವಾಸಿ ಅಹ್ಮದ್‌ ಜಾನ್‌ (52) ಹಲ್ಲೆಗೊಳಗಾದ ವ್ಯಕ್ತಿ. ಗಾಯಗೊಂಡಿರುವ ಜಾನ್‌, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ಯದಂಗಡಿಯಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್‌ಗೆ ಹೋಗಿದ್ದ ಜಾನ್‌,  ಮದ್ಯ ಸೇವಿಸುವಾಗ ಪಕ್ಕದಲ್ಲಿದ್ದ ಅಪರಿಚಿತರು ಸಿಗರೇಟ್‌ ತಂದುಕೊಡುವಂತೆ ಹೇಳಿದ್ದಾರೆ. ಇದಕ್ಕೆ ಆತ ಆಕ್ಷೇಪ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ. ಗಾಯಗೊಂಡು ಬಾರ್‌ ಮುಂದೆ ನರಳುತ್ತಿದ್ದ ಅಹ್ಮದ್‌ ಜಾನ್‌ನನ್ನು, ಯುವ ಬ್ರಿಗೇಡ್‌ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ತಮ್ಮ ಕಾರಿನಲ್ಲೇ ಕರೆದೊಯ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

ಸಿನಿಮಾ ನೋಡಿ ಬರುವಾಗ ನಡೆದ ಘಟನೆ: ಇಟ್ಟುಮಡುವಿನಲ್ಲಿ ವಾಸವಿರುವ ಅಹ್ಮದ್‌ ಜಾನ್‌ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು, ಭಾನುವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಪತ್ನಿಯೊಂದಿಗೆ ದರ್ಶನ್‌ ಅಭಿಯನದ “ತಾರಕ್‌’ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ನೋಡಿಕೊಂಡು ಮನೆಗೆ ಹೋಗುವಾಗ ಪತ್ನಿ ಬಳಿ 100 ರೂ. ಪಡೆದ ಜಾನ್‌, ಉತ್ತರಹಳ್ಳಿಯ ಪೆಟ್ರೋಲ್‌ ಬಂಕ್‌ನಿಂದ ಸ್ವಲ್ಪ ದೂರದಲ್ಲಿರುವ ಬಾಲಾಜಿ ಬಾರ್‌ನಲ್ಲಿ ಮದ್ಯ ಸೇವಿಸಲು ಹೋಗಿದ್ದರು.

ಬಾರ್‌ನ ಕೌಂಟರ್‌ನಲ್ಲಿ ಮದ್ಯ ಸೇವಿಸುವಾಗ ಅಲ್ಲೇ ಇದ್ದ ಇಬ್ಬರು ಅಪರಿಚಿತರು, ಜಾನ್‌ಗೆ ಸಿಗರೇಟ್‌ ತರುವಂತೆ ಸೂಚಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಾನ್‌, “ನಾನೇಕೆ ನಿಮಗೆ ಸಿಗರೇಟ್‌ ತಂದುಕೊಡಬೇಕು’ ಎಂದು ಪ್ರಶ್ನಿಸಿದ್ದಾರೆ. ಇಷ್ಟು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಜಾನ್‌ ಅಪರಿಚಿತರ ಮೇಲೆ ಕೈ ಮಾಡಿದ್ದಾರೆ.

Advertisement

ಇದರಿಂದ ಆಕ್ರೋಶಗೊಂಡ ಆರೋಪಿಗಳು, ಜಾನ್‌ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಸಿಸಿಟಿವಿಯಲ್ಲಿ ಆರೋಪಿಗಳ ಚಹರೆ ಪತ್ತೆಯಾಗಿದೆ. ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ವಿವರಿಸಿದರು.

ನಿಂತು ತಮಾಷೆ ನೋಡುತ್ತಿದ್ದರು: ತನ್ನ ಕಣ್ಣ ಮುಂದೆಯೇ ಪತಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿಯುವುದನ್ನು ಕಂಡ ಅಹ್ಮದ್‌ ಜಾನ್‌ ಪತ್ನಿ ಕೂಡಲೇ ಪತಿಯ ನೆರವಿಗೆ ಬಂದಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ ಪತಿಯನ್ನು ಆಸ್ಪತ್ರೆಗೆ ಕರೆಯೊಯ್ಯಲು ನೆರವಾಗುವಂತೆ ಅಲ್ಲಿ ನೆರೆದಿದ್ದವರನ್ನು ಅಂಗಲಾಚಿದ್ದಾರೆ. ಆದರೆ ಅಲ್ಲಿದ್ದವರ್ಯಾರೂ ಅವರ ನೆರವಿಗೆ ಹೋಗಿಲ್ಲ. ಬದಲಿಗೆ ಸುತ್ತ ನಿಂತು ತಮಾಷೆ ನೋಡುವ ಮೂಲಕ ಅಮಾನವೀಯರಂತೆ ವರ್ತಿಸಿದ್ದಾರೆ.

ಮಾನವೀಯತೆ ಮೆರೆದ ಸೂಲಿಬೆಲೆ: ರಕ್ತದ ಮಡುವಲ್ಲಿ ಬಿದ್ದಿದ್ದ ಅಹ್ಮದ್‌ ಜಾನ್‌ನನ್ನು ರಕ್ಷಿಸಲು ಪತ್ನಿ ಬೇಡಿಕೊಂಡರೂ ಲ್ಲಿದ್ದವರ್ಯಾರೂ ನೆರವಿಗೆ ಬಂದಿಲ್ಲ. ಇದೇ ವೇಳೆ ಘಟನೆ ನಡೆದ ಸ್ಥಳದ ಮಾರ್ಗದಲ್ಲಿ ಹೋಗುತ್ತಿದ್ದ ಯುವ ಬ್ರಿಗೇಡ್‌ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ, ಸಾರ್ವಜನಿಕರು ಗುಂಪು ಸೇರಿರುವುದನ್ನು ಕಂಡು, ಕಾರು ನಿಲ್ಲಿಸಿ ವಿಚಾರಿಸಿದ್ದಾರೆ.

ಬಳಿಕ ಘಟನೆ ಬಗ್ಗೆ ಮಾಹಿತಿ ಪಡೆದು, ಗಾಯಾಳು ಜಾನ್‌ ಮತ್ತು ಪತ್ನಿಯನ್ನು ತಮ್ಮ ಕಾರಿನಲ್ಲಿ ಕಾರಿನಲ್ಲಿ ಕೂರಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಂತೆ ತಮ್ಮ ಚಾಲಕನಿಗೆ ಸೂಚಿಸಿದ್ದಾರೆ. ನಂತರ ಸ್ನೇಹಿತರ ಬೈಕ್‌ನಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸೂಲಿಬೆಲೆ, ವೈದ್ಯರ ಸಲಹೆ ಮೇರೆಗೆ ಗಾಯಾಳು ಅಹ್ಮದ್‌ ಜಾನ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಕೂಡ ನೆರವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next