ಬೆಂಗಳೂರು: ಹತ್ತು ಅಡಿ ಎತ್ತರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕಮಗಳೂರು ಮೂಲದ ವೆಂಕಟೇಶ್ ಮತ್ತು ಜ್ಯೋತಿ ದಂಪತಿಯ ಒಂದೂವರೆ ವರ್ಷದ ಮಗು ನಿಮ್ಹಾನ್ಸ್‌ನಲ್ಲಿ ಬೆಡ್ ಸಿಗದೆ ಮೃತಪಟ್ಟಿದೆ. ಆಸ್ಪತ್ರೆಯ ವೈದ್ಯರು ಸೂಕ್ತ ಕಾಲಕ್ಕೆ ಬೆಡ್ ನೀಡದೆ, ನಿರ್ಲಕ್ಷ್ಯ ತೋರಿದ್ದಾರೆ. ಅದರಿಂದಲೇ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಆಸ್ಪತ್ರೆ ಮುಂಭಾಗ ಮಗುವಿನ ಪೋಷಕರು ಹಾಗೂ ಸಂಬಂಧಿ ಕರು ಪ್ರತಿಭಟನೆ ನಡೆಸಿದರು.
ಕೂಡಲೇ ವಿಷಯ ತಿಳಿದ ಸಿದ್ದಾಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಪರಿಸ್ಥಿತಿ ತಿಳಿಗೊಳಿಸಿದರು.
ವೆಂಕಟೇಶ್ ದಂಪತಿ ಮಗು ಮಂಗಳವಾರ ಆಟವಾಡುವಾಗ ಹತ್ತು ಅಡಿ ಎತ್ತರದಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹಾಸನದ ಪ್ರತಿಷ್ಠಿತ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಸಹಕಾರಿಯಾಗದೆ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮಾಹಿತಿ ನೀಡಿ ಹಾಸನದಿಂದ ಝೀರೋ ಟ್ರಾಫಿಕ್‌ನಲ್ಲೇ ಮಗುವನ್ನು ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿತ್ತು. ಆದರೆ, ಆಸ್ಪತ್ರೆಗೆ ಬಂದಾಗ ಬೆಡ್ ಖಾಲಿ ಇಲ್ಲ ಎಂದು ಸೂಕ್ತ ಚಿಕಿತ್ಸೆ ನೀಡಿಲ್ಲ. ಹೀಗಾಗಿ ಮಗು ಮೃತಪಟ್ಟಿತ್ತು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಈ ಸಂಬಂಧ ಮೆಡಿಕೊ ಲೀಗರ್ ಕೇಸ್(ಎಂಎಲ್‌ಸಿ) ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.