Advertisement

ಸ್ವಂತ ಕೊಳವೆ ಬಾವಿಯಿಂದ ಗ್ರಾಮಸ್ಥರ ದಾಹ ತೀರಿಸುವ ಜಲದಾತ 

11:10 AM Oct 15, 2018 | Team Udayavani |

ಬೆಳಂದೂರು : ಬಯಸಿ ಬಂದವರಿಗೆಲ್ಲ ನೀರು ನೀಡುವ ಜಲದಾತರೊಬ್ಬರಿದ್ದಾರೆ. ಕಾಯಿಮಣ ಗ್ರಾಮದ ಸುಂದರ ಪೂಜಾರಿ ಒಟ್ಟೆಂಡ ಇಂಥ ವಿಶಿಷ್ಟ ಸೇವಕ. ತಮ್ಮ ಸ್ವಂತ ಕೊಳವೆ ಬಾವಿಯಿಂದ ಅವರು ನೀರು ಕೊಡುತ್ತಿದ್ದಾರೆ. ಬೆಳಂದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಒಟ್ಟೆಂಡ ಪ್ರದೇಶದಲ್ಲಿ ಗ್ರಾ.ಪಂ.ನ ಕುಡಿಯುವ ನೀರಿನ ಯೋಜನೆಯ ಕೊಳವೆ ಮಾತ್ರ ಅಳವಡಿಸಲಾಗಿದ್ದು, ನೀರಿನ ಸಂಪರ್ಕ ಒದಗಿಸಲಾಗಿಲ್ಲ. ಇಲ್ಲಿನ ಮನೆಗಳ ಜಲಮೂಲಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾದಾಗ ಬಳಸಿಕೊಳ್ಳಲೆಂದು ಸುಂದರ ಪೂಜಾರಿ ಅವರು ತಮ್ಮ ಕೊಳವೆ ಬಾವಿಯ ಸಮೀಪ ನಳ್ಳಿಯ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿಂದ ಗ್ರಾಮಸ್ಥರು ಯಥೇತ್ಛ ನೀರು ಪಡೆದುಕೊಳ್ಳಬಹುದು. ಪಕ್ಕದ ಕೃಷಿ ಭೂಮಿಗಳಿಗೂ ಅವರು ನೀರು ಕೊಟ್ಟು, ಬೆಳೆ ಉಳಿಸಿಕೊಳ್ಳಲು ಸಹಕರಿಸುತ್ತಿದ್ದಾರೆ. 

Advertisement

ನೀರು ತನ್ನದಲ್ಲ, ಪ್ರಕೃತಿಯ ಕೊಡುಗೆ
ಹಲವೆಡೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಸಂದರ್ಭದಲ್ಲಿ ತನ್ನ ಜಾಗದಲ್ಲಿ ಕೊರೆಸುವ ಕೊಳವೆ ಬಾವಿಯಲ್ಲಿ ನೀರು ಸಿಕ್ಕರೆ ಬಯಸಿದವರಿಗೆ ನೀರು ಕೊಡುತ್ತೇನೆ ಎನ್ನುವ ಸಂಕಲ್ಪದೊಂದಿಗೆ ಬಾವಿ ಕೊರೆಸಿದೆ. ನೀರು ಸಾಕಷ್ಟು ದೊರಕಿತು. ಸಂಕಲ್ಪದಂತೆ ಎಲ್ಲರಿಗೂ ನೀರು ನೀಡುತ್ತಿದ್ದೇನೆ. ನೀರು ನಮ್ಮದಲ್ಲ. ಪ್ರಕೃತಿಯ ಕೊಡುಗೆ. ಪರಸ್ಪರ ಪ್ರೀತಿ ಹಂಚಿಕೊಳ್ಳುವುದೇ ಜೀವನ ,ಗ್ರಾಮ ಪಂಚಯತ್‌ನಿಂದ ನೀರಿನ ಟ್ಯಾಂಕ್‌ ನಿರ್ಮಿಸಿಕೊಡುವುದಾದರೆ ಅದಕ್ಕೂ ತಮ್ಮ ಜಾಗದಲ್ಲಿ ಅವಕಾಶ ನೀಡುವ ಕುರಿತು ಸುಂದರ ಪೂಜಾರಿ ಒಲವು ತೋರಿದ್ದಾರೆ. 

