ಬೆಂಗಳೂರು: ಕ್ಯಾಂಟರ್ ವಾಹನದ ಚಕ್ರ ಹರಿದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಯಚೂರು ಮೂಲದ ಮಾಳಪ್ಪ ಮತ್ತು ಚಂದ್ರಕಲಾ ದಂಪತಿ ಪುತ್ರಿ ಸಪ್ತಾ ಮೃತ ಮಗು.
ಕೊಪ್ಪ-ಬೇಗೂರು ರಸ್ತೆಯಲ್ಲಿ ಇರುವ ಹಾಲೋ ಬ್ಲಾಕ್ ಇಟ್ಟಿಗೆ ತಯಾರಿ ಸುವ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮಾಳಪ್ಪ ದಂಪತಿ ಈ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಮಗುವಿನೊಂದಿಗೆ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿದ್ದಾರೆ. ಮಂಗಳವಾರ ಮುಂಜಾನೆ ದಂಪತಿ ಎಂದಿನಂತೆ ಕಾರ್ಖಾನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಅಲ್ಲೇ ಸಮೀಪದಲ್ಲಿ ತಮ್ಮ ಒಂದೂವರೆ ವರ್ಷದ ಮಗು ಸಪ್ತಾ ಆಟವಾಡುತ್ತಿದ್ದಳು. ಇದೇ ಸಮಯಕ್ಕೆ ಇಟ್ಟಿಗೆ ಲೋಡ್ ಮಾಡಿಕೊಂಡು ಹೋಗಲು ಬಂದಿದ್ದ ಕ್ಯಾಂಟರ್ ವಾಹನದ ಚಕ್ರ ಮಗುವಿನ ಮೇಲೆ ಉರುಳಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕ್ಯಾಂಟರ್ ವಾಹನವನ್ನು ಜಪ್ತಿ ಮಾಡಿದ್ದಾರೆ. ಕೃತ್ಯ ಎಸಗಿದ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.