ಅರಂತೋಡು: ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಸಂಬಂಧಪಟ್ಟ ಮತ್ಸ್ಯತಟಾಕದಲ್ಲಿರುವ ದೇವರ (ಮಹಷೀರ್) ಜಾತಿಯ ಮೀನುಗಳು ಅಳಿವಿನಂಚಿನಲ್ಲಿದ್ದು ಇವುಗಳ ಸಂರಕ್ಷಣೆಗೆ ಶಾಶ್ವತ ಯೋಜನೆಯಯೊಂದರ ಅಗತ್ಯತೆ ಕಾಡುತ್ತಿದೆ.
ತೊಡಿಕಾನ ದೇವಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಮತ್ಸ್ಯ ತೀರ್ಥ ಹೊಳೆ ಇದೆ. ಇದರಲ್ಲಿ ಸಾವಿರಾರು ಮಹಷೀರ್ ಜಾತಿಯ ಮೀನುಗಳಿದ್ದು ಇವುಗಳನ್ನು ಇಲ್ಲಿ ದೇವರ ಮೀನುಗಳೆಂದು ಕರೆಯುತ್ತಾರೆ. ಈ ಮೀನುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಮೀನುಗಳು ಸಾವನ್ನಪ್ಪುತ್ತವೆ. ನೀರಿನ ಕೊರತೆಯಿಂದ ಮೀನುಗಳು ಸಾವನ್ನಪ್ಪುವುದನ್ನು ತಪ್ಪಿಸಲು ದೇವಳದವರು ಮೀನುಗಳಿರುವ ಜಾಗದಿಂದ ಸುಮಾರು ಎರಡುವರೆ ಕಿ.ಮೀ ದೂರದ ದೇವರಗುಂಡಿ ಜಲಪಾತ ಸಮೀಪದ ಹೊಳೆಯಿಂದ ಪೈಪುಗಳ ಮೂಲಕ ನೀರು ತಂದು ಮತ್ಸ್ಯತಟಾಕಕ್ಕೆ ನೀರು ಹಾಕುವ ಕೆಲಸವನ್ನು ಬೇಸಿಗೆಯಲ್ಲಿ ಮಾಡುತ್ತಿದ್ದಾರೆ.ಇದರಿಂದ ಮೀನುಗಳ ಜೀವಕ್ಕೆ ಉಂಟಾಗುವ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.ಆದರೂ ಬೇಸಿಗೆಯಲ್ಲಿ ಉರಿ ಬಿಸಿಲ ತಾಪಕ್ಕೆ ಮೀನುಗಳು ಒಮ್ಮೊಮ್ಮೆ ಅಸುನೀಗುತ್ತಿವೆ.
ಪ್ರವಾಸೋದ್ಯಮ ಪಟ್ಟಿಯಲ್ಲಿ ಮಹಷೀರ್ ಜಾತಿಯ ಮೀನುಗಳು
ತೊಡಿಕಾನದ ದೇವರಗುಂಡಿ ಜಲಪಾತ ಮತ್ತು ಇಲ್ಲಿಯ ಮಹಷೀರ್ ಜಾತಿಯ ಮೀನುಗಳಿರುವ ಜಾಗ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಆದರೆ ಪ್ರವಾಸೋದ್ಯಮ ಇಲಾಖೆ ಇತ್ತ ಕಡೆ ಗಮನ ಹರಿಸಿ ಮೀನುಗಳ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ. ಮೀನುಗಾರಿಕೆ ಇಲಾಖೆಯೂ ಈ ಅಪರೂಪದ ಮಹಷೀರ್ ಜಾತಿಯ ಮೀನುಗಳ ಸಂರಕ್ಷಣೆಯ ಬಗ್ಗೆ ಶಾಶ್ವತ ಯೋಜನೆ ರೂಪಿಸದೆ ದಿವ್ಯ ನಿರ್ಲಕ್ಷ್ಯ ದೋರಣೆ ತಾಳಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ತೊಡಿಕಾನಕ್ಕೆ ಬೇಟಿ ನೀಡಿ ಮೀನುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಗರಿಗೆದರಿದ ಹೊಸ ಭರವಸೆ
ಈ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಂಗಾರರು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆಯ ಸಚಿವರಾಗಿ ಆಯ್ಕೆಗೊಂಡಿದ್ದು, ಇದೀಗ ಸಚಿವರು ಈ ಮಹಷೀರ್ ಜಾತಿಯ ಮೀನುಗಳನ್ನು ಸಂರಕ್ಷಣೆ ಮಾಡುವ ಯೋಜನೆಯನ್ನು ಮಂಜೂರು ಮಾಡಬಹುದೆಂದು ಭರವಸೆ ಇಟ್ಟುಕೊಂಡಿದ್ದಾರೆ. ಈ ಭರವಸೆ ಎಷ್ಟರಮಟ್ಟಿಗೆ ಈಡೇರುತ್ತದೆ ಎಂದು ಕಾದು ನೋಡಬೇಕಾಗಿದೆ.
