ಬಳಗಾನೂರು: ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶನಿವಾರ ಸಾಯಂಕಾಲ ಸುರಿದ ಭಾರಿ ಮಳೆಗೆ ರೈತರು ಬೆಳೆದ ಆರ್‌ಎನ್‌ಆರ್ ತಳಿಯ ಭತ್ತದ ಬೆಳೆ ನೆಲಕ್ಕುರುಳಿವೆ.
ಶನಿವಾರ ಸಾಯಂಕಾಲ ಏಕಾಏಕಿ ಸುರಿದ ಮಳೆಗೆ ತೆನೆಬಿಚ್ಚಿ ಹಾಲುತುಂಬಿದ ಭತ್ತ ನೆಲಕ್ಕೂರುಳಿದೆ. ಇದರಿಂದಾಗಿ ರೈತರು ಮತ್ತೆ ಸಂಕಷ್ಟಕ್ಕಿಡಾಗಿದ್ದಾರೆ. ತೊಗರಿ ಹೂಬಿಟ್ಟು ಕಾಳುಕಟ್ಟುವ ಹಂತದಲ್ಲಿ ಮಳೆಯಿಂದಾಗಿ ಫಲ ಉದುರಿ ಹಾನಿಯಾಗಿದೆ.
ಮೆಣಸಿನಕಾಯಿ, ಹತ್ತಿ, ಜೋಳ ಸೇರಿ ಇತರೆ ಬೆಳೆಗಳಿಗೂ ಮಳೆ ಹಾನಿಯುಂಟು ಮಾಡಿದೆ. ಭತ್ತದ ಬೆಳೆ ನಿರ್ವಹಣೆಗಾಗಿ ಈ ಬಾರಿಯೂ ರೈತರು ದುಬಾರಿ ರಸಗೊಬ್ಬರ ಹಾಗೂ ಕೂಲಿಕಾರರ ಸಮಸ್ಯೆ ಎದುರಿಸಿ ಬೆಳೆದ ಭತ್ತದ ಬೆಲೆ ಕಾಳು ಕಟ್ಟುವ ಹಂತದಲ್ಲಿ ಹಾಗೂ ಮತ್ತು ಕೆಲ ದಿನಗಳಲ್ಲಿ ಕಟಾವಿಗೆ ಬರಬಹುದಾಗಿದ್ದ ಭತ್ತ ಮಳೆಯ ಹೊಡೆತಕ್ಕೆ ನೆಲಕ್ಕೂರುಳಿದ್ದು, ಇಳುವರಿ ತೀವ್ರ ಕಡಿಮೆಯಾಗಲಿದೆ.
ಮನೆಗಳಿಗೆ ನುಗ್ಗಿದ ಮಳೆನೀರು
ಪಟ್ಟಣದ 6ನೇ ವಾರ್ಡ್ ಸೇರಿ ಇತರೆ ವಾರ್ಡ್‌ಗಳಲ್ಲಿ ಚರಂಡಿಯಲ್ಲಿ ಹೂಳು ತುಂಬಿ ಮಳೆನೀರು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಜನತೆ ಪರದಾಡುವಂತಾಗಿದೆ. 8ನೇ ವಾರ್ಡನಲ್ಲಿ ಕಂಠಿದುರುಗಮ್ಮನ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ ನೀರು ನಿಂತು ಜನರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದರು.
ಪಪಂ ಸಿಬ್ಬಂದಿ ಚರಂಡಿ ಹೂಳೆತ್ತದೆ ಬೇಕಾಬಿಟ್ಟಿ ಕೆಲಸ ನಿರ್ವಹಿಸಿ ಕಾಲಹರಣ ಮಾಡುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಚರಂಡಿಯಲ್ಲಿ ಹೂಳು ತುಂಬಿ ಚರಂಡಿ ಇರುವ ಕುರುಹು ಸಹ ಉಳಿದಿಲ್ಲ ಎಂದು ವಾರ್ಡಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.