ಕನಕಪುರ: ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ “ಶಕ್ತಿ ಯೋಜನೆ’ ಜಾರಿಗೊಳಿಸಿದ ಬಳಿಕ ಬಸ್‌ನಲ್ಲಿ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ಇದೀಗ ಬಾಗಿಲು ಇಲ್ಲದ ಕೆಎಸ್‌ಆರ್‌ಟಿಸಿ ಬಸ್ ಚಲಿಸುತ್ತಿದ್ದಾಗ, ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ತಾಲೂಕಿನ ಕಗ್ಗಲಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಾಲೂಕಿನ ಉಯ್ಯಂ ಬಳ್ಳಿ ಹೋಬಳಿಯ ಮುಳ್ಳಹಳ್ಳಿ ನಿವಾಸಿ ಶಿವರಾಮು ಗಾಯಗೊಂಡ ವ್ಯಕ್ತಿ. ಮುಖ, ಬೆನ್ನು, ಕಾಲಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಹಾರೋಹಳ್ಳಿ ಬಳಿ ಇರುವ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾರೋಹಳ್ಳಿ ಸಾರಿಗೆ ಘಟಕದ ಕೆಎ 42 ಎಫ್ 2156 ಎಕ್ಸ್‌ಪ್ರೆಸ್ ಸಾರಿಗೆ ಬಸ್ ಡೋರ್ ಇಲ್ಲದೇ ಸಂಚರಿಸುತ್ತಿದ್ದರಿಂದ ಈ ಅವಘಡ ಸಂಭವಿಸಿದೆ.
ಮುಳ್ಳಹಳ್ಳಿ ಗ್ರಾಮದ ಶಿವರಾಮು ಅವರು ಮಂಗಳವಾರ ಬೆಂಗಳೂರಿನಿಂದ ಕನಕಪುರಕ್ಕೆ ಬರಲು ಪ್ರಯಾಣ ಬೆಳೆಸಿದ್ದರು. ಬಸ್ಸಿನ ಬಾಗಿಲಿನ ಎದುರಿನ ಸೀಟ್‌ನಲ್ಲಿ ಕುಳಿತು ನಿದ್ರೆಗೆ ಜಾರಿದ್ದರು. ಬೆಂಗಳೂರಿನಿಂದ ಹೊರಟ ಸಾರಿಗೆ ಬಸ್ಸು ಕಗ್ಗಲಿಪುರ ಠಾಣಾ ವ್ಯಾಪ್ತಿಯ ನೆಲಗುಳಿ ಗ್ರಾಮದ ಬಳಿ ಹೆದ್ದಾರಿಯ ತಿರುವಿನಲ್ಲಿ ಬರು ವಾಗ ನಿದ್ರೆಯಲ್ಲಿದ್ದ ಶಿವರಾಮು ಆಸನದಿಂದ ಉರುಳಿ ಬಿದ್ದಿದ್ದಾರೆ. ಘಟನೆಯಲ್ಲಿ ಶಿವರಾಮು ಅವರ ಕಾಲು ಬೆನ್ನು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬದಲಿ ವ್ಯವಸ್ಥೆ: ಈ ಘಟನೆ ಸಂಭವಿಸಿದ್ದಂತೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನುಳಿದ ಪ್ರಯಾಣಿಕರನ್ನು ಮತ್ತೂಂದು ಬಸ್ಸಿನಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದೆ. ಡೋರ್ ಇಲ್ಲದ ಬಸ್ ತಂದಿದ್ದ ಕಂಡಕ್ಟರ್ ಹಾಗೂ ಡ್ರೈವರ್‌ನನ್ನು ಸ್ಥಳೀಯ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಗಾಯಾಳು ಶಿವರಾಮು ಅವರನ್ನು ಸ್ಥಳದಲ್ಲಿದ್ದ ಚಲನಚಿತ್ರ ನಿರ್ದೇಶಕ ಮಾಣಿಕ್ಯ ಒಡೆಯರ್ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಕಗಲಿಪುರ ಪೊಲೀಸರು ಸಾರಿಗೆ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದಾರೆ.