ಅಬುಜಾ(ನೈಜೀರಿಯಾ): ಗಿನ್ನಿಸ್ ವಿಶ್ವ ದಾಖಲೆ ಬರೆಯಲು ಬಹುತೇಕ ಮಂದಿ ಪ್ರಯತ್ನಿಸುತ್ತಿರುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ನೈಜೀರಿಯಾದ ಬಾಣಸಿಗಳಾದ ಹಿಲ್ಡಾ ಎಫಿಯಾಂಗ್ ಬಸ್ಸಿ ಎಂಬಾಕೆ ಸತತ 100 ಗಂಟೆಗಳ ಕಾಲ ಯಾವುದೇ ವಿಶ್ರಾಂತಿ ಪಡೆಯದೇ ಅಡುಗೆಯನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:Hit And Run: ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ; 6 ಮಹಿಳಾ ಕಾರ್ಮಿಕರು ಮೃತ್ಯು
ಸಾಮಾಜಿಕ ಜಾಲತಾಣದಲ್ಲಿ ಹಿಲ್ಡಾ ಬಾಸಿ ಎಂದು ಜನಪ್ರಿಯರಾಗಿದ್ದ ಈಕೆ ಗುರುವಾರ ಅಡುಗೆಯನ್ನು ಮಾಡಲು ಆರಂಭಿಸಿದ್ದು, ಸೋಮವಾರದವರೆಗೂ ಸತತ 100 ಗಂಟೆಗಳ ಕಾಲಾವಧಿಯಲ್ಲಿ 55ಕ್ಕೂ ಹೆಚ್ಚು ರೆಸಿಪಿಗಳು ಹಾಗೂ 100ಕ್ಕೂ ಅಧಿಕ ಊಟವನ್ನು ತಯಾರಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.
ನಾಲ್ಕು ದಿನಗಳ ಕಾಲ ಹಿಲ್ಡಾ ಹಲವಾರು ಬಗೆಯ ನೈಜೀರಿಯನ್ ರೆಸಿಪಿಗಳನ್ನು ತಯಾರಿಸಿದ್ದರು. ಹಿಲ್ಡಾ ಅವರಿಗೆ ನೈಜೀರಿಯನ್ ಕಲಾವಿದರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದ್ದರು.
ನಿನ್ನ ಸಾಹಸಕ್ಕೆ ಇಡೀ ನೈಜೀರಿಯಾವೇ ನಿನ್ನೊಂದಿಗೆ ಇದೆ ಎಂದು ನಟಿ, ಮಹಿಳಾ ಉದ್ಯಮಿ ಬಕ್ಕೈ ರೈಟ್ ಇನ್ಸ್ ಟಾಗ್ರಾಮ್ ನಲ್ಲಿ ಸಂದೇಶ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಭಾರತದ ಬಾಣಸಿಗರಾದ ಲತಾ ಟಂಡನ್ ಅವರು 87ಗಂಟೆ 45 ನಿಮಿಷಗಳ ಕಾಲ ನಿರಂತರವಾಗಿ ಅಡುಗೆ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದರು. ಇದೀಗ 100ಗಂಟೆಗಳ ಕಾಲ ಸತತವಾಗಿ ಅಡುಗೆ ಮಾಡಿ ದಾಖಲೆ ಬರೆದಿರುವ ಹಿಲ್ಡಾ ಅವರಿಗೆ ಟಂಡನ್ Instagramನಲ್ಲಿ ಸಂದೇಶವನ್ನು ಕಳುಹಿಸಿದ್ದು, ಶೀಘ್ರದಲ್ಲೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಅಧಿಕೃತ ಸೈಟ್ ನಲ್ಲಿ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಸತತ 100 ಗಂಟೆಗಳ ಕಾಲ ಅಡುಗೆ ಮಾಡಿರುವ ಹಿಲ್ಡಾ ಅವರು ಗಿನ್ನೆಸ್ ವಿಶ್ವ ದಾಖಲೆ ಸಮಿತಿಯ ಅಧಿಕೃತ ಘೋಷಣೆಗಾಗಿ ಕಾಯುತ್ತಿರುವುದಾಗಿ ವರದಿ ವಿವರಿಸಿದೆ.