ಆಳಂದ: ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ಬಳಿ ಶುಕ್ರವಾರ ಮಹಾರಾಷ್ಟ್ರ ಸಾರಿಗೆ ಬಸ್ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ಪುಣೆಯಲ್ಲಿ ರಾಜ್ಯದ ಸಾರಿಗೆ ವಾಹನಗಳ ಮೇಲೆ ಭಿತ್ತಿಪತ್ರ ಮೆತ್ತಿ ಗೂಂಡಾಗಿರಿ ಪ್ರದರ್ಶಿಸಿದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಕನ್ನಡ ವಿರೋಧಿ ನೀತಿ ಖಂಡಿಸಿ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಡಿವಾಳಪ್ಪ ನಿಂಬಿತೋಟ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಗಡಿವಿವಾದಕ್ಕೆ ಸಂಬಂಧಿಸಿದಂತೆ ಪುಣೆಯಲ್ಲಿ ಕರ್ನಾಟಕದ ಬಸ್‌ಗಳ ಮೇಲೆ ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ ಮಹಾರಾಷ್ಟ್ರದ ಭಾಗಗಳು ಎಂದು ಭಿತ್ತಿ ಪತ್ರಹಚ್ಚಿ ಗೂಂಡಾಗಿರಿ ಪ್ರದರ್ಶಿಸಿದ ಎನ್ ಸಿಪಿಯ ಕನ್ನಡ ವಿರೋಧಿ ನೀತಿಗೆ ಕಾರ್ಯಕರ್ತರು ಪ್ರತ್ಯುತ್ತರವಾಗಿ ಮಹಾರಾಷ್ಟ್ರದ ಬಸ್‌ಗೆ ಮಸಿ ಬಳಿದರು. ಅಲ್ಲದೇ, ಭಿತ್ತಿಪತ್ರ ಹಚ್ಚಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿ ಸಿದ ಪುಸ್ತಕದ ಮುಖಪುಟಕ್ಕೂ ಮಸಿ ಬಳಿದರು.
ಇದೇ ವೇಳೆ ಮಾತನಾಡಿದ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ, ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆ ಹತ್ತಿರ ಬಂದಾಗಲೊಮ್ಮೆ ಮಹಾರಾಷ್ಟ್ರದಲ್ಲಿ
ಶಿವಸೇನೆ ಮತ್ತು ಎನ್‌ಸಿಪಿ ಗಡಿ ವಿವಾದದ ಹೆಸರಿನಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಬರುತ್ತಿವೆ ಎಂದು
ಖಂಡಿಸಿದರು.
ಸೇನೆಯ ತಾಲೂಕು ಅಧ್ಯಕ್ಷ ಮಡಿವಾಳ ನಿಂಬಿತೋಟ, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ಕೋಟೇಶ ರಾಠೊಡ, ಮಹೇಶ ಹಿರೋಳಿ, ಶರಣು ಮುನೋಳ್ಳಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಶಿವಸೇನೆ-ಎನ್‌ಸಿಪಿ ಸ್ಪರ್ಧೆಗೆ ಅವಕಾಶ ನೀಡಬೇಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಮಹಾಜನ್ ವರದಿ ಜಾರಿಗೆ ಬಂದಾಗಿನಿಂದ ಮಾಡಲಾಗುತ್ತಿದೆ. ಆದರೆ ಸೂರ್ಯ, ಚಂದ್ರರು ಇರುವ ವರೆಗೂ ಬೆಳಗಾವಿಯ ಹಿಡಿ ಮಣ್ಣು ಮುಟ್ಟಲು ಸಾಧ್ಯವಿಲ್ಲ. ಬೆಳಗಾವಿ ಉಳಿವಿಗೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಿದ್ದೇವೆ. ಕರ್ನಾಟಕ ಸರ್ಕಾರಕ್ಕೆ ಸ್ವಾಭಿಮಾನವಿದ್ದರೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆ ಮತ್ತು ಎನ್‌ಸಿಪಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಸೇನೆಯ ಕಾರ್ಯಕರ್ತರು ಸ್ಪರ್ಧಿಸುವ ಅಭ್ಯರ್ಥಿಗಳ ಮುಖಕ್ಕೆ ಮಸಿ ಬಳಿದು ಪ್ರತಿಭಟಿಸಲು ತೀರ್ಮಾನಿಸಿದ್ದಾರೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ಹೇಳಿದರು.