ಸಾಗರ: ತಾಲೂಕಿನ ಕಸಬಾ ಹೋಬಳಿ ಚಿಕ್ಕನೆಲ್ಲೂರು ಮತ್ತು ಚಕ್ಕೋಡು ಗ್ರಾಮದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಅರಣ್ಯ ಇಲಾಖೆ ಮೀಸಲು ಅರಣ್ಯ ಹೆಸರಿನಲ್ಲಿ ನೋಟಿಸ್ ನೀಡುತ್ತಿರುವುದನ್ನು ಖಂಡಿಸಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ರಾಜ್ಯ ಸರ್ಕಾರ ಮಲೆನಾಡಿನ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ವಿಷ ಕೊಡುವ ಕೆಲಸ ಮಾಡುತ್ತಿದೆ. ಮೀಸಲು ಅರಣ್ಯ ಹೆಸರಿನಲ್ಲಿ ರೈತರ ನೆತ್ತಿಯ ಮೇಲೆ ಕಾಲು ಇರಿಸುವ ಪ್ರಯತ್ನ ನಡೆಸುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಜನರಿಂದ ಆರಿಸಿ ಹೋಗಿರುವ ಶಾಸಕರು ತಾಲೂಕಿನ ಬಹುತೇಕ ಗ್ರಾಮಗಳ ರೈತರಿಗೆ ಮೀಸಲು ಅರಣ್ಯ ಹೆಸರಿನಲ್ಲಿ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದ್ದರೂ ಮೌನವಾಗಿರುವುದು ದುರಂತದ ಸಂಗತಿ. ಸದನದಲ್ಲಿ ರೈತರ ಸಮಸ್ಯೆ ಕುರಿತು ಮಾತನಾಡುವ ಶಕ್ತಿ ಯಾರಿಗೂ ಇಲ್ಲವಾಗಿದೆ ಎಂದು ಹೇಳಿದರು.
ಸರ್ಕಾರಕ್ಕೆ ಮಲೆನಾಡು ಜನರ ಮೇಲೆ ಏಕೆ ಕಣ್ಣು ಎನ್ನುವುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಕ್ಷೇತ್ರದ ಜನರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿ, ಮೀಸಲು ಅರಣ್ಯ ಎಂದು ಬಿಡಿಸಿಕೊಂಡು ಕಾಡು ರಕ್ಷಣೆ ಮಾಡಲಿ. ಜನವಸತಿ ಇರುವ ಪ್ರದೇಶವನ್ನು ಅರಣ್ಯ ಎಂದು ಘೋಷಣೆ ಮಾಡಿರುವ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದೆ. ನೋಟಿಸ್ ಕೊಡುವುದನ್ನು ಕೈಬಿಡದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಚಿಕ್ಕನೆಲ್ಲೂರು ಮತ್ತು ಚಕ್ಕೋಡು ಗ್ರಾಮದ ಸರ್ವೇ ನಂ. 28 ಮತ್ತು 37 ರಲ್ಲಿ ಸಾಗುವಳಿ ಮಾಡುತ್ತಿರುವ78 ಜನರಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ರೈತರ ಪರವಾಗಿ ನಿಲ್ಲಬೇಕಾಗಿದ್ದ ಶಾಸಕರು ಬಾಯಿ ಮುಚ್ಚಿಕೊಂಡಿದ್ದಾರೆ. ಪರಿಸ್ಥಿತಿ ಕೇಳಲು ಜಿಲ್ಲಾಧಿಕಾರಿಗಳಿಗೆ ಪುರುಸೊತ್ತಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನದಲ್ಲಿ ಮೂರು ಸಾರಿ ಪ್ರತಿಭಟನೆ ಮಾಡಲಾಗಿದೆ. ಆದರೂ ನೋಟಿಸ್ ನೀಡುತ್ತಿರುವುದು ನಿಂತಿಲ್ಲ. ನೋಟಿಸ್ ಕೊಡುವುದನ್ನು ನಿಲ್ಲಿಸದೆ ಹೋದಲ್ಲಿ ಜೈಲಿಗೆ ಹೋದರೂ ಪರವಾಗಿಲ್ಲ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಹತ್ತು ಸಾವಿರಕ್ಕೂ ಹೆಚ್ಚಿನ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಹೊಳೆಯಪ್ಪ, ಜ್ಯೋತಿ ಕೋವಿ, ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ, ಮಹಾಬಲ ಕೌತಿ, ದೇವರಾಜ್, ಲಕ್ಷ್ಮಣಪ್ಪ, ಅಣ್ಣಪ್ಪ, ರಾಜಪ್ಪ, ಸಣ್ಣಪ್ಪ, ಸಿ.ಎನ್.ನಾಗಪ್ಪ, ಮಂಜಪ್ಪ, ವೀರೇಂದ್ರ, ಕನ್ನಪ್ಪ, ಕೆ.ಸಿದ್ದಪ್ಪ ಹಾಗೂ ಚಿಕ್ಕನೆಲ್ಲೂರು ಮತ್ತು ಚಕ್ಕೋಡು ಗ್ರಾಮಸ್ಥರು ಹಾಜರಿದ್ದರು.