Advertisement

Dr. Umesh Jadhav; ಮಾರ್ಚ್ 9ಕ್ಕೆ ಕಲಬುರಗಿ – ಬೆಂಗಳೂರು ನಡುವೆ ನೂತನ ರೈಲು ಶುಭಾರಂಭ

06:12 PM Mar 04, 2024 | Team Udayavani |

ಕಲಬುರಗಿ: ಬೆಂಗಳೂರು – ಕಲಬುರಗಿ ನಡುವೆ ಪ್ರತ್ಯೇಕ ರೈಲು ಬೇಕೆಂಬ ದಶಕಗಳ ಬೇಡಿಕೆಯು ಕೊನೆಗೂ ಈಡೇರಿದಂತಾಗಿದೆ. ಇದೇ ಮಾರ್ಚ್ 9ರಂದು ಕಲಬುರಗಿಯಿಂದ ನೂತನ ರೈಲು ಸಂಚಾರ ಪ್ರಾರಂಭವಾಗಲಿದೆ ಎಂದು ಸಂಸದರಾದ ಡಾ. ಉಮೇಶ್ ಜಿ ಜಾಧವ್ ತಿಳಿಸಿದ್ದಾರೆ.

Advertisement

ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಇಂದು (ಮಾರ್ಚ್  4ರಂದು) ರೈಲು ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಮಾರ್ಚ್ 9ರಂದು ಶನಿವಾರ ಸಾಯಂಕಾಲ 5 ಗಂಟೆಗೆ ಕಲಬುರಗಿ- ಬೆಂಗಳೂರು ನೂತನ ರೈಲು ಸಂಚಾರ ಶುಭಾರಂಭಗೊಳ್ಳಲಿದೆ ಎಂದು ಜಾಧವ್ ತಿಳಿಸಿದ್ದಾರೆ.

ವಾರದಲ್ಲಿ ಒಂದು ದಿನ ಮಾತ್ರ ಸಂಚಾರಕ್ಕೆ ರೈಲು ಇಲಾಖೆ ಮೊದಲು ಅನುಮತಿ ನೀಡಿದ್ದು, ರೈಲ್ವೆ ಸಚಿವರ ಜೊತೆ ಮಾತುಕತೆಯ ನಂತರ ಈ ನಿರ್ಧಾರವನ್ನು ಬದಲಿಸಿ ಸದ್ಯ ವಾರಕ್ಕೆ ಮೂರು ದಿನ ಸಂಚರಿಸುವಂತೆ ರೈಲ್ವೆ ಸಚಿವರು ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿರುವುದಾಗಿ ಜಾಧವ್ ಹೇಳಿದರು.

ಕಳೆದ ಹಲವಾರು ದಶಕಗಳಿಂದ ಈ ಬೇಡಿಕೆ ಜೀವಂತವಾಗಿದ್ದು ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆಗೆ ನಿರಂತರ ಮಾತುಕತೆ ಮತ್ತು ಒತ್ತಡ ಹಾಕಿದ ಪರಿಣಾಮವಾಗಿ ಕಲಬುರಗಿ ಜನತೆಯ ಸುದೀರ್ಘ ಕಾಲದ ಬೇಡಿಕೆ ಈಡೇರಿದೆ. ಇದೇ ಮೊಟ್ಟ ಮೊದಲ ಬಾರಿಗೆ ಕಲಬುರಗಿಯಿಂದ ಬೆಂಗಳೂರಿಗೆ ನೇರವಾಗಿ ರೈಲು ಸಂಚಾರ ಪ್ರಾರಂಭಗೊಳ್ಳುತ್ತಿರುವುದು ಇತಿಹಾಸ ಮತ್ತು ಈ ಭಾಗದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲು ಎಂದು ವಿವರಣೆ ನೀಡಿದ್ದಾರೆ.

ಈ ರೈಲು ಗಾಡಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಗಮನಿಸಿಕೊಂಡು ರೈಲ್ವೆ ಇಲಾಖೆಯು ಏಪ್ರಿಲ್ 5ರಿಂದ ವಾರಕ್ಕೆ ಮೂರು ದಿನ ಸಂಚಾರ ನಡೆಸಲು ಒಪ್ಪಿಕೊಂಡಿದೆ. ಈ ಭಾಗದ ಪ್ರಯಾಣಿಕರು ಈ ರೈಲುಗಾಡಿಯಲ್ಲಿ ಸಂಚರಿಸಿ ನಿತ್ಯ ಸಂಚಾರ ನಡೆಸುವಂತಾಗಲು ಸಹಕರಿಸಬೇಕು ಎಂದು ಜಾಧವ್ ಮನವಿ ಮಾಡಿದರು.

Advertisement

ಕಲಬುರಗಿ –  ಬೈಯ್ಯಪ್ಪನಹಳ್ಳಿ ಮಧ್ಯೆ ಓಡಾಟ: ನೂತನ ಕಲಬುರ್ಗಿ – ಬೆಂಗಳೂರು ರೈಲು ಗಾಡಿಯು ಕಲಬುರ್ಗಿಯಿಂದ ಸಾಯಂಕಾಲ 5 ಗಂಟೆಗೆ ಹೊರಟು ಮರುದಿನ ಮುಂಜಾನೆ 4:15 ಗಂಟೆಗೆ ಬೆಂಗಳೂರು ಸಮೀಪದ ಬೈಯ್ಯಪ್ಪನಹಳ್ಳಿ ಅತ್ಯಾಧುನಿಕ ಮತ್ತು ಸುಸಜ್ಜಿತವಾಗಿ ನಿರ್ಮಾಣಗೊಂದಿರುವ ಸರ್.ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ತಲುಪಲಿದೆ.

ಮಾರ್ಚ್ 9ರಂದು ಸಾಯಂಕಾಲ 5 ಗಂಟೆಗೆ ಕಲಬುರ್ಗಿಯಲ್ಲಿ ರೈಲು ಸಂಚಾರದ ಉದ್ಘಾಟನೆಯಾಗಲಿದ್ದು ಕಲಬುರಗಿ ವಿಭಾಗದ ಜನರು ಈ ಶುಭಾರಂಭ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಬೇಕು ಎಂದು ಜಾಧವ್ ಕರೆ ನೀಡಿದ್ದಾರೆ.

ವಚನ ಪಾಲನೆ -: ಸುಧೀರ್ಘ ಪ್ರಯತ್ನದ ಫಲವಾಗಿ ಕಲಬುರಗಿ ಲೋಕಸಭಾ ಕ್ಷೇತ್ರದ ಜನತೆಯ ದಶಕಗಳ ಕನಸು ಸಾಕಾರಗೊಳ್ಳುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಪ್ರಾಮಾಣಿಕವಾಗಿ ಒಂದೊಂದಾಗಿ ಈಡೇರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿ ವಿಶ್ವಾಸವನ್ನು ಗಳಿಸಿರುವುದಕ್ಕೆ ಸಂತಸವಾಗುತ್ತಿದೆ. ಈ ಭಾಗದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ  ಪ್ರಧಾನಿ  ನರೇಂದ್ರ ಮೋದಿ ಮತ್ತು ರೈಲ್ವೆ ಖಾತೆಯ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುವುದಾಗಿ ಸಂಸದ ಜಾಧವ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next