Advertisement

ಆಯುರ್ವೇದದಿಂದ ನೆಮ್ಮದಿ ಜೀವನ; ಡಾ|ಶಿವಾನಂದ

05:15 PM Jul 02, 2022 | Team Udayavani |

ಬಾಗಲಕೋಟೆ: ಇಂದಿನ ಆಧುನಿಕ ಯುಗದ ಜೀವನ ಶೈಲಿಯ ಭರಾಟೆಯಿಂದಾಗಿ ಜೀವನ ಶೈಲಿ ಹಳಿ ತಪ್ಪುತ್ತಿದೆ. ಇದರಿಂದ ರೋಗ ರುಜಿನಗಳು ಹರಡಿ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಅಧ್ಯಾತ್ಮ ಹಾಗೂ ಆಯುರ್ವೇದ ಪದ್ಧತಿಯೇ ಪರಿಹಾರ ನೀಡಬಲ್ಲದು ಎಂದು ಆಯುರ್ವೇದ ಪಂಡಿತ ಡಾ| ಶಿವಾನಂದ ರಾಥೋರ್‌ ಹೇಳಿದರು.

Advertisement

ನವನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾ ದಿನ ಹಾಗೂ ವೈದ್ಯರ ದಿನಾಚರಣೆ ನಿಮಿತ್ತ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇನ್ನರ್‌ವ್ಹಿಲ್‌ ಕ್ಲಬ್‌ ಸಹಯೋಗದಲ್ಲಿ ಆರ್ಯುವೇದ ಪದ್ಧತಿ ಮಹತ್ವ ಕುರಿತು ಅವರು ಮಾತನಾಡಿದರು.

ಮನುಷ್ಯನ ಸಕಲ ಸೌಭಾಗ್ಯಕ್ಕೂ ಆಯುರ್ವೇದ ಮದ್ದು, ಈ ದಿಸೆಯಲ್ಲಿ ಅದರತ್ತ ಆಸಕ್ತಿ ಬೆಳೆಸಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು ಹಾಗೂ ಆಧ್ಯಾತ್ಮದಿಂದ ನೆಮ್ಮದಿ ಸಾಧ್ಯ, ಅವರೆಡನ್ನು ಮೈಗೂಡಿಸಿಕೊಂಡರೆ ಪ್ರತಿಯೊಬ್ಬರು ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯನ ಆರೋಗ್ಯಕ್ಕೂ ಅಡುಗೆ ಮನೆಯೇ ಆರೋಗ್ಯ ಪಾಠ ಶಾಲೆ ಎಂದು ವಿಶ್ಲೇಷಿಸಿದ ಅವರು, ಮನೆಯಲ್ಲಿ ಅಡುಗೆಗೆ ಈ ಹಿಂದೆ ಹಿರಿಯರು ಅನುಸರಿಸುತ್ತಿರುವ ವಿಧಾನಗಳ ಅರಿವು ಹೊಂದಿ ಅವುಗಳನ್ನು ಮೈಗೂಡಿಸಿಕೊಂಡರೆ ಪ್ರತಿಯೊಬ್ಬ ಸುಖವಾಗಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದರು.

ಆಧುನಿಕ ಯುಗದ ಜೀವನ ಶೈಲಿ ಎಲ್ಲ ರೀತಿಯಿಂದಲೂ ಮನುಷ್ಯನ ಜೀವನಕ್ಕೆ ಅಪಾಯ ತಂದಿಡುತ್ತಿದೆ ಎಂದು ಎಚ್ಚರಿಸಿದ ಅವರು, ಜೀವನ ಶೈಲಿಯನ್ನು ಬದಲಿಸಿಕೊಂಡು, ಹಿಂದೆ ಹಿರಿಯರು ಅನುಸರಿಸುತ್ತಿರುವ ಆಯುರ್ವೆದ ಪದ್ಧತಿ ಹಾಗೂ ಆಧ್ಯಾತ್ಮದತ್ತ ಹೆಚ್ಚಿನ ಆಸಕ್ತಿ ತೋರಿದರೆ ಜೀವನದಲ್ಲಿ ಸಮೃದ್ಧಿ ಸಾಧಿ ಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೆಜ್ಜೆ ಇಡಬೇಕಾಗಿರುವುದು ಅಗತ್ಯವಾಗಿದೆ ಎಂದು ಡಾ| ಶಿವಾನಂದ ರಾಥೋರ್‌ ಹೇಳಿದರು.

Advertisement

ಇನ್ನರ್‌ವ್ಹಿಲ್‌ ಕ್ಲಬ್‌ ಅಧ್ಯಕ್ಷೆ ಗೀತಾ ಗಿರಿಜಾ ಮಾತನಾಡಿ, ಪತ್ರಕರ್ತರು ನಿರಂತರ ಒತ್ತಡದ ಮಧ್ಯೆಯೂ ಸಮಾಜದ ಒಳಿತಿಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ, ಅದಕ್ಕೆ ಇನ್ನರ್‌ವ್ಹಿಲ್‌ ಕ್ಲಬ್‌ ನಿರಂತರ ಸಹಕಾರ ನೀಡಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಆನಂದ ಧಲಬಂಜನ್‌ ಮಾತನಾಡಿ, ಇಂದಿನ ಎಲ್ಲ ಸಮಸ್ಯೆಗಳಿಗೂ ಅರಿವು ಇಲ್ಲದೇ ಇರುವುದು ಮುಖ್ಯವಾಗಿದೆ, ಅದಕ್ಕಾಗಿ ಈ ಹಿಂದಿನ ಹಿರಿಯರು ಅನುಸರಿಸುತ್ತಿರುವ ಆಯುರ್ವೇದ ಹಾಗೂ ಅಧ್ಯಾತ್ಮದ ಬಗ್ಗೆ ಅರಿವು ಹೊಂದುವ ಜತೆಗೆ ಜೀವನ ಶೈಲಿ ಬದಲಿಸಿಕೊಂಡು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.

ಇನ್ನರ್‌ವ್ಹಿಲ್‌ ಕ್ಲಬ್‌ ಕಾರ್ಯದರ್ಶಿ ಶೋಭಾ ಕಾಮರೆಡ್ಡಿ, ಪದಾಧಿಕಾರಿಗಳಾದ ಸುನೀತಾ ವಾಸನದ, ಅನುಷಾ ಕೋರಾ, ವೀಣಾ ವಾಘ, ಜಿಲ್ಲಾ ಕಾನಿಪ ಪ್ರಧಾನ ಕಾರ್ಯದರ್ಶಿ ಶಂಕರ ಎಸ್‌. ಕಲ್ಯಾಣಿ, ಪತ್ರಕರ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಇನ್ನರ್‌ವ್ಹಿಲ್‌ ಕ್ಲಬ್‌ದಿಂದ ಜಿಲ್ಲಾ ಕಾನಿಪ ನೂತನ ಪದಾಧಿ ಕಾರಿಗಳನ್ನು ಸನ್ಮಾನಿಸಲಾಯಿತು. ಪ್ರಕಾಶ ಗುಳೇದಗುಡ್ಡ ನಿರೂಪಿಸಿದರು. ಶ್ರೀಶೈಲ ಬಿರಾದಾರ ಸ್ವಾಗತಿಸಿದರು. ಸಂತೋಷ ದೇಶಪಾಂಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next