ಈ ಮಹಷೀರ್ ಜಾತಿಯ ಮೀನುಳನ್ನು ಇಲ್ಲಿ ದೇವರ ಮೀನುಗಳೆಂದು ಕರೆಯುವುದಕ್ಕೆ ಕಾರಣವೆನೆಂದರೆ, ಇಲ್ಲಿ ವಿಷ್ಣುವು ಮತ್ಸ್ಯರೂಪ ತಾಳಿ ಮೇಲೆದ್ದ ಸ್ಥಳ ಇದಾಗಿದೆ ಎಂದು ಐತಿಹ್ಯಗಳು ಹೇಳುತ್ತವೆ. ಈ ಹಿನ್ನಲೆಯಲ್ಲಿ ಇಲ್ಲಿ ಯಾರು ಈ ಮೀನುಗಳನ್ನು ತಿನ್ನುವುದಿಲ್ಲ. ಮತ್ಸ್ಯ ತೀರ್ಥ ಹೊಳೆಯಲ್ಲಿ ಮೀನು ಹಿಡಿಯುವುದನ್ನು ನಿಷೇಧಲಾಗಿದೆ.
ಚರ್ಮ ರೋಗಕ್ಕೆ ಇಲ್ಲಿಯ ದೇವರ (ಮಹಷೀರ್ ) ಮೀನುಗಳಿಗೆ ಆಹಾರ ಹಾಕುತ್ತೆವೆ ಎಂದು ಹರಕೆ ಹೇಳಿಕೊಂಡರೆ ಅದು ಗುಣಮಖವಾಗುತ್ತದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ. ಮೀನುಗಳನ್ನು ನೋಡಲು ನೂರಾರು ಭಕ್ತರು ಪ್ರವಾಸಿ ಪ್ರೇಮಿಗಳು ದಿನ ನಿತ್ಯ ಆಗಮಿಸುತ್ತಿದ್ದಾರೆ.
ತೊಡಿಕಾನ ದೇವಳಕ್ಕೆ ಸಂಬಂಧಪಟ್ಟ ಮೀನುಗಳಿಗೆ ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಅವುಗಳ ಪ್ರಾಣಕ್ಕೆ ಸಮಸ್ಯೆ ಉಂಟಾಗುವ ವಿಷಯ ನಾನು ತಿಳಿದಿದ್ದೇನೆ. ಮೀನುಗಾರಿಕೆ ಇಲಾಖೆಯಲ್ಲಿ ಮಹಷೀರ್ ಮೀನುಗಳ ಸಂರಕ್ಷಣೆಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡಕೊಂಡು ಸೂಕ್ತ ಯೋಜನೆ ರೂಪಿಸಲಾಗುವುದು.
ಎಸ್.ಅಂಗಾರ
ಸಚಿವರು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ
ತೊಡಿಕಾನದ ದೇವಳಕ್ಕೆ ಸಂಬಂಧಟ್ಟ ದೇವರ (ಮಹಷೀರ್) ಜಾತಿಯ ಮೀನುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ಮೀನುಗಳ ಜೀವಕ್ಕೆ ಸಮಸ್ಯೆಯಾಗುತ್ತದೆ. ಇದಕ್ಕೆ ಮೀನುಗಾರಿಕಾ ಇಲಾಖೆಯಿಂದ ಶಾಶ್ವತ ಯೋಜನೆಯನ್ನು ರೂಪಿಸುವ ಅಗತ್ಯ ಇದೆ.
ಆನಂದ ಕಲ್ಲಗದ್ದೆ
ವ್ಯವಸ್ಥಾಪಕರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