ಪ್ರಕೃತಿ ಪೂಜಕ
ಮರ ಕಡಿಯುವುದಕ್ಕೆ ಸುಂದರ ಪೂಜಾರಿ ಅವರದು ಪ್ರಬಲ ವಿರೋಧವಿದೆ. ಹಲವೆಡೆ ಮರ ಕಡಿದು ಒಂದೂ ಗಿಡ ನೆಡದೆ ಅರಣ್ಯ ನಾಶ ಮಾಡುತ್ತಿದ್ದಾರೆ. ಇದು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತದೆ ಎನ್ನುವ ಅವರು, ಜೋಡುಪಾಲ ದುರಂತಕ್ಕೂ ಪ್ರಕೃತಿಯ ಮುನಿಸೇ ಕಾರಣ. ಗುಡ್ಡ ಅಗೆದು ರಸ್ತೆ ನಿರ್ಮಾಣ ಮಾಡಿದ್ದರಿಂದ ಈ ರೀತಿಯಾಗಿದೆ ಎಂದು ಹೇಳಿದ್ದಾರೆ. 

ಪಶು ನಾಟಿ ವೈದ್ಯ
ಸುಂದರ ಪೂಜಾರಿ ಅವರು ಜಾನುವಾರಿಗಳಿಗೆ ಬಾಧಿಸುವ ಕಪ್ಪೆ, ಶೀತ, ಜ್ವರ ಸಹಿತ ಕೆಲ ರೋಗಗಳಿಗೂ ಔಷಧಿ ನೀಡುತ್ತಾರೆ. ಜತೆಗೆ ತನ್ನ ಕೃಷಿ ಭೂಮಿಗೆ ಹಟ್ಟಿ ಗೊಬ್ಬರಕ್ಕಾಗಿ ಜಾನುವಾರುಗಳನ್ನು ಸಾಕುತ್ತಿದ್ದಾರೆ. ಮನುಷ್ಯ ಇದ್ದುದರಲ್ಲೇ ತೃಪ್ತಿ ಪಟ್ಟುಕೊಂಡರೆ ಏನೂ ಸಮಸ್ಯೆಯಾಗದು. ಬಸವಣ್ಣನವರ ಮಾತಿನಂತೆ ನಾವು ಕಾಯಕವೇ ಕೈಲಾಸ ಎನ್ನುವಂತೆ ಶ್ರಮ ಪಟ್ಟು ಬದುಕು ಸಾಗಿಸಬೇಕು. ಅತಿಯಾಸೆ ಒಳ್ಳೆಯದಲ್ಲ ಎನ್ನುತ್ತಾರೆ ಅವರು.

ಮಣ್ಣಿನ ಕಟ್ಟ ನಿರ್ಮಾಣ
ಇವರು ಕಳೆದ ಬೇಸಗೆಯ ಮುನ್ನ ಕುದ್ಮಾರು, ಕಾಯಿಮಣ, ಚಾರ್ವಾಕ ಗ್ರಾಮಗಳ ಮೂಲಕ ಹಾದು ಹೋಗುವ ಬೈತಡ್ಕ ಹೊಳೆಯಲ್ಲಿ ಮಣ್ಣಿನ ಅಣೆಕಟ್ಟ ನಿರ್ಮಿಸಿ ಸುಮಾರು 3 ಕಿ.ಮೀ. ದೂರ ಹೊಳೆಯಲ್ಲಿ ನೀರು ನಿಲ್ಲುವಂತೆ ಮಾಡಿದ್ದರು. ಈ ಅಣೆಕಟ್ಟದಿಂದ ಸುಂದರ ಪೂಜಾರಿ ಅವರ ಕೃಷಿಗೂ, ಜಾಗಕ್ಕೂ ಯಾವ ಪ್ರಯೋಜನ ಇಲ್ಲದಿದ್ದರೂ ನೀರಿಂಗಿಸುವ ದೃಷ್ಟಿಯಿಂದ ಸಮಾನ ಮನಸ್ಕರ ಸಹಯೋಗದಿಂದ ಈ ಕಾರ್ಯ ಮಾಡಿದ್ದರು. ನೀರು ಜಾಸ್ತಿಯಾಗಿ ಮಣ್ಣಿನ ಕಟ್ಟಕ್ಕೆ ಅಪಾಯ ಒದಗಿ ಬಾರದಿರಲಿ ಎಂದು ಪ್ರತ್ಯೇಕವಾಗಿ ಒಂದು ತೋಡು (ಬದು) ನಿರ್ಮಿಸಿದ್ದಾರೆ. ಹೆಚ್ಚುವರಿ ನೀರನ್ನು ಅದರ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. ಅವರು ತನ್ನ ಜಮೀನಿನಲ್ಲಿ ಹಲವು ಔಷಧೀಯ ಗಿಡಗಳ ಜತೆಗೆ ತೇಗ, ಚಿರ್ಪು, ಚಲ್ಲ, ಮಹಾಗನಿ ಸಹಿತ ಹಲವು ಮರಗಳನ್ನೂ ಬೆಳೆಸಿದ್ದಾರೆ.

Advertisement

 ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next