ಅಂಕೋಲಾ: ತಾಲೂಕಿನ ಮಂಜಗುಣಿ-ಗಂಗಾವಳಿ ನಡುವಿನ ಸೇತುವೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣು ಸಂಪೂರ್ಣ ತೆರವುಗೊಳಿಸದ್ದರಿಂದ ಯಾಂತ್ರೀಕೃತ ದೋಣಿಯೊಂದು ಮಣ್ಣಿನಲ್ಲಿ ಸಿಲುಕಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಕಾಮಗಾರಿ ಕೈಗೊಂಡ ಕಂಪನಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2018 ರಲ್ಲಿ ಅಂದಿನ ಶಾಸಕ ಸತೀಶ ಸೈಲ್ 30 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ರೂಪಾಲಿ ನಾಯ್ಕ ಶಾಸಕರಾದ ನಂತರ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿಗಾಗಿ ಗಂಗಾವಳಿ ನದಿಗೆ ಮಣ್ಣು ಹಾಕಿ ಫಿಲ್ಲರ್ ಮಾಡಲಾಗಿತ್ತು. ಆದರೆ μಲ್ಲರ್ ಕಾಮಗಾರಿ ಮುಗಿದರೂ ಕೂಡ ಮಣ್ಣು ತೆಗೆಯದೆ ಇರುವುದರಿಂದ ಸಮಸ್ಯೆ ಉಂಟಾಗಿತ್ತು. ಸ್ಥಳೀಯರು ಸೇರಿದಂತೆ ನದಿ ತಟದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಈ ಸೇತುವೆ ಕಾಮಗಾರಿಗಾಗಿ ನದಿಗೆ ಮಣ್ಣು ಹಾಕಿದ್ದರಿಂದ ಸತತ ಮೂರು ವರ್ಷ ನೆರೆ ಉಂಟಾಗಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿದ್ದಲ್ಲದೇ ಶಿರೂರಿನಲ್ಲಿ ದೋಣಿ ಮಗುಚಿ ಇಬ್ಬರು ಮೃತಪಟ್ಟಿದ್ದರು. ಹೀಗಾಗಿ ನದಿಗೆ ಹಾಕಲಾಗಿದ್ದ ಮಣ್ಣು ತೆರವುಗೊಳಿಸುವಂತೆ ಕೆಲ ತಿಂಗಳ ಹಿಂದೆ ಮಂಜಗುಣಿ ಸೇರಿದಂತೆ ನದಿ ಅಕ್ಕ ಪಕ್ಕದ ಗ್ರಾ.ಪಂ. ವ್ಯಾಪ್ತಿಯ ಜನಪ್ರತಿನಿ ಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ತಹಶೀಲ್ದಾರ್ ಉದಯ ಕುಂಬಾರ, ಸಿಪಿಐ ಸಂತೋಷ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಮಣ್ಣನ್ನು ತೆರವುಗೊಳಿಸುವಂತೆ ಸೂಚನೆ ನೀಡುವುದರೊಂದಿಗೆ ನೋಟಿಸ್ ಕೂಡ ಜಾರಿ ಮಾಡಿದ್ದರು. ನಂತರ ಕಂಪನಿಯವರು ಮಣ್ಣು ತೆರವಿಗೆ ಮುಂದಾದರೂ ನೀರಿನ ಮೇಲ್ಭಾಗದ ಮಣ್ಣನ್ನು ಮಾತ್ರ ತೆಗೆಯಲು ಸಾಧ್ಯವಾಯಿತು. ನದಿಯಾಳದ ಮಣ್ಣನ್ನು ತೆಗೆಯಬೇಕಾದರೆ ಬಾರ್ಜ್‌ನಿಂದಲೇ ತೆಗೆಯಬೇಕು. ಹೀಗಾಗಿ ದುಬಾರಿ ವೆಚ್ಚದ ಸಬೂಬು ಹೇಳಿ ಕಂಪನಿ ಜಾರಿಕೊಂಡಿತ್ತು.
ಈ ವರ್ಷ ಘಟ್ಟದ ಮೇಲ್ಭಾಗದಲ್ಲಿ ಮಳೆ ಹೆಚ್ಚಾಗಿರದಿದ್ದರಿಂದ ನೆರೆ ಉಂಟಾಗಿಲ್ಲ. ಒಂದು ವೇಳೆ ಮಳೆ ಹೆಚ್ಚಾಗಿದ್ದರೆ ಪ್ರವಾಹ ಉಂಟಾಗುವ ಸಾಧ್ಯತೆಯಿತ್ತು. ಇದನ್ನು ಹೀಗೆ ಬಿಟ್ಟರೆ ಮುಂದೆಯೂ ಕೂಡ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೂಡಲೇ ನದಿಗೆ ಹಾಕಲಾದ ಸಾವಿರಾರು ಲೋಡ್ ಮಣ್ಣನ್ನು ತೆರವುಗೊಳಿಸಬೇಕು. ಜತೆಗೆ ಸೇತುವೆ ಕಾಮಗಾರಿಯು ಆದಷ್ಟು ಬೇಗ ಮುಗಿಯಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಅನಾಹುತ ಹೆಚ್ಚುವ ಮುನ್ನ ಮಣ್ಣು ತೆರವಾಗಲಿ
ತಾರಿ ದೋಣಿ ಗುತ್ತಿಗೆ ಪಡೆದವರು ಸ್ವಂತ ಹಣದಲ್ಲಿ ಮಂಜಗುಣಿಯಲ್ಲಿ ಸಣ್ಣ ಜಟ್ಟಿ ನಿರ್ಮಿಸಿಕೊಂಡಿದ್ದರು. ಆದರೆ ಅಮವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ನೀರು ಕಡಿಮೆಯಾಗುವುದರಿಂದ ಹಳೆಯ ಜಟ್ಟಿಯ ಮೂಲಕ ದೋಣಿಯನ್ನು ಚಲಾಯಿಸಬೇಕಾಗುತ್ತದೆ. ಎಂದಿನಂತೆ ಚಲಾಯಿಸುತ್ತಿದ್ದ ದೋಣಿ ಸೇತುವೆ ಕೆಳಗೆ ಹಾಕಲಾಗಿದ್ದ ಮಣ್ಣಿಗೆ ಸಿಲುಕಿ ಸಂಕಷ್ಟ ಎದುರಿಸುವಂತಾಯಿತು. ನೀರಿನ ರಭಸಕ್ಕೆ ಸಂಪೂರ್ಣ ಮಣ್ಣು ಕೊಚ್ಚಿ ಹೋಗಿದೆ ಎಂದು ಹೇಳುವ ಗುತ್ತಿಗೆ ಕಂಪನಿಗೆ ಈಗ ಸಾಕ್ಷé ಒದಗಿಸಿದಂತಾಗಿದೆ. ಕೆಲವೊಮ್ಮೆ ಮೀನುಗಾರಿಕೆ ದೋಣಿಗಳೂ ಕೂಡ ದಾಟದ ಪರಿಸ್ಥಿತಿಯಲ್ಲಿದೆ. ಕೂಡಲೇ ಅಧಿಕಾರಿಗಳು ಮಣ್ಣು ತೆರವಿಗೆ ಮುಂದಾಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